ವಿಶೇಷ ಯೋಜನೆ ರೂಪಿಸಲು ಮನವಿ

 ಕೊಟ್ಟೂರು

      ತಾಂಡಾಗಳ ಜನತೆ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರದಿಂದ ವಿಶೇಷ ಯೋಜನೆಯನ್ನು ರೂಪಿಸಬೇಕೆಂದು ನೂತನ ಕರ್ನಾಟಕ ತಾಂಡಾಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಸ್. ಭೀಮಾನಾಯ್ಕ ಅವರಿಗೆ ಬಳ್ಳಾರಿ ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯ್ತಿ ಅಧ್ಯಕ್ಷ ವೆಂಕಟೇಶ ನಾಯ್ಕ ಮನವಿ ಮಾಡಿದರು.

       ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮವರು ಶ್ರಮ ಜೀವಿಗಳು. ಇವರಿಗೆ ಭೂಮಿ ಕಮ್ಮಿ. ಬದುಕಿನ ಅನಿವಾರ್ಯತೆಗೆ ಗುಳೆ ಹೋಗುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸ ಕುಂಟಿತವಾಗುತ್ತದೆ. ತಾಂಡಾದಲ್ಲಿದ್ದುಕೊಂಡೇ ಬದುಕು ಕಟ್ಟಿಕೊಳ್ಳಲು ಸರ್ಕಾರದಿಂದ ವಿಶೇಷ ಯೋಜನೆ ರೂಪಿಸುವುದು ಅಗತ್ಯವಾಗಿದೆ ಈ ಕುರಿತು ನೂತನ ಅಧ್ಯಕ್ಷರು ಹೆಚ್ಚು ಕಾಳಜಿವಹಿಸಬೇಕೆಂದರು.

        ಭಾರತದಲ್ಲಿ ಕೋಟ್ಯಂತರ ಬಂಜಾರ ಜನರು ಬಂಜಾರ ಭಾಷೆ ಮಾತನಾಡುತ್ತಾರೆ. ಇದು ಅವರ ಮಾತೃಭಾಷೆ. ಲಿಪಿ ಇಲ್ಲದಿದ್ದರೂ ದೇಶದಲ್ಲಿ ಕೋಟ್ಯಂತರ ಜನರು ಮಾತನಾಡುವ ಏಕೈಕ ಭಾಷೆ ಇದು. ಕೇಂದ್ರ ಸರ್ಕಾರ ಬಂಜಾರ ಭಾಷೆಗೆ ವಿಶೇಷ ಸ್ಥಾನಮಾನ ನೀಡುವಂತೆ ಅಧ್ಯಕ್ಷರು ಹೋರಾಟ ಹಮ್ಮಿಕೊಂಡರೆ ಇಡೀ ಬಂಜಾರ ಸಮುದಾಯ ಇದಕ್ಕೆ ಧ್ವನಿಗೂಡಿಸುವುದರಲ್ಲಿ ಸಂಶಯವಿಲ್ಲ ಎಂದರು.

       ತಾಂಡಾಗಳ ಅಭಿವೃದ್ದಿ ನಿಗಮದಿಂದ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನಗಳು ನಿರ್ಮಾಣವಾಗಬೇಕಿದೆ. ಈ ಯೋಜನೆಗೆ ನಿಗಮದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಬೇಕೆಂದು ಮನವಿ ಮಾಡಿದರು.

        ಬಂಜಾರ ಸಮುದಾಯದ ಮಹಿಳೆಯರು ತಮ್ಮ ವೇಷಭೂಷಣಗಳಿಗೆ ಕಸೂತಿ ಹಾಕುವುದರಲ್ಲಿ ಪರಿಣಿತರು. ಇವರು ಬಟ್ಟೆಗಳಿಗೆ ಹಾಕುವ ಕಸೂತಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ನಿಗಮದಿಂದ ಕಲ್ಪಿಸಿದರೆ, ಕಸೂತಿ ಕಲೆ ಅಭಿವೃದ್ದಿಯಾಗುತ್ತದೆ. ಕಲೆಯೂ ಜೀವಂತ ಉಳಿಯುತ್ತದೆ ಎಂದರು.

        ಬಂಜಾರ ಸಮುದಾಯಕ್ಕೆ ಮಾರಕವಾಗಿರುವ ತಾಂಡಾಗಳಲ್ಲಿ ಮದ್ಯ ಮಾರಾಟವನ್ನು ರದ್ದು ಪಡಿಸುವಲ್ಲಿ ವಿದ್ಯಾವಂತ ಯುವಕರು ಜನರಲ್ಲಿ ಅರಿವು ಮೂಡಿಸಬೇಕೆಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap