ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಸ್ಮರಣೋತ್ಸವ

ಹಾವೇರಿ:

    ಅರ್ಚನೆ ಮಾಡಬೇಕಾದರೆ ಅರಿವು ಬೇಕು. ಅರಿವಿನ ದೀಪ ಹಿಡಿದುಕೊಂಡವ ಅನುಭಾವವನ್ನು ಹುಡುಕುತ್ತಾ ಹೋಗಬೇಕು. ಅಂತರಾಳದಲ್ಲಿ ಅರಿವಿನ ಜ್ಯೋತಿ ಹೊತ್ತಿಸಿಕೊಂಡಾಗ ಮಾತ್ರ ಅನುಭವದ ಜೀವನ ನಮ್ಮದಾಗುತ್ತದೆ ಎಂದು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

     ನಗರದ ಬಸವ ಕೇಂದ್ರ ಶ್ರೀ ಹೊಸಮಠದಲ್ಲಿ ಲಿಂ. ಜಗದ್ಗುರು ಶ್ರೀ. ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಸ್ಮರಣೋತ್ಸವ ನಿಮಿತ್ತ  ಶರಣ ಸಂಸೃತಿ ಉತ್ಸವ-2018 ರ ಆರದಿರಲಿ ಅರಿವಿನ ದೀಪ ಅರುಳಿತಿರಲಿ ಅನುಭವ ಪುಷ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಯಾವ ವ್ಯಕ್ತಿ ಜೀವನದಲ್ಲಿ ಅತೀ ಹೆಚ್ಚು ಅನುಭವಗಳನ್ನು ಪಡೆಯುತ್ತಾನೆ ಅವನು ಅನುಭಾವಿಯಾಗುತ್ತಾನೆ. ಪಕ್ವ ಹೃದಯಿಗಳು ನಾವಾಗಬೇಕು. ಇದು ನಮಗೆ ಸಂತೋಷ ನೀಡಿದರೆ ಅಪಕ್ವ ಹೃದಯ ಅನಾಹುತಗಳನ್ನು ಹುಟ್ಟು ಹಾಕುತ್ತವೆ ಬದುಕನ್ನು ನಾಶಗೊಳಿಸುತ್ತವೆ. ವ್ಯಕ್ತಿ ಜೀವನದಲ್ಲಿ ಅನುಭವಗಳನ್ನು ಹುಡುಕುತ್ತಾ ಸಾಗಬೇಕು. ಅಂತಹ ವ್ಯಕ್ತಿಯ ಜೀವನದಲ್ಲಿ ಚಂಚಲತೆಯಾಗಲಿ ಜಂಜಾಟವಾಗಲಿ ಮಂಗನಾಟವಾಗಲಿ ಇರುವುದಿಲ್ಲ ಹೀಗಾಗಿ ಅರಿವಿನ ಶ್ರೀಮಂತಿಕೆ ಎಲ್ಲರೂ ಪಡೆಯಬೇಕು. ಆತ್ಮ ಸಾಕ್ಷಿ ಎಂಬುವುದನ್ನು ನಾನು ನಂಬುವುದಿಲ್ಲ ಇದಕ್ಕೆ ಪರ್ಯಾಯ ಪದವಾಗಿ ಅತಃ ಸಾಕ್ಷಿ ಪದಬಳಕೆ ಮಾಡುವುದಕ್ಕೆ ಇಷ್ಟಪಡುತ್ತೇನೆ ಎಂದರು.

       ಬಸವಾದಿ ಶಿವಶರಣರು ಅರಿವಿನ ಜ್ಯೋತಿಯ ಆರಾಧಕರು, ಅನ್ವೇಷಕರು, ಬೆಳಕಿನ ಅನ್ವೇಷಣೆಯೊಂದಿಗೆ ಜೀವನ ಸಾಗಿಸಿದವರು. ಅವರು ಹೊತ್ತಿಸಿದ ಜ್ಯೋತಿಯ ಪ್ರಕಾಶನವನ್ನು ಎಲ್ಲರೂ ಆಂತರ್ಯದಲ್ಲಿ ಅಳವಡಿಸಿಕೊಳ್ಳಬೇಕಿದೆ. ಬಂಡವಾಳಶಾಹಿಗಳಗಿಂತ ನಮ್ಮ ದೇಶಕ್ಕೆ ಹೃದಯವಂತರಿಂದ ಸಮೃದ್ಧವಾಗಬೇಕಾಗಿದೆ. ಇಂತಹ ದೇಶದಲ್ಲಿ ಅನೇಕ ಮಹಿಳೆಯರು ಕೆಲವು ಧರ್ಮಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತವಾಗಿದ್ದಾರೆ. ಸಂಸತ್ತಿನಲ್ಲಿ ಮಹಿಳೆಗೆ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ. ಆದರೆ 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪ್ರಪ್ರಥಮ ಭಾರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ್ದಲ್ಲದೇ ಅವರು ವಿಚಾರಗಳನ್ನು ಹಂಚಿಕೊಳ್ಳಲು ಸ್ವಾತಂತ್ರ್ಯರಾಗಿದ್ದರು ಎಂದರು.

        ಅಖಿತ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಬಸವರಾಜ ಸಾದರ ಮಾತನಾಡಿ, ದೀಪದ ಪಣತಿಯನ್ನು ಇನ್ನೊಂದು ಪಣತಿಯೊಂದಿಗೆ ಜೋಡಿಸಿದರೆ ಅದು ಜ್ಯೋತಿಯಾಗುತ್ತದೆ. ಅದೇ ದೀಪದ ಪಣತಿಯನ್ನು ಹುಲ್ಲಿನ ಬಣಮೆಗೆ ಹಚ್ಚಿದರೆ ಅದು ಬೆಂಕಿಯಾಗುತ್ತದೆ. ಶರಣರು ದೀಪವನ್ನು ಜ್ಯೋತಿಯಾಗಿ ಅಂಧಕ್ಕಾರವನ್ನು ಹೋಗಲಾಡಿಸಲು ಬಳಕೆ ಮಾಡಿದರೆ ಮೂರ್ಖರು ಅದನ್ನು ಬೆಂಕಿಯಾಗಿ ಬಳಸುತ್ತಾರೆ ಎಂದರು.

      ರಾಜಪ್ರಭುತ್ವ ಪದ್ಧತಿಯಲ್ಲಿ ತಮ್ಮ ಸ್ವಾಥ್ರ್ಯಕ್ಕಾಗಿ ಜಾತಿ ಪದ್ಧತಿ ಹುಟ್ಟು ಹಾಕಿ ಜನರನ್ನು ಶೋಷಣೆ ಮಾಡಿದರು. ವಚನಕಾರರ ಹಲವಾರು ವಚನಗಳನ್ನು ಗಮನಿಸಿದರೆ ಅದರಲ್ಲಿ ಸಮಾಜದಲ್ಲಿ ನಡೆಯುವ ಶೋಷಣೆಯನ್ನು ಪ್ರಶ್ನಿಸಿದ್ದಾರೆ. ಪ್ರತಿಭಟನೆ ಮಾಡಿದ್ದಾರೆ. ನಿರಾಕರಣೆ ಮಾಡಿದ್ದಾರೆ ಅಲ್ಲದೇ ಪರ್ಯಾಯ ಮಾರ್ಗಗಳನ್ನು ಸೂಚಿಸಿದ್ದಾರೆ. ಇದನ್ನೆ ಹಿಂದೆ ಅರಿತು ಮುಂದೆ ನಡಿ ಎಂದು ಹಿರಿಯರು ಹೇಳಿದಂತೆ ಇದನ್ನರಿಯದವನು ಮುಂದೇನು ಮಾಡಲು ಸಾಧ್ಯ ಎಂದು ಹೇಳಿದರು.

       ನೋಯುವ ಹಲ್ಲಿಗೆ ಸದಾ ನಾಲಿಗೆ ಸಾಂತ್ವನ ಹೇಳುವಂತೆ, ಜಗತ್ತಿನಲ್ಲಿ ನೋವು ತುಂಬಿಕೊಂಡಾಗ ವಚನ ಸಾಹಿತ್ಯ ಸಾಂತ್ವನ ಹೇಳುವ ಕೆಲಸ ಮಾಡುತ್ತದೆ. ಅಂಧಕಾರದ ಕತ್ತಲೆಯನ್ನು ಅನುಭವದ ಬೆಳಕಿನ ಮೂಲಕ ಸಾಕಾರಗೊಳಿಸಬೇಕು ಎಂದರು. ವಿಚಾರಕೂಟ ಕಾರ್ಯಕ್ರಮದಲ್ಲಿ ಹುಕ್ಕೇರಿಮಠದ ಸದಾಶಿವ ಶ್ರೀಗಳು, ಹೊಸಮಠದ ಬಸವಶಾಂತಲಿಂಗ ಶ್ರೀಗಳು, ನಲವಗುಂದ ಗವಿಮಠದ ಬಸವಲಿಂಗ ಶ್ರೀಗಳು, ನರಸಿಪುರ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀಗಳು, ಬೆಂಗಳೂರಿನ ಮಾತನಾಡುವ ಬೊಂಬೆ ಖ್ಯಾತಿಯ ಇಂದುಶ್ರೀ, ಶರಣ ಸಂಸ್ಕತಿ ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ ಶೆಟ್ಟಿ, ಇಂದುಧರ ಯರೇಶಿಮಿ, ಡಾ. ಮೃತ್ಯುಂಜಯ ತುರಕಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

       ಬೆಂಗಳೂರಿನ ಪೂಜಾ ಮತ್ತು ಪ್ರತೀಕ ಆಚಾರ್ಯ ನೆರಳು ಬೆಳಕಿನ ಆಟ ನಡೆಸಿಕೊಟ್ಟರು. ಮಲ್ಲಿಕಾರ್ಜುನ ಹಿಂಚಿಗೇರಿ ನಿರೂಪಿಸಿದರು. ಎಸ್.ಜೆ.ಎಂ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ ಪ್ರದರ್ಶಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ