ಹಾನಗಲ್ಲ :
ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ವಿತರಿಸುವಂತೆ ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಗುರುವಾರ ಎಬಿವಿಪಿ ತಾಲೂಕು ಸಂಘಟನೆಯ ಪದಾಧಿಕಾರಿಗಳು ಮಹಾತ್ಮಾಗಾಂಧಿ ವೃತ್ತದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಅರ್ಪಿಸಿದರು. ರಾಜ್ಯದ ಎಲ್ಲ ವರ್ಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವುದಾಗಿ ಹಿಂದನ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ 2 ವರ್ಷಗಳ ಹಿಂದೆ ಘೋಷಿಸಿದ್ದರು. ಆದರೆ ಅದನ್ನು ಅನುಷ್ಠಾನಗೊಳಿಸಲಿಲ್ಲ. ಇಂದಿನ ಸರ್ಕಾರವೂ ಆ ಆದೇಶವನ್ನು ಪರಿಗಣಿಸದೇ ಹಿಂದಿನ ಮುಖ್ಯಮಂತ್ರಿಗಳ ಆದೇಶವನ್ನೇ ರದ್ದುಪಡಿಸಿ ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವರ್ಷದಲ್ಲಿ ಉಚಿತ ಬಸ್‍ಪಾಸ್‍ಗಾಗಿ ಕಾಯುತ್ತಿದ್ದರು. ಅವರಿಗೆ ಪ್ರಸ್ತುತ ಸಮ್ಮಿಶ್ರ ಸರ್ಕಾರ ನಿರಾಸೆಯನ್ನುಂಟುಮಾಡಿದೆ. ರೈತರ ಸಾಲಮನ್ನಾ ನೆಪವೊಡ್ಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಹಳ್ಳಿಗಳಿಂದ ಬರುತ್ತಿರುವ ರೈತರ ಮಕ್ಕಳಿಗೆ ಶಿಕ್ಷಣವೂ ಸಿಗದಂತೆ ಮಾಡುತ್ತಿದ್ದಾರೆ. ಈ ಅನ್ಯಾಯವನ್ನು ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷವೂ ಹಣವಿಲ್ಲವೆಂಬ ನೆಪವೊಡ್ಡಿ ರಾಜ್ಯ ಸರ್ಕಾರ, ವಿದ್ಯಾರ್ಥಿಗಳ ಬೇಡಿಕೆಯನ್ನು ಮೂಲೆಗುಂಪು ಮಾಡಿತ್ತು. ಕೇವಲ ಅಧಿಕಾರ ಉಳಿಸಿಕೊಳ್ಳುವ ಯೋಚನೆಯಲ್ಲಿರುವ ಸರ್ಕಾರಕ್ಕೆ ವಿದ್ಯಾರ್ಥಿಗಳ ಕೂಗು ಕೇಳದಾಗಿದೆ. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ಬಸ್‍ಪಾಸ್ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಬಿವಿಪಿ ತಾಲೂಕು ಸಂಚಾಲಕ ಮಲ್ಲಪ್ಪ ನಾಗರೊಳ್ಳಿ, ನಗರ ಕಾರ್ಯದರ್ಶಿ ಬಸವರಾಜ ಮಟ್ಟಿಮನಿ, ಭರತ ಹುಳ್ಳಿಕಾಶಿ, ಎಸ್.ಕೆ.ವೀರೇಶ್, ರಿತೇಶ ತಳವಾರ, ಮಾಲತೇಶ ಮಾಳಿ, ಅಭಿಷೇಕ ಗಣಾಚಾರಿ, ವಿಜಯ ಜಾಡರ, ಸುನೀಲ ಗೌಡರ, ಪ್ರಕಾಶ ಹರಿಜನ, ಕೆ.ವಿ.ನಿರಂಜನ, ಬಿ.ನಿತೀಶ್, ಎಸ್.ದೇವರಾಜ್, ಜೆ.ಪ್ರಮೋದ್, ಶಶಿ ಕಮಾಟಿ, ಅರುಣ ಬಾರ್ಕಿ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
