ತುರುವೇಕೆರೆ
ಕೊಬ್ಬರಿಗೆ ಬೆಂಬಲ ಬೆಲೆಯನ್ನು 15,000 ರೂ.ಗೆ ಹೆಚ್ಚಿಸಬೇಕೆಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಬ್ಬರಿ ಬೆಳೆಯುವ ರೈತರು ಸರ್ಕಾರದ ಕಣ್ಣಿಗೆ ಕಾಣದಂತಾಗಿದ್ದಾರೆ. ಪೆಟ್ರೋಲ್, ಡೀಸೆÀಲ್ ಬೆಲೆಯನ್ನು ಒಂದೇ ತಿಂಗಳಲ್ಲಿ 26 ರೂಪಾಯಿಗಳಷ್ಟು ಹೆಚ್ಚಿಸಿದ್ದು, ಹಿಂದಿನ ಸರ್ಕಾರಗಳು ಕೇವಲ 2 ರೂಪಾಯಿ ಹೆಚ್ಚಿಸಿದರೆ ಸಾಕು, ಈ ಹಿಂದೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದರು. ಕೇಂದ್ರ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ಪೆಟ್ರೋಲ್, ಡೀಸೆÀಲ್ ಬೆಲೆ ಅಧಿಕವಾಗುತ್ತಿದೆ. ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ, ಪ್ರಯಾಣಿಕರ ಸಾರಿಗೆ, ಆಟೋ ವಾಹನಗಳ ದರವೂ ಹೆಚ್ಚಾಗಲಿವೆ. ಇದರಿಂದ ಸಾಮಾನ್ಯ ಜನರ ಮೇಲೆ ಹೊಡೆತ ಬೀಳಲಿದೆ. ನಾಫೆಡ್ ಮೂಲಕ ರಾಗಿ ಖರೀದಿಸಿದ ಸರ್ಕಾರ ಕೆಲ ರೈತರ ಖಾತೆಗಳಿಗೆ ಹಣ ಜಮೆ ಮಾಡಲು ಸಾಧ್ಯವಾಗಿಲ್ಲ ಎಂದರು.
ತಾಲ್ಲೂಕಿನ ಮುನಿಯೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು 48 ಗಂಟೆಯೊಳಗೆ ಬಂಧಿಸುವುದಾಗಿ ಪೊಲೀಸ್ ಇಲಾಖೆ ತಿಳಿಸಿತ್ತು. ಆದರೆ ಇದುವರೆವಿಗೂ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಮುಂದಿನ 2 ದಿನಗಳಲ್ಲಿ ಆರೋಪಿಯನ್ನು ಬಂಧಿಸದಿದ್ದಲ್ಲಿ ರೈತರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಿ.ಪಿ.ಐ. ಕಚೇರಿ ಎದುರು ಧರಣಿ ಮಾಡುವುದಾಗಿ ಎಚ್ಚರಿಸಿದರು. ಶಾಸಕರ ಹಿಂಬಾಲಕರು ನನ್ನ ಬಗ್ಗೆ ಲಘುವಾಗಿ ಪತ್ರಿಕಾ ಹೇಳಿಕೆ ನೀಡಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇಂತಹ ಬೆಳವಣಿಗೆಯನ್ನು ಸಹಿಸಿ ಕೂರುವವನು ನಾನಲ್ಲ. ಇದಕ್ಕೆ ತಕ್ಕ ಬೆಲೆ ತೆರಬೇಕಾದೀತು ಎಂದರು.ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್, ಶಿವರಾಂ, ಮಂಗೀಕುಪ್ಪೆ ಬಸವರಾಜು, ಅಫ್ಜಲ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ