ಬಳ್ಳಾರಿ
ಕಳೆದೆರಡು ವರ್ಷಗಳಿಂದ ಬಳ್ಳಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರತ ಪತ್ರಕರ್ತರಿಗೆ ಮಾನ್ಯತಾ ಪತ್ರ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಮಲಿಂಗಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಜಗನ್ಮೋಹನರೆಡ್ಡಿ ನೇತೃತ್ವದ ನಿಯೋಗವು ಇಂದು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರನ್ನು ಭೇಟಿಯಾಗಿ, ಪತ್ರಕರ್ತರೇ ನೋಡಿರದ ಪತ್ರಿಕೆಯೊಂದರ ಹೆಸರಿನಲ್ಲಿ ಪತ್ರಕರ್ತರೊಬ್ಬರಿಗೆ ಮಾನ್ಯತಾ ಪತ್ರ ನೀಡಲಾಗಿದೆ. ಹೊಸಪೇಟೆ ಟೈಮ್ಸ್ ಪತ್ರಿಕೆಯ ಫೋಟೋಗ್ರಾಫರ್ ಹೆಸರಿನಲ್ಲಿ ಹೊಸಪೇಟೆಯ ವರದಿಗಾರರೊಬ್ಬರಿಗೂ ನೀಡಲಾಗಿದೆ.
ಇನ್ನೂ ಪ್ರೊಬೆಷನರಿ ಹುದ್ದೆಯಲ್ಲಿರುವ ರಾಮಲಿಂಗಪ್ಪ ಒಂದು ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತನಿಗೂ ಮತ್ತೊಂದು ಹೆಸರಿನ ಪತ್ರಿಕೆಯ ಮಾನ್ಯತಾ ಪತ್ರ ನೀಡಿದ್ದಾರೆ. ದೃಶ್ಯ ಮಾಧ್ಯಮವೊಂದಕ್ಕೆ ಇಬ್ಬರಿಗೆ, ಬಳ್ಳಾರಿಯಿಂದ ಪ್ರಕಟಗೊಳ್ಳುವ ವರದಿಗಾರರು ಸಂಪಾದಕರಿಂದ ತಂದ ಪತ್ರ ಇಲ್ಲದಿದ್ದರೂ ಮಾನ್ಯತೆ ಪತ್ರ ನೀಡಿದ್ದಾರೆ. ಕೆಲ ಛಾಯಾಗ್ರಾಹಕರು ಹಂಪಿ ಉತ್ಸವ ಸಂದರ್ಭದಲ್ಲಿ ಮಾತ್ರ ಗೋಚರಿಸುತ್ತಾರೆ.
ಅಂಥವರಿಗೂ ಮಾನ್ಯತಾ ಪತ್ರ ನೀಡಲಾಗಿದೆ. ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಡೆಸದೇ ತಾರತಮ್ಯ ನೀತಿ ಅನುಸರಿಸುವ ಮೂಲಕ ಕರ್ತವ್ಯದಲ್ಲಿ ವಿಫಲರಾಗಿದ್ದಾರೆ. ಮಾನ್ಯತಾ ಪತ್ರ ವಿತರಣೆ ಮಾಡುವಲ್ಲಿ ಅವ್ಯವಸ್ಥೆ ಆಗಿದ್ದು ಈ ಕುರಿತು ರಾಮಲಿಂಗಪ್ಪ ಅವರನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು. ಅನಧೀಕೃತವಾಗಿ ಮಾನ್ಯತಾ ಪತ್ರ ಪಡೆದುಕೊಂಡಿರುವ ಪತ್ರಕರ್ತರು ಮತ್ತು ಛಾಯಾಗ್ರಾಹಕರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮಲ್ಲಯ್ಯ ಮೋಕಾ, ಸದಸ್ಯರಾದ ರವಿ., ಮಲ್ಲಿಕಾರ್ಜುನ, ಪ್ರವೀಣ್ ರಾಜ್, ಗುರುಶಾಂತ್ ಇನ್ನಿತರರು ಇದ್ದರು.