ಹುಳಿಯಾರು
ವಿಧವಾ, ವಿಕಲಚೇತನ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಮಾಸಾಶನವನ್ನು ಆರು ತಿಂಗಳಿಂದ ಸ್ಥಗಿತಗೊಂಡಿದ್ದು ತಕ್ಷಣ ಆರಂಭಿಸುವಂತೆ ಫಲಾನುಭವಿ ಬೆಳ್ಳಾರ ಮಜುರೆ ಹೊನ್ನಯ್ಯನಪಾಳ್ಯದ ಗೋವಿಂದಪ್ಪ ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾಸಾಶನ ಪಡೆಯುವ ಅನೇಕರು ದುಡಿಯಲು ಅಶಕ್ತರಾಗಿದ್ದು ಮಾಸಾಶನದ ಮೇಲೆಯೇ ಅವಲಂಬಿತರಾಗಿದ್ದಾರೆ. ಆರು ತಿಂಗಳಿಂದ ಮಾಸಾಶನ ನಿಲ್ಲಿಸಿರುವುದರಿಂದ ವೈದ್ಯಕೀಯ ಉಪಚಾರಕ್ಕೂ ಹಣ ಇಲ್ಲದಾಗಿದೆ. ಇಂತಹ ಸ್ಥಿತಿಯಲ್ಲಿ ಜೀವನ ನಿರ್ವಹಣೆಗೆ ಬಹಳ ತೊಂದರೆಯಾಗಿದೆ ಎಂದು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ತಾಲೂಕಿನಲ್ಲಿ ಸತತ ಐದಾರು ವರ್ಷ ಬರ ಆವರಿಸಿದ್ದು ಇತ್ತ ಬೆಳೆಯಿಲ್ಲದೆ ಅತ್ತ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು ಎಲ್ಲೂ ಸಾಲ ಕೂಡ ಹುಟ್ಟದಂತ್ತಾಗಿದೆ. ಹಾಗಾಗಿ ತಕ್ಷಣ ಮಾಸಾಶನ ಆರಂಭಿಸುವಂತೆ ಟ್ರಜರಿ ಅಧಿಕಾರಿಗಳ ಬಳಿ ಮನವಿ ಮಾಡಿದರೆ ಕೆ 1 ರಿಂದ ಕೆ 2 ಮಾಡುವ ಕೆಲಸ ನಡೆಯುತ್ತಿರುವುದರಿಂದ ವಿಲೆ ಆಗಿದೆ ಎನ್ನುತ್ತಾರೆ.
ಅಂಚೆ ಮೂಲಕ ಹಣ ಪಡೆಯುವವರಿಗೆ ಬರುತ್ತಿದೆ. ಆದರೆ ಬ್ಯಾಂಕ್ ಮೂಲಕ ಮಾಸಾಶನ ಪಡೆಯುವವರಿಗೆ ಮಾತ್ರ ಈ ತೊಂದರೆ ಆಗುತ್ತಿದೆ. ಹಾಗಾಗಿ ತಕ್ಷಣ ಮಾಸಾಶನ ಆರಂಭಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆಗಳನ್ನು ತೋಡಿಕೊಂಡಿದ್ದೇವೆ. ಆದರೆ, ಯಾವುದೇ ಕ್ರಮ ಜರುಗಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ನಮಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.