ಬಳ್ಳಾರಿ:
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ನೆಪದಲ್ಲಿ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿ, ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಮತ್ತು ಅಖಿಲ ಭಾರತ ಕಿಸಾನ ಸಂಘರ್ಷ ಸಮನ್ವಯ ಸಮಿತಿಯ ಮುಖಂಡರು ನಗರದ ರೈಲು ನಿಲ್ದಾಣದ ಎದುರು ಭಾರತ ರಕ್ಷಿಸಿ ದಿನದ ಅಂಗವಾಗಿ ಸೋಮವಾರ ಧರಣಿ ನಡೆಸಿದರು.
ಕೇಂದ್ರದ ಬಿಜೆಪಿ ಸರ್ಕಾರ ಕೊರೊನಾ ಬಿಕ್ಕಟ್ಟಿನ ನೆಪದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀಕರಣ, ಖಾಸಗಿಕರಣ, ಮತ್ತು ಕೋಮುವಾರೀಕರಣವನ್ನು ಜಾರಿಗೊಳಿಸುವ ದುರುದ್ದೇಶದಿಂದ ಹೊಸಶಿಕ್ಷಣ ನೀತಿಯನ್ನು ಘೋಷಿಸಿದೆ. ದೇಶದಲ್ಲಿ ನಿರುದ್ಯೋಗ ನಿರ್ಮೂಲನೆಗೆ ಒತ್ತಾಯಿಸುತ್ತಲೇ ಇದ್ದರೂ, ಪ್ರಧಾನಮಂತ್ರಿಗಳು ಆತ್ಮನಿರ್ಭರ ಭಾರತ ಎಂಬ ಉದ್ಘೋಷಣೆಗಳನ್ನು ನೀಡುತ್ತಾರೆ, ವಾಸ್ತವದಲ್ಲಿ ಅವರ ಸರ್ಕಾರವು ಕಾರ್ಪೊರೇಟ್ ವಲಯದ ಸ್ನೇಹತರನ್ನು ಸಂತುಷ್ಠಿಗೊಳಿಸಲು ರೈಲ್ವೇ ಮತ್ತು ಇತರ ಸರ್ವಾಜನಿಕ ಉದ್ದಿಮೆಗಳನ್ನು ಖಾಸಗೀರಣಕ್ಕೆ ಅನುವು ಮಾಡಿಕೊಡುತ್ತಿದ್ದಾರೆ ಎಂದು ಸಮಿತಿಯ ಮುಖಂಡ ಪ್ರತಿಭಟನಾನಿರತ ಕೆ.ಸೋಮಶೇಖರ್ ದೂರಿದರು.
ಕಾರ್ಖಾನೆಗಳ ಕಾಯಿದೆ, ಕೈಗಾರಿಕಾ ವಿವಾದ ಕಾಯಿದೆ, ಗುತ್ತಿಗೆ ಕಾರ್ಮಿಕರ ಕಾಯಿದೆ, ಪ್ರಗತಿ ವಿರೋಧಿ ತಿದ್ದುಪಡಿಗಳು ಹಾಗೂ ತುಟ್ಟಿ ಭತ್ಯೆ ಮುಂದೂಡುವಿಕೆಯ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು. ಭೂ ಸಂಬಂಧಿ ಕಾನೂನುಗಳು, ಎಪಿಎಂಸಿ ಕಾಯಿದೆ ಮತ್ತು ಅಗತ್ಯ ಸಾಮಗ್ರಿ ಕಾಯಿದೆಗಳಿಗೆ ತಿದ್ದುಪಡಿತರಲು ಹೊರಡಿಸಿರುವ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕು. ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ 6 ತಿಂಗಳವರೆಗೆ ಪ್ರತಿ ತಿಂಗಳು 7500 ರೂ. ಪಾವತಿಸಬೇಕು. ಕಾರ್ಮಿಕ ವರ್ಗಕ್ಕೆ ಸಂಬಂಧಪಟ್ಟ ನೀತಿ ನಿರೂಪಣೆಯ ಎಲ್ಲಾ ಹಂತಗಳಲ್ಲಿ ಕಾರ್ಮಿಕ ವರ್ಗದ ಅಭಿಪ್ರಾಯ ಅನಿಸಿಕೆಗಳನ್ನು ಪಡೆಯುವ ತ್ರಿಪಕ್ಷೀಯ ಸಭೆಯ ವಿಧಾನವನ್ನು ಖಾತರಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
ಲಾಕ್‍ಡೌನ್ ಘೋಷಣೆಯಿಂದ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬದವರಿಗೆ ಪರಿಹಾರ ನೀಡಬೇಕು. ಸಾಮಾಜಿಕ ಭದ್ರತೆ ಯೋಜನೆಗಳು ಸುಲಭ ಹಣ ವರ್ಗಾವಣೆಯಾಗುವ ರೀತಿಯಲ್ಲಿ ಕ್ರಮವಹಿಸಬೇಕು. ಅಸಂಘಟಿತ ಕ್ಷೇತ್ರದ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯಿದೆ 2008ರಡಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಪ್ರತಿ ವರ್ಷ 10 ಸಾವಿರ ಕೋಟಿ ರೂ. ವರ್ತುಲ ನಿಧಿ ಸ್ಥಾಪಿಸಬೇಕು. ರಕ್ಷಣಾ ವಲಯ, ರಕ್ಷಣಾ ಉಪಕರಣಗಳ ಕಾರ್ಖಾನೆಗಳು, ಸಾರಿಗೆ, ರೈಲ್ವೇ, ಜೀವ ವಿಮಾ ನಿಗಮ, ಸಾಮಾನ್ಯ ವಿಮಾ ನಿಗಮ, ಬ್ಯಾಂಕಗಳು, ಬಂದರು, ವಿಮಾನ ನಿಲ್ದಾಣಗಳು ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವದನ್ನು ಕೂಡಲೇ ನಿಲ್ಲಿಸಬೇಕು ಎಂದು ಜೆ.ಸತ್ಯಬಾಬು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಗಳಲ್ಲಿ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸಿ ವಿಸ್ತರಿಸಬೇಕು. ಅನ್ ಲೈನ್ ಶಿಕ್ಷಣ ನಿಷೇಧಿಸಬೇಕು. ಅಗತ್ಯ ಸಾಮಗ್ರಿ ಕಾಯಿದೆಯ ತಿದ್ದುಪಡೆಯೂ ಸೇರಿದಂತೆ ಕೃಷಿವಲಯಕ್ಕೆ ಸಂಬಂದಿಸಿದ ಮೂರು ರಾಜ್ಯ ಸರ್ಕಾರಗಳ ಸುಗ್ರಿವಾಜ್ಞೆಗಳನ್ನು ಹಿಂಪಡೆಯಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು 500ಕ್ಕೆ ಹೆಚ್ಚಿಸಿ ನಗರ ಪ್ರದೇಶಕ್ಕೆ ವಿಸ್ತರಿಸಬೇಕು. ಇಂಧನ ದರ ಇಳಿಸಬೇಕು. ಕೊರೋನಾ ಒಂದು ವಿಪತ್ತು ಎಂದು ಘೋಷಣೆ ಮಾಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಆರ್.ಸೋಮಶೇಖರ್ ಗೌಡ, ಎಂ.ಜಯಕುಮರ್ ನಾಯ್ಡು, ಕೆ.ತಾಯಪ್ಪ, ಎಚ್.ಎ.ಅದಿಮೂರ್ತಿ, ಎ.ಆರ್.ಎಂ.ಇಸ್ಮಾಯಿಲ್, ಮಲ್ಲಮ್ಮ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ