ಆಡಿಯೋ ಪ್ರಕರಣ : ತನಿಖೆ ನಡೆಸಲು ಒತ್ತಾಯ

ತುಮಕೂರು

     ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ತನಿಖೆ ಆಗಬೇಕು. ಈತನ ಹಿಂದೆ ಇರುವ ಯಾರ ಕೈವಾಡ ಇದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಧುಗಿರಿ ಕಾಂಗ್ರೆಸ್ ಮುಖಂಡ ಎಸ್.ಎಂ.ಮಲ್ಲಿಕಾರ್ಜುನ ಒತ್ತಾಯಿಸಿದರು.

      ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಸ್.ಪಿ.ಮುದ್ದಹನುಮೆಗೌಡರು ಹಾಗೂ ಕೆ,ಎನ್.ರಾಜಣ್ಣನವರು ಸುಮಾರು 40 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸಮಾಜ ಸೇವೆ ಮಾಡಿದ್ದಾರೆ.

      ಅವರ ಮೇಲೆ ಚುನಾವಣೆ ವೇಳೆಯಲ್ಲಿ ನಾಮಪತ್ರ ಸಲ್ಲಿಸಿ ಅದನ್ನು ಹಿಂಪಡೆಯಲು ಮೂರೂವರೆ ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂಬುದಾಗಿ ಕಾಂಗ್ರೆಸ್ ಕಾರ್ಯಕರ್ತ ದರ್ಶನ್ ಎಂಬುವವರು ಮಾತನಾಡಿದ್ದು, ಇದು ಸತ್ಯಕ್ಕೆ ದೂರವಾದ ಮಾತಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಈತನ ಹಿಂದೆ ಯಾರದ್ದೋ ಕೈವಾಡ ಇದೆ ಎಂಬ ಅನುಮಾನ ನಮ್ಮಲ್ಲಿದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

        ದರ್ಶನ ಮಾಡಿರುವ ಆರೋಪದ ಬಗ್ಗೆ ಯಾವುದೇ ದಾಖಲಾತಿಗಳಾಗಲಿ, ಸಾಕ್ಷಿಗಳಾಗಲಿ ಯಾವುದು ಇಲ್ಲ. ಈತನು ಉಪಮುಖ್ಯಮಂತ್ರಿಯವರ ಬೆಂಬಲಿಗ ಎಂದು ಹೇಳಿಕೊಳ್ಳುತ್ತಿದ್ದು, ಉಪಮುಖ್ಯಮಂತ್ರಿಗಳ ಹೆಸರನ್ನು ಕೂಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ.  ಅವರು ದೂರು ಇರುವುದು ಒಳಿತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗೆ ದರ್ಶನ್ ವಿರುದ್ಧ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

        ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿರುವ ಪಕ್ಷ. ಈಗ ದರ್ಶನ್ ಮಾಡಿರುವ ಆರೋಪದಿಂದ ಇಡೀ ರಾಜ್ಯಾದ್ಯಂತ ಈ ಸುದ್ದಿ ಹರಿದಾಡುತ್ತಿದೆ. ಇದರಿಂದ ಪಕ್ಷಕ್ಕೆ ಹಿನ್ನಡೆ ಆಗುವ ಸಾಧ್ಯತೆಗಳಿವೆ. ಹಾಗಾಗಿ ಮುದ್ದಹನುಮೆಗೌಡರು ಹಾಗೂ ಕೆ.ಎನ್.ರಾಜಣ್ಣನವರ ಅಭಿಮಾನಿಗಳಾದ ನಾವುಗಳು ಈ ಆರೋಪದ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದರು.

        ಪತ್ರಿಕಾಗೋಷ್ಠಿಯಲ್ಲಿ ಸಹಕಾರ ಮಂಡಳಿಯ ಅಧ್ಯಕ್ಷ ಗಂಗಣ್ಣ, ಮಧುಗಿರಿ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ರಾಮದಾಸು, ರಾಜಗೋಪಾಲ್, ಇಂದಿರಾದೇನಾನಾಯ್ಕ್, ನಾಗೇಶ್‍ಬಾಬು, ದೇವರಾಜು, ಭರಮಣ್ಣ, ಮಂಜುನಾಥ್, ಪಿ.ಟಿ.ಗೋವಿಂದರಾಜು, ಶಕೀಲ್ ಅಹಮ್ಮದ್, ನಂಜುಂಡಯ್ಯ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಉಪಸ್ಥಿತರಿದ್ದರು.ಪತ್ರಿಕಾಗೋಷ್ಠಿ ಮುಗಿದ ನಂತರ ಎಲ್ಲಾ ಕಾಂಗ್ರೆಸ್ ಮುಖಂಡರು ಒಟ್ಟಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ತೆರಳಿ ನಗರ ಡಿವೈಎಸ್‍ಪಿ ತಿಪ್ಪೇಸ್ವಾಮಿಯವರಿಗೆ ಮನವಿ ಸಲ್ಲಿಸಿದರು.


      ದರ್ಶನ್ ಎಂಬ ಯುವಕ ಮೂಲತಃ ಸಕಲೇಶಪುರದವನು

          ಎಸ್‍ಎಸ್‍ಐಟಿ ಕಾಲೇಜಲ್ಲಿ ಬಿಬಿಎಂ ವಿದ್ಯಾಭ್ಯಾಸ ಮಾಡಲು ಎಂದು ಬಂದವನು. 2008ರಿಂದಲೂ ಬಿಬಿಎಂ ಕೋರ್ಸ್ ಮಾಡುತ್ತಿದ್ದಾನೆ. ಅದು ಇಂದಿಗೂ ಮುಗಿದಿಲ್ಲ. 2008ರಿಂದ 2019ರವರೆಗೆ ಕೋರ್ಸ್ ಮಾಡುತ್ತಿದ್ದಾನೆ. ಯಾರಾದ್ರೂ ಕೇಳಿದರೆ ವಿದ್ಯಾರ್ಥಿ ಎಂದು ಹೇಳುತ್ತಾನೆ. ಕಾಲೇಜಿಗೆ ಬರುವ ಉತ್ತರ ಭಾಗದ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿ ಜೀವನ ಮಾಡುತ್ತಿದ್ದಾನೆ. ಈತನು ಡಿಸಿಎಂನೊಂದಿಗೆ ಒಡನಾಟ ಇದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಹೆದರುತ್ತಾರೆ. ಇಂತಹ ಹಿನ್ನೆಲೆಯಿರುವ ಯುವಕ ಪಕ್ಷದ ನಿಷ್ಟಾವಂತ ಪ್ರಭಾವಿ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾನೆ. 170 ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುತ್ತೇನೆ ಎಂದು ಹೇಳಿದ್ದಾನೆ. ಅಲ್ಲದೆ ಈಗ ಇಬ್ಬರು ನಾಯಕರಿಗೆ 3.5 ಕೋಟಿ ಹಣ ನೀಡಲಾಗಿದೆ. ದೇವೇಗೌಡರು ಗೆದ್ದ ನಂತರ ಮತ್ತಷ್ಟು ಹಣ ನೀಡಲಾಗುತ್ತದೆ ಎಂದೆಲ್ಲಾ ಹೇಳಿದ್ದಾನೆ. ಈತನ ಹಿಂದೆ ಪ್ರಭಾವಿಗಳ ಕೈವಾಡವಿದೆ ಎನಿಸುತ್ತಿದೆ. ಒಬ್ಬನೇ ಈ ರೀತಿ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ಆರ್.ರಾಜೇಂದ್ರ, ಯುವ ಮುಖಂಡ


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ