ದಾವಣಗೆರೆ:
ಮಹಾನಗರ ಪಾಲಿಕೆ ವ್ಯಾಪ್ತಿಯ ಮುದ್ದಾಭೋವಿ ಕಾಲೋನಿಯಲ್ಲಿ ತೆರೆದು ನಿಂತಿರುವ ಎರಡು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ, ಪುನರ್‍ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಸ್‍ಯುಸಿಐ ಕಮ್ಯುನಿಷ್ಟ್ ಪಕ್ಷದ ನೇತೃತ್ವದಲ್ಲಿ ಅಲ್ಲಿಯ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಮಹಾನಗರ ಪಾಲಿಕೆಯ ಎದುರು ಪ್ರತಿಭಟನೆ ನಡೆಸಿದ ಮುದ್ದಾಭೋವಿ ಕಾಲೋನಿಯ ನಿವಾಸಿಗಳು, ಚರಂಡಿಗಳ ಸ್ವಚ್ಛತೆ ಕಾಪಾಡದ, ಸಮರ್ಪಕ ನೀರು ಪೂರೈಸದ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಇಲ್ಲಿಯ ಮುದ್ದಾಭೋವಿ ಕಾಲೋನಿಯಲ್ಲಿ ಹರಿಯದೇ ತುಂಬಿಹೋದ ಕೊಳಚೆ ನೀರು, ಪೇಪರ್, ಪ್ಲಾಸ್ಟಿಕ್, ಹಂದಿಗಳಿಂದ ತುಂಬಿ ರಾಜ ಕಾಲುವೆ ತುಂಬಿ ಹೋಗಿದೆ. ಮಕ್ಕಳು ಆಟವಾಡಲು ಹೋಗಿ ಚರಂಡಿಯಲ್ಲಿ ಜಾರಿ ಬಿದ್ದು, ನೀರು ಕುಡಿದ ಬಾಲಕಿಯೊಬ್ಬರು ಸಾವನಪ್ಪಿರುವ ನಿದರ್ಶನ ಸಹ ಇದೆ. ಆದರೂ ಸಹ ಮಹಾನಗರ ಪಾಲಿಕೆಯು ರಾಜಕಾಲುವೆ ಹೂಳು ಎತ್ತಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಭಾಗದ ಜನರು ಹಂದಿ, ಸೊಳ್ಳೆಗಳ ಹಾವಳಿಯಿಂದ ಗಂಭೀರವಾದ ಕಾಯಿಲೆಗೆ ತುತ್ತಾಗಿದ್ದಾರೆ. ಮನುಷ್ಯ ಬದುಕಲು ಶುದ್ಧ ಕುಡಿಯುವ ನೀರು, ಆಹಾರ, ವಸತಿ, ಸ್ವಚ್ಛ ಚರಂಡಿ ಮತ್ತು ಸ್ವಸ್ತ ಸಾಮಾಜಿಕ ಪರಿಸರ ಅತ್ಯಗತ್ಯ. ಆದರೆ, ಸ್ಥಿತಿ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಅಲ್ಲಿನ ಜನರ ಕುಡಿಯುವ ನೀರಿನ ನಲ್ಲಿಗಳು ಚರಂಡಿಯ ಒಳಗೆ ಇದ್ದು ಕೊಳಚೆ ಮಿಶ್ರಿತ, ಹುಳಗಳನ್ನು ಸೋಸಿ ನೀರು ಕುಡಿಯುವ ಕ್ರೂರ ಪರಿಸ್ಥಿತಿಗೆ ಜನರು ತಳ್ಳಲ್ಪಟ್ಟಿದ್ದಾರೆಂದು ದೂರಿದರು.
ಸಾರ್ವಜನಿಕ ಶೌಚಾಲಯಗಳು ವಾಸನೆಪೂರಿತವಾಗಿದ್ದು, ಹಂದಿ ಸತ್ತು ಬಿದ್ದರೂ ಕೇಳುವವರಿಲ್ಲದೇ ಹಾಗೂ ಮನೆಗಳಲ್ಲಿ ಶೌಚಾಲಯಗಳಿಗೆ ಒಳಚರಂಡಿ ವ್ಯವಸ್ಥೆಯ ಪೈಪುಗಳಿಲ್ಲದೇ ನೀರು ನಿಂತು ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆಂದು ಆರೋಪಿಸಿದರು.
ಮುದ್ದಾಭೋವಿ ಕಾಲೋನಿಯಲ್ಲಿನ ಎರಡು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ ಪುನರ್ ನಿರ್ಮಾಣ ಮಾಡಬೇಕು, ಪಾಳು ಬಿದ್ದಿರುವ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛಗೊಳಿಸಿ ಅದಕ್ಕೆ ನೀರು, ಗೇಟಿನ ವ್ಯವಸ್ಥೆ ಕಲ್ಪಿಸಿಕೊಡಬೇಕು. ದಿನಕ್ಕೊಂದು ಬಾರಿ ಸ್ವಚ್ಛಗೊಳಿಸಲು ಕೆಲಸಗಾರರನ್ನು ನೇಮಿಸಬೇಕು. ಬೋರ್‍ವೆಲ್ ವ್ಯವಸ್ಥೆಯನ್ನು ಕಲ್ಪಿಸಿ.
ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು. ಮನೆಗಳಲ್ಲಿ ಶೌಚಾಲಯದ ಪೈಪ್‍ಗಳನ್ನು ಒಳಚರಂಡಿಗೆ ಜೋಡಿಸಬೇಕು. ದಿನಕ್ಕೊಂದು ಬಾರಿ ಕುಡಿಯುವ ನೀರು ಪೂರೈಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಸ್‍ಯುಸಿಐನ ಪಿ.ಪರಶುರಾಮ್, ನಾಗಜ್ಯೋತಿ, ಭಾರತಿ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ