ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಒತ್ತಾಯ

ದಾವಣಗೆರೆ:

    ಬಡ್ಡಿಯ ಆಸೆ ತೋರಿಸಿ, ಸಾವಿರಾರು ಜನರಿಂದ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿ ವಂಚಿಸಿರುವ ಐಎಂಎ ಹಣಕಾಸು ಸಂಸ್ಥೆಯ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ, ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

      ನಗರದ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟ, ವಿಶ್ವ ಕರವೇ ಕಾರ್ಯಕರ್ತರು ವಂಚಕ ಐಎಂಎ ಹಣಕಾಸು ಸಂಸ್ಥೆಗೆ ಧಿಕ್ಕಾರ, ‘ಆಗಲೆಬೇಕು, ಆಗಲೆಬೇಕು-ಸಿಬಿಐ ತನಿಖೆ ಆಗಲೆಬೇಕೆಂಬುದು ಸೇರಿದಂತೆ ವಿವಿಧ ಘೋಷಣೆಗಳನ್ನು ಕೂಗುತ್ತಾ ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಮನ್ಸೂರ್ ಖಾನ್ ಮಾಲೀಕತ್ವದ ಐಎಂಎ ಹಣಕಾಸು ಸಂಸ್ಥೆಯು ಬೆಂಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವೆಡೆ ಹೂಡಿಕೆ ಮಾಡುವ ಹಣಕ್ಕೆ ಮಾಸಿಕ ಶೇ.3ರಷ್ಟು ಬಡ್ಡಿ ನೀಡುವುದಾಗಿ ಹೇಳಿ, ನಂಬಿಸಿ ಸಾವಿರಾರರು ಜನರಿಂದ ಕೋಟ್ಯಂತರ ರೂ.ಗಳನ್ನು ಸಂಗ್ರಹಿಸಿ, ಅಮಾಯಕರನ್ನು ವಂಚಿಸಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಇಸ್ಲಾಂ ಅನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು, ಇಸ್ಲಾಂ ಧರ್ಮಗುರುಗಳ ಮೂಲಕ ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಿ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಆಗರ್ಭ ಶ್ರೀಮಂತರು ಸಹ ಹಣ ಹೂಡುವಂತೆ ಮಾಡಿ, ಕೆಲ ವರ್ಷಗಳ ಕಾಲ ಮಾಸಿಕ ಶೇ.3 ರಷ್ಟು ಬಡ್ಡಿ ನೀಡಿ, ಐಎಂಎ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಹೆಚ್ಚಿಸಿ, ಸಾವಿರಾರು ಕೋಟಿ ಹಣ ಹೂಡಿಕೆಯಾದ ಮೇಲೆ ಹೂಡಿಕೆದಾರರಿಗೆ ಪಂಗನಾಮ ಹಾಕಿ, ಈಗ ತಲೆ ಮರೆಸಿಕೊಂಡಿದ್ದಾರೆ. ಆದರೆ, ಈತನನ್ನು ನಂಬಿ ಕೂಡಿಟ್ಟಿದ್ದ ಹಣವನ್ನು ಐಎಂಎ ಕಂಪನಿಯಲ್ಲಿ ತೊಡಗಿಸಿದ್ದ ಹೂಡಿಕೆದಾರರು ಈಗ ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

      ಸಾರ್ವಜನಿಕರಿಂದ ಸಾವಿರಾರೂ ಕೋಟಿ ಹಣ ಸಂಗ್ರಹಿಸಿಕೊಂಡು ತಲೆ ಮರೆಸಿಕೊಂಡಿರುವ ಮನ್ಸೂರ್ ಖಾನ್ ಪ್ರಕರಣವನ್ನು ಸರ್ಕಾರ ವಿಶೇಷ ತನಿಖಾ ದಳ(ಎಸ್‍ಐಟಿ)ಕ್ಕೆ ವಹಿಸಿರುವುದೇನೋ ಸ್ವಾಗತಾರ್ಹ. ಆದರೆ, ವಂಚಕ ಮನ್ಸೂರ್ ಖಾನ್ ನಾಡಿನ ಹಲವು ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಎಸ್‍ಐಟಿ ಮೇಲೆ ರಾಜಕಾರಣಿಗಳು ಪ್ರಭಾವ ಬೀರಿ, ತನಿಖೆಯ ದಾರಿ ತಪ್ಪಿಸುವ ಸಾಧ್ಯತೆಗಳಿವೆ. ಆದ್ದರಿಂದ ಈ ವಂಚಕ ಸಂಸ್ಥೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

        ಸಾರ್ವಜನಿಕರಿಂದ ಸಂಗ್ರಹಿಸಿರುವ ಹಣದಲ್ಲಿ ಮನ್ಸೂರ್ ಖಾನ್ ರಾಜ್ಯದ ಹಲವೆಡೆ ಬೇನಾಮಿ ಆಸ್ತಿ ಖರೀದಿಸಿದ್ದು, ಈ ಎಲ್ಲ ಆಸ್ತಿಗಳನ್ನು ಸರ್ಕಾರ ಜಪ್ತು ಮಾಡುವ ಮೂಲಕ, ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಹಣ ಕಳೆದುಕೊಂಡಿರುವವರಿಗೆ ವಿತರಸಿಬೇಕು. ಮನ್ಸೂರ್ ಖಾನ್‍ಗೆ ಬೆಂಬಲವಾಗಿ ನಿಂತು, ಸಾರ್ವಜನಿಕರಿಗೆ ಮೋಸ ಮಾಡಿರುವ ಧರ್ಮಗುರುಗಳ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ವಂಚಕ ಮನ್ಸೂರ್ ಖಾನ್‍ನನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

       ಮಧ್ಯ ಕರ್ನಾಟಕದ ದಾವಣಗೆರೆಯಲ್ಲೂ ಅನೇಕ ಅನಧಿಕೃತ ಹಣಕಾಸು ಸಂಸ್ಥೆಗಳು, ಚಿಟ್‍ಫಂಡ್ ಕಂಪನಿಗಳು ನಾಯಿಕೊಡೆಗಳಂತೆ ತಲೆ ಎತ್ತಿದ್ದು, ಅವುಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸುವ ಮೂಲಕ ಸಾರ್ವಜನಿಕರಿಗೆ ಆಗುವ ವಂಚನೆಯನ್ನು ತಡೆಯಬೇಕೆಂದು ಆಗ್ರಹಿಸಿದರು.

         ಪ್ರತಿಭಟನೆಯಲ್ಲಿ ವಿಶ್ವ ಕರವೇಯ ಅಮ್ಜದ್ ಅಲಿ, ಕೆ.ಎಚ್.ಮೆಹಬೂಬ್, ಸೋಮಶೇಖರ್, ಬಾಬುರಾವ್, ಸಿಖಂದರ್ ಹಜರತ್, ಬೀಲಾಲ್, ಸಂತೋಷ ದೊಡ್ಮನಿ, ಎಂ.ರವಿ, ದಯಾನಂದ.ಬಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link