ವಿಧಾನಸಭೆ ಕಾರ್ಯದರ್ಶಿ ಅಮಾನತ್ತು ರದ್ದು ಮಾಡಿ

ಚಿತ್ರದುರ್ಗ:

    ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿರವರ ಅಮಾನತ್ತು ಆದೇಶವನ್ನು ಹಿಂದಕ್ಕೆ ಪಡೆದು ಕೂಡಲೆ ಕಾರ್ಯದರ್ಶಿ ಹುದ್ದೆಗೆ ಮರುನಿಯುಕ್ತಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ವಿಭಾಗೀಯ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ವಿಧಾನಸಭಾಧ್ಯಕ್ಷರು, ರಾಜ್ಯದ ಮುಖ್ಯಮಂತ್ರಿ ಹಾಗೂ ಕಾನೂನು ಮಂತ್ರಿಗೆ ಮನವಿ ಸಲ್ಲಿಸಲಾಯಿತು.

    2016-17 ನೇ ಸಾಲಿನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಖರ್ಚುಗಳು ಅಧಿಕವಾಗಿದೆ. ಆಗಿನ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಬಿ.ಕೋಳಿವಾಡರವರಿಗೆ ಸೂಕ್ತ ರೀತಿಯಲ್ಲಿ ಸರಿಯಾದ ಸಲಹೆ ಮಾರ್ಗದರ್ಶನ ನೀಡದೆ ವೆಚ್ಚಗಳ ಕಡತಗಳಿಗೆ ಸಹಿ ಪಡೆದಿದ್ದಾರೆಂಬ ಆಪಾದನೆ ಮಾಡಿ 2018 ರಲ್ಲಿ ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಎಸ್.ಮೂರ್ತಿರವರನ್ನು ಅಮಾನತ್ತುಗೊಳಿಸಿ ಆ ಜಾಗಕ್ಕೆ 2018 ರ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಆರ್.ರಮೇಶ್‍ಕುಮಾರ್ ಜಂಟಿ ಕಾರ್ಯದರ್ಶಿಯಾಗಿದ್ದ ಎಂ.ಕೆ.ವಿಶಾಲಾಕ್ಷಿ ಇವರನ್ನು ಕೂರಿಸಬೇಕೆಂಬ ಆಸೆಯಿಟ್ಟುಕೊಂಡಿದ್ದರಿಂದ ಎಸ್.ಮೂರ್ತಿ ಅಮಾನತ್ತಿಗೊಳಪಡಬೇಕಾಯಿತು.

     ಉಚ್ಚನ್ಯಾಯಾಲಯದ ಏಕಸದಸ್ಯ ಪೀಠವು ಎಸ್.ಮೂರ್ತಿರವರ ಪರವಾಗಿ ನೀಡಿದ ತೀರ್ಪಿನ ವಿರುದ್ದ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿರುವುದನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು ಇಲ್ಲವಾದಲ್ಲಿ ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷರು, ಕಾನೂನು ಮಂತ್ರಿಗಳ ಮನೆಯ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಎನ್.ಮೂರ್ತಿ ಸ್ಥಾಪಿತ ಕಾರ್ಯಕರ್ತರು ಎಚ್ಚರಿಸಿದರು.

    ಸೇವೆಯಿಂದ ಅಮಾನತ್ತುಗೊಳಿಸಿರುವುದು ಕಾನೂನು ಬಾಹಿರವೆಂದು ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಪಿ.ಬಿ. ಭಜಂತ್ರಿಯವರ ಏಕ ಸದಸ್ಯ ಪೀಠವು ಎಸ್.ಮೂರ್ತಿರವರ ಪರವಾಗಿ ದಿನಾಂಕ: 2-7-2020 ರಂದು ತೀರ್ಪು ನೀಡಿದ್ದು, ಸರ್ಕಾರಿ ನೌಕರರ ಅಮಾನತ್ತು ಅವಧಿ ಆರು ತಿಂಗಳು ಎಂದು ಸೇವಾ ಕಾನೂನುಗಳು, ಸರ್ಕಾರಿ ಆದೇಶಗಳು, ಮತ್ತು ನ್ಯಾಯಾಲಯದ ತೀರ್ಪುಗಳಿವೆ ಎನ್ನುವುದನ್ನು ಉಲ್ಲೇಖಿಸಿ ಇನ್ನು ಮೂರು ವಾರದೊಳಗೆ ಎಸ್.ಮೂರ್ತಿರವನ್ನು ಮರುನೇಮಕ ಮಾಡಿಕೊಳ್ಳುವಂತೆ ಆದೇಶಿಸಿರುವುದನ್ನು ರಾಜ್ಯ ಸರ್ಕಾರ ಗೌರವಿಸಬೇಕೆಂದು ಮನವಿಯಲ್ಲಿ ಕೋರಿದ್ದಾರೆ.ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಭಾಗೀಯ ಅಧ್ಯಕ್ಷ ಎಸ್.ಎನ್.ವಿಶ್ವನಾಥಮೂರ್ತಿ, ದಲಿತ ಮುಖಂಡ ನ್ಯಾಯವಾದಿ ಜಿ.ಆರ್.ಪ್ರಭಾಕರ್, ಅನಂತರಾಜ್, ಎಂ.ಏಳುಕೋಟಿ, ಹನಂತರಾಜ್ ಚೋಳೂರು, ಜೆ.ಜಗದೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

ಫೋಟೋ ವಿವರಣೆ: ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿರವರ ಅಮಾನತ್ತು ಆದೇಶ ಹಿಂಪಡೆದು ಮರುನೇಮಕ ಮಾಡಿಕೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾಸಾಹೇಬ್ ಎನ್.ಮೂರ್ತಿ ಸ್ಥಾಪಿತ ವಿಭಾಗೀಯ ಸಮಿತಿ ಒತ್ತಾಯ.

Recent Articles

spot_img

Related Stories

Share via
Copy link
Powered by Social Snap