ಹಾವೇರಿ:

ಈ ಹಿಂದಿನ ಸರ್ಕಾರ ಸಾರ್ವಜನಿಕರಿಗೆ ಪ್ರತಿಯೊಬ್ಬರಿಗೂ ೭ ಕೆ.ಜಿ.ಯಂತೆ ಅಕ್ಕಿಯನ್ನು ನೀಡುತ್ತಿತ್ತು. ಈಗಿನ ಸರ್ಕಾರ ಪ್ರತಿಯೊಬ್ಬರಿಗೆ ೫ ಕೆ.ಜಿ. ನೀಡುತ್ತಿದ್ದು, ತತ್‌ಕ್ಷಣ ಪ್ರತಿಯೊಬ್ಬರಿಗೆ ೭ ಕೆ.ಜಿ.ಯಂತೆ ಅಕ್ಕಿ ೫ ಕೆಜಿ ಗೋಧಿ, ೨ ಕೆಜಿ ಅಡುಗೆ ಎಣ್ಣೆ, ೨ ಕೆಜಿ ತೊಗರಿಬೇಳೆ ಪೂರೈಸಬೇಕು. ಸಂಕಷ್ಟದಲ್ಲಿರುವ ಜನರಿಗೆ ಹಾಗೂ ರೈತರ ನೆರವಿಗೆ ಧಾವಿಸುವಂತೆ ಜಿಲ್ಲಾ ಹಾವೇರಿ ಜಿಲ್ಲಾ ಕಾಂಗ್ರೆಸ್‌ನ ಟಾಸ್ಕ್ ಫೋರ್ಸ್ ಸಮಿತಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಅವರಿಗೆ ಮಂಗಳವಾರ ಮನವಿ ಅರ್ಪಿಸಿ ಆಗ್ರಹಿಸಿದೆ.
ಮಾಜಿ ಸಚಿವರು ಹಾಗೂ ಹಾವೇರಿ ಜಿಲ್ಲಾ ಕಾಂಗ್ರೆಸ್‌ನ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಕಾಂಗ್ರೆಸ್ ಮುಖಂಡರು, ಸರ್ಕಾರ ಬಡಕುಟುಂಬಗಳಿಗೆ ಹಾಲು ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಹಾಲು ವಿತರಣೆ ಆಡಳಿತ ಪಕ್ಷದ ಪ್ರಚಾರಕ್ಕೆ ಬಳಕೆಯಾಗುತ್ತಿದೆ. ಜೊತೆಗೆ ಒಂದು ಪಕ್ಷದ ಕಾರ್ಯಕರ್ತರಿಗೆ ಹಾಲನ್ನು ನೀಡಲಾಗುತ್ತಿದ್ದು, ಸಮರ್ಪಕವಾಗಿ ಬಡವರಿಗೆ ಹಾಲು ವಿತರಣೆಯಾಗುತ್ತಿಲ್ಲ. ಸರ್ಕಾರ ಪೂರೈಸುವ ಹಾಲು ಅರ್ಹ ಬಡ ಕುಟುಂಬದ ಫಲಾನುಭವಿಗಳಿಗೆ ತಲುಪಬೇಕು. ವಲಸೆ ಕಾರ್ಮಿಕರಿಗೆ ಅಲೆಮಾರಿ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ೨ ತಿಂಗಳ ಅವಶ್ಯಕ ಪಡಿತರ ಆಹಾರ ಧಾನ್ಯಗಳನ್ನು ಪೂರೈಸಬೇಕೆಂದು ಆಗ್ರಹಿಸಿದೆ.
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಚಿಕಿತ್ಸೆ ನೀಡುವಂತಾಗಬೇಕು. ಕೊರೊನಾ ಭೀತಿಯ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ಬಂದ್ ಮಾಡಲಾಗಿದೆ. ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವುದರಿಂದ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳೂ ಸಹ ತೆರೆದಿಲ್ಲ. ರೋಗಿಗಳು ಎಲ್ಲಿ ಹೋಗಬೇಕು. ಅನೇಕ ರೋಗಿಗಳು ಕಾಯಿಲೆಗಳಿಂದ ನರಳುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಸರ್ಕಾರಿ ಆಸ್ಪತ್ರೆಯನ್ನೇ ನಂಬಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ಚಿಕಿತ್ಸೆಗಾಗಿ ನಗರದ ಹೊರವಲಯದಲ್ಲಿರುವ ವಸತಿ ನಿಲಯಗಳನ್ನು ದೊಡ್ಡ ದೊಡ್ಡ ಕಟ್ಟಡಗಳನ್ನು ಬಳಸಿಕೊಂಡು ಅವುಗಳನ್ನು ಆಸ್ಪತ್ರೆಗಳನ್ನಾಗಿ ಪರಿವರ್ತಿಸಿ ಅಲ್ಲಿ ಕೊರೊನಾ ಚಿಕಿತ್ಸೆ ನೀಡಬೇಕು. ತಕ್ಷಣ ಜಿಲ್ಲಾ ಕೇಂದ್ರದ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳನ್ನು ತೆರೆದು ಸಾರ್ವಜನಿಕರಿಗೆ ಚಿಕಿತ್ಸೆ ನೀಡಬೇಕು.
ಕೊರೊನಾ ಲಾಕ್‌ಡೌನ್‌ನಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರು ಬೆಳೆದ ಹಸಿಮೆಣಸು, ಹೂವು, ವಿವಿಧ ತರಕಾರಿಗಳು ಹೊಲದಲ್ಲಿಯೇ ಕೊಳೆಯುತ್ತಿವೆ. ರೈತರ ತರಕಾರಿ ಹಾಗೂ ಇತರೆ ಉತ್ಪನ್ನಗಳನ್ನು ಸರ್ಕಾರವು ಎಪಿಎಂಸಿಗಳ ಮೂಲಕ ನೇರವಾಗಿ ಖರೀದಿಸಿ ಸಾರ್ವಜನಿಕರಿಗೆ ಮಾರಾಟದ ವ್ಯವಸ್ಥೆ ಕಲ್ಪಿಸಬೇಕು.
ಲಾಕ್‌ಡೌನ್‌ನಿಂದಾಗಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ದಿನಸಿ ಹಾಗೂ ತರಕಾರಿ, ಅಡುಗೆ ಎಣ್ಣೆ ಕಾಳು-ಕಡಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿ ಬೇಳೆ, ಅಡುಗೆ ಎಣ್ಣೆ ದರ ಎಕ್‌ಧಮ್ ಏರಿಸಲಾಗಿದೆ. ಲಾಕ್‌ಡೌನ್ ವೇಳೆಯ ದುರುಪಯೋಗ ಪಡಿಸಿಕೊಂಡು ಹಲವರು ಹೆಚ್ಚಿನ ದರಕ್ಕೆ ಇವುಗಳನ್ನು ಮಾರುತ್ತಿದ್ದಾರೆ. ದಿನಸಿಗಾಗಲೀ, ತರಕಾರಿಗಾಗಲೀ ಯಾವುದೇ ಅಂಗಡಿಯಲ್ಲಾಗಲೀ ಹೊರಗಡೆಯಾಗಲಿ ಎಂಆರ್‌ಪಿ ದರವನ್ನು ಫಲಕದಲ್ಲಿ ನಮೂದಿಸಿಲ್ಲ.
ಅವಸರದಲ್ಲಿ ಸಾರ್ವಜನಿಕರು ವ್ಯಾಪಾರಿಗಳು ಹೇಳುವ ದರವನ್ನು ಕೊಟ್ಟು ದಿನಸಿ, ತರಕಾರಿ ಖರೀದಿಸುತ್ತಿದ್ದಾರೆ.
ಕೃತಕ ಅಭಾವ ಸೃಷ್ಟಿಸಿ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೇರಲಾಗಿದ್ದು ಜಿಲ್ಲಾಧಿಕಾರಿಗಳು ಮೇಲ್ಕಾಣಿಸಿದ ಸಮಸ್ಯೆಗಳ ಗಂಭೀರತೆಯನ್ನು ಅರಿತು ತಕ್ಷಣ ಕಾರ್ಯಪ್ರವೃತ್ತರಾಗಿ ಎಲ್ಲ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಲಾಕ್‌ಡೌನ್‌ನಿಂದ ತೊಂದರೆಯಲ್ಲಿರುವ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ, ಕಾಂಗ್ರೆಸ್ ಮುಖಂಡರುಗಳದ ಎಸ್.ಎಫ್.ಎನ್. ಗಾಜೀಗೌಡ್ರ, ಜಿಲ್ಲಾ ಪಂಚಾಯತಿ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭಾ ಸದಸ್ಯ ಸಂಜೀವಕುಮಾರ ನೀರಲಗಿ,ಶಿವಜಾತಪ್ಪ ಚನ್ನೂರ, ಬಸವರಾಜ ಬಳ್ಳಾರಿ, ದಾದಾಫೀರ್ ಚೂಡಿಗಾರ, ನಿಂಗರಾಜ ಶಿವಣ್ಣನವರ, ಸತೀಶ ಈಳಗೇರ, ನಾಗರಾಜ ತಳವಾರ, ಗಣೇಶ ಬಿಷ್ಟಣ್ಣನವರ, ಉಳಿವೆಪ್ಪ ಹಲಗಣ್ಣನವರ ಅನೇಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
