ತುಮಕೂರು
ರಾಜ್ಯ ಸರ್ಕಾರ ಶಾಲೆಗಳಲ್ಲಿ ಎಲ್‍ಕೆಜಿ ಯುಕೆಜಿ ಆರಂಭಿಸುವ ಪ್ರಕ್ರಿಯೆಯನ್ನು ಕೈಬಿಟ್ಟು ಅಂಗನವಾಡಿ ಕೇಂದ್ರಗಳಲ್ಲೇ ಎಲ್‍ಕೆಜಿ ಯುಕೆಜಿ ಆರಂಭಿಸಬೇಕು. ಆ ಮೂಲಕ 3 ರಿಂದ 6 ವರ್ಷದೊಳಗಿನ ಮಕ್ಕಳ ಲಾಲನೆ ಮತ್ತು ಪಾಲನೆಗಿರುವ ಐಸಿಡಿಎಸ್ ಯೋಜನೆಯನ್ನು ಬಲಪಡಿಸುವಂತೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ನೇತೃತ್ವದಲ್ಲಿ ಸಾವಿರಾರು ಅಂಗನವಾಡಿ ನೌಕರರು ತುಮಕೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಟೌನ್‍ಹಾಲ್‍ನಲ್ಲಿ ಸಮಾವೇಶಗೊಂಡ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಅಂಗನವಾಡಿ ನೌಕರರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಬಲವಾಗಿ ಖಂಡಿಸಿದರು. ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕೇಂದ್ರ ಸರ್ಕಾರ ಅಕ್ಟೋಬರ್ 2018ರಲ್ಲಿ ಹೆಚ್ಚಳ ಮಾಡಿರುವ ಗೌರವ ಧನವನ್ನು ಬಾಕಿ ಸಮೇತ ಈ ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲೆಯ ಅಂಗನವಾಡಿ ನೌಕರರಿಗೆ ಕೋಳಿ ಮೊಟ್ಟೆ, ತರಕಾರಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಖಾತ್ರಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಸೇವಾ ಜೇಷ್ಠತೆ ಆಧಾರದಲ್ಲಿ ಕನಿಷ್ಟ ವೇತನ 18 ಸಾವಿರ ಜಾರಿ ಮಾಡಬೇಕು ಹಾಗೂ ಅಂಗನವಾಡಿ ನೌಕರರು ಕೆಲಸದ ನಿಮಿತ್ತ ಓಡಾಡುವಾಗ ಆದ ಅಪಘಾತಗಳಿಗೆ ಪರಿಹಾರ, ಒಂದೇ ಕಡೆ ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಕಡ್ಡಾಯ ವರ್ಗಾವಣೆ, ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿ ಮತ್ತು ಸಹಾಯಕಿಯನ್ನು ನೀಡಬೇಕು. ನೇರ ನಗದು ಯೋಜನೆಯನ್ನು ಕೈಬಿಡಬೇಕು. ಖಾಲಿ ಇರುವ ಸಿಡಿಪಿಒ, ಪಿಒ, ಡಿಡಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಮಲ ಮಾತನಾಡಿ, 2016 ರಿಂದ ನಿವೃತ್ತಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಇಡಿಗಂಟು ಮತ್ತು ಪಿಂಚಣಿ ಬಿಡುಗಡೆ ಮಾಡಬೇಕು. ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗೆ ವಿಧಿಸಿರುವ ವಯಸ್ಸಿನ ಮತ್ತು ಭೌಗೋಳಿಕ ವಿಸ್ತೀರ್ಣದ ಮಿತಿ ಸಡಿಗೊಳಿಸಬೇಕು. ಮೃತ ಅಂಗನವಾಡಿ ನೌಕರರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ಕೊಡಬೇಕು ಎಂದು ಹೇಳಿದರು.
ಎಲ್‍ಕೆಜಿ ಯುಕೆಜಿಯನ್ನು ಶಾಲೆಗಳಲ್ಲಿ ಅರಂಭಿಸಿದರೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಲ್ಲದಂತಾಗುತ್ತದೆ. ಐಸಿಡಿಎಸ್ ಯೋಜನೆಯ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗುತ್ತದೆ. ಈ ಯೋಜನೆಯನ್ನು 45 ವರ್ಷಗಳಿಂದಲೂ ನಡೆದುಕೊಂಡು ಬಂದು ಈಗ ದಿಢೀರನೆ ಸರ್ಕಾರ ಇಂತಹ ಕ್ರಮಗಳಿಗೆ ಮುಂದಾದರೆ ಉದ್ದೇಶ ಈಡೇರಿದಂತೆ ಆಗುವುದಿಲ್ಲ. ಐಸಿಡಿಎಸ್ ಯೋಜನೆಯಿಂದ ಮಕ್ಕಳು ಮರಣ ಸಂಖ್ಯೆಯ ಕಡಿಮೆಯಾಗಿದೆ. ಮಕ್ಕಳು, ಗರ್ಭಿಣಿಯರು ಬಾಣಂತಿಯರಿಗೆ ಪೌಷ್ಠಿಕತೆ ಹೆಚ್ಚಿಸಲು ಅನುಕೂಲವಾಗಿದೆ. ಈ ಯೋಜನೆಯಡಿ ಆರೋಗ್ಯ ತಪಾಸಣೆ, ಚುಚ್ಚು ಮದ್ದು ನೀಡುವುದು ಮೊದಲಾದ ಸೇವೆಗಳು ದೊರೆಯುತ್ತಿದ್ದು ಇದು ಬೇರೆ ಕಡೆ ಸಿಗುವುದಿಲ್ಲ. ಹೀಗಾಗಿ ಐಸಿಡಿಎಸ್ ಯೋಜನೆ ಸಹಕಾರಿಯಾಗಿದೆ ಎಂದರು.
ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಜಿಲ್ಲಾ ಖಜಾಂಚಿ ಅನಸೂಯ, ಮುಖಂಡರಾದ ಎಸ್‍ಡಿ ಪಾರ್ವತಮ್ಮ, ನಾಗರತ್ನ ಸರೋಜ, ರವೀಜ, ಅಲವೇಲಮ್ಮ, ವನಜಾಕ್ಷಿ ಶಾಂತಮ್ಮ, ಅನಸೂಯ ಸರೋಜ, ಗೌರಮ್ಮ ಜಬೀನ ವಿನೋದ ಗಂಗಾ ಪ್ರೇಮ ಗೌರಮ್ಮ ಶೈಲಜಾ ಗಾಯತ್ರಿ, ಗೌರಮ್ಮ ಗೀತಾ, ನಾಗರತ್ನ ಕಮಲ ಮಂಜುಳ, ಅನ್ನಪೂರ್ಣ ಪುಷ್ಪ, ವಿರೂಪಾಕ್ಷಮ್ಮ ಮೊದಲಾದವರು ಇದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಂಗನವಾಡಿ ನೌಕರರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಲು ಅನುಕೂಲವಾಗಿದೆ. ತಾವು ನೀಡಿರುವ ಮನವಿಯನ್ನು ಸರ್ಕಾರಕ್ಕೆ ಕಳಿಸಿಕೊಡುತ್ತೇವೆ. ಸ್ಥಳೀಯ ಮಟ್ಟದಲ್ಲಿ ಬಗೆಹರಿಸಬಹುದಾದ ಕುಂದುಕೊರತೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳುತ್ತೇನೆ. ಇದೇ ಜುಲೈ 15 ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
