ರಾಣಿಬೆನ್ನೂರ:
ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಆನ್ ಲೈನ್ ಔಷಧ ಮಾರಾಟ ನೀತಿಯನ್ನು ವಿರೋಧಿಸಿ, ತಾಲೂಕಿನ ಔಷಧ ವ್ಯಾಪಾರಸ್ಥರು ಶುಕ್ರವಾರ ಅಂಗಡಿ ಬಂದ ಮಾಡಿ ಪ್ರತಿಭಟನಾ ಮೆರವಣಿಗೆಯ ಮೂಲಕ ಸಂಚರಿಸಿ ತಹಶೀಲ್ದಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಸ್ಥಳೀಯ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ, ಕುರಬಗೇರಿ ಕ್ರಾಸ್, ಪಿಬಿ ರಸ್ತೆ ಮೂಲಕ ಸಂಚರಿಸಿ ತಹಶೀಲ್ದಾರ ಕಛೇರಿ ಎದುರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಅನಂತರ ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸತೀಶ ಕೇಲಗಾರ ಮಾತನಾಡಿ, ಕೇಂದ್ರ ಸರಕಾರವು ಜಾರಿಗೆ ತರಲು ಉದ್ದೇಶಿಸಿರುವ ಆನ್ ಲೈನ್ ಔಷಧ ಮಾರಾಟ ನೀತಿಯಿಂದ ಔಷಧ ಗುಣಮಟ್ಟ ಕುಂಠಿತವಾಗಿ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ, ಆದಕಾರಣ ತಕ್ಷಣ ಆನ್ ಲೈನ್ ಔಷಧ ಮಾರಾಟ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಡಾ. ಬಸವರಾಜ ಕೇಲಗಾರ ಮಾತನಾಡಿ, ಆನ್ ಲೈನ್ ಔಷಧ ಮಾರಾಟದಿಂದ ಯುವಕರಿಗೆ ಮಾದಕ ಔಷಧಗಳು ಸುಲಭವಾಗಿ ದೊರೆಯುವುದರಿಂದ ಅವರ ಭವಿಷ್ಯ ಹಾಳಾಗುವುದು, ಅಲ್ಲದೆ ದೇಶದಾದ್ಯಂತ ಸೇವೆಯಲ್ಲಿ ತೊಡಗಿರುವ ಸುಮಾರು 8.5 ಲಕ್ಷ ಔಷಧ ವ್ಯಾಪಾರಿಗಳು ಮತ್ತು ಇದೇ ವಹಿವಾಟುಗಳ ಮೇಲೆ ಅವಲಂಬಿತವಾಗಿರುವ ಸುಮಾರು 60ಲಕ್ಷ ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ ಹಾಗಾಗಿ ಈ ನೀತಿಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದರು.
ಕಾರ್ಯದರ್ಶಿ ವಿನೋಧ ಕೊಠಾರಿ, ಮಲ್ಲಣ್ಣ ಅಂಗಡಿ, ರಮೇಶ ದುರ್ಗದಶೀಮಿ, ಪ್ರಸನ್ನ ಗಚ್ಚಿನಮನಿ, ಪ್ರೀತಂ ಮೇಹರವಾಡಿ, ಶತೀಶ ಹೊಳಬಾಗಿಲ, ರಮೇಶ ಗಂಜಾಮದ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ