ಹಾಸ್ಟೆಲ್ ಸಿಬ್ಬಂದಿಯೂ ವಾರಿಯರ್ಸ್ : ಮನವಿ

ಗುಬ್ಬಿ

  ಕೋವಿಡ್-19 ವೈರಸ್ ಸೋಂಕಿತರು ಹಾಗೂ ಶಂಕಿತರನ್ನು ಕ್ವಾರಂಟೈನ್ ಮಾಡಲು ಬಳಸಿಕೊಂಡ ಸರ್ಕಾರಿ ಹಾಸ್ಟೆಲ್‍ಗಳ ಸಿಬ್ಬಂದಿಯನ್ನು ಕೂಡ ಕೊರೋನಾ ವಾರಿಯರ್ಸ್ ಎಂದು ಘೋಷಿಸಿ ವಿಶೇಷ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ವಿ.ನಾರಾಯಣ್ ಒತ್ತಾಯಿಸಿದರು.

    ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿ ವತಿಯಿಂದ ಮನವಿಯನ್ನು ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ವ್ಯಾಪಕವಾಗಿ ಹರಡಿದ ವೈರಸ್ ಪ್ರಸ್ತುತ ಗ್ರಾಮೀಣ ಭಾಗದಲ್ಲೂ ಹೆಚ್ಚಾಗುತ್ತಿದೆ. ಪಾಸಿಟೀವ್ ಪ್ರಕರಣ ಬಂದ ಬೆನ್ನಲ್ಲೇ ಪ್ರಾಥಮಿಕ ಸಂಪರ್ಕಿತರನ್ನು ಬಹುಬೇಗ ಕ್ವಾರಂಟೈನ್ ಮಾಡಲು ಸರ್ಕಾರಿ ಹಾಸ್ಟೆಲ್ ಬಳಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ಅಡುಗೆ ಸಿಬ್ಬಂದಿ, ರಾತ್ರಿ ಕಾವಲುಗಾರರು, ವಾರ್ಡ್‍ನ್‍ಗಳು ಸೇವೆ ಮಾಡಲು ನಿಕಟ ಸಂಪರ್ಕಿಗಳಾಗಿರುತ್ತಾರೆ. ಇವರ ಬಗ್ಗೆ ಕಾಳಜಿ ವಹಿಸಲು ಸರ್ಕಾರ ಮುಂದಾಗಬೇಕು ಎಂದರು.

    ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆಯ ತಾಲ್ಲೂಕಿನ ಎಲ್ಲಾ ಹಾಸ್ಟೆಲ್ ಬಳಸಿಕೊಳ್ಳಲಾಗಿದೆ. ಸುಮಾರು 50 ಕ್ಕೂ ಅಧಿಕ ಸಿಬ್ಬಂದಿ ಈ ಕರ್ತವ್ಯದಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಆಶಾ ಕಾರ್ಯಕರ್ತೆಯರನ್ನು ಗುರುತಿಸಿದ ಮಾದರಿಯಲ್ಲೆ ಕೊರೋನಾ ವಾರಿಯರ್ಸ್ ಎಂದು ವಿಶೇಷ ಸೌಲಭ್ಯ ನೀಡಬೇಕು. ಜತೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಸ್ಟೆಲ್ ನಿರ್ವಹಣೆಗೆ ನೇಮಿಸಲಾಗಿದೆ. ಅವರನ್ನೂ ಸಹ ವಾರಿಯರ್ಸ್‍ಗಳ ಪಟ್ಟಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಸರ್ಕಾರಿ ನೌಕರರ ಸಂಘದ ತಾಲ್ಲೂಕು ನಿರ್ದೇಶಕ ರಮೇಶ್ ಮಾತನಾಡಿ, ಬೆಂಗಳೂರಿನ ಕಾಡುಗೋಡಿ ಸರ್ಕಾರಿ ಹಾಸ್ಟೆಲ್‍ನಲ್ಲಿ ವಾರ್ಡ್‍ನ್ ಆಗಿದ್ದ ಉಮೇಶಪ್ಪ ಎಂಬುವವರು ಕೊರೋನಾ ವೈರಸ್‍ಗೆ ತುತ್ತಾಗಿ ಮರಣ ಹೊಂದಿದ್ದಾರೆ. ಕ್ವಾರಂಟೈನ್‍ನಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ವೈರಸ್ ಬಂದಿರುವ ಕಾರಣ ಮೃತಪಟ್ಟಿದ್ದು, ಅವರ ಕುಟುಂಬಕ್ಕೆ ಯಾವುದೇ ಆಸರೆ ನೀಡಲಾಗುತ್ತಿಲ್ಲ. ಪರಿಹಾರ ಕೂಡ ಸಿಕ್ಕಿಲ್ಲ. ಮೃತ ಉಮೇಶಪ್ಪ ಅವರ ಕುಟುಂಬಕ್ಕೆ ವಾರಿಯರ್ಸ್‍ಗಳೆಂದು ಗುರುತಿಸಿ ವಿಶೇಷ 50 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.

    ವೈರಸ್ ನಿರ್ಮೂಲನೆಗೆ ಶ್ರಮಿಸುತ್ತಿರುವವರ ಪಟ್ಟಿಯಲ್ಲಿ ಕ್ವಾರಂಟೈನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಮರೆತಿರುವುದು ವಿಷಾದನೀಯ. ಸರ್ಕಾರದ ಕಣ್ಣು ತೆರೆಸಲು ಓರ್ವ ಸಿಬ್ಬಂದಿ ಮೃತಪಡುವಂತಾಯಿತು. ವಾರಿಯರ್ಸ್ ಪಟ್ಟಿಯಲ್ಲಿ ಎಲ್ಲಾ ಹಾಸ್ಟೆಲ್ ಸಿಬ್ಬಂದಿಯನ್ನು ಸೇರಿಸಿ ಅವರಿಗೂ ವಿಶೇಷ ಭತ್ಯೆಗಳು, ಮೃತಪಟ್ಟರೆ ಪರಿಹಾರ ನೀಡುವ ಮೂಲಕ ಕೆಲಸ ಮಾಡುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ನಮ್ಮ ಸೇವೆ ನಿರಂತರವಾಗಿ ಸಾಗಲಿದೆ. ಈ ದೃಷ್ಟಿಯಲ್ಲಿ ನಮ್ಮ ಕುಟುಂಬಕ್ಕೂ ಆಸರೆ ನೀಡಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ತಾಲ್ಲೂಕು ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಜಯಸಿಂಹ, ವಾರ್ಡ್‍ನ್‍ಗಳಾದ ಅನಂತಕುಮಾರ್, ಪವಿತ್ರ, ಭಾಗ್ಯಮ್ಮ, ಸುರೇಶ್ ಕಾರ್ವೆಕರ್, ಮಂಜಮ್ಮ, ಬಸವರಾಜು, ನರಸಿಂಹಮೂರ್ತಿ, ಮುದ್ದಹನುಮಯ್ಯ, ಗಂಗಾಧರಯ್ಯ, ವಿಜಯ್‍ಕುಮಾರ್, ವಿನಾಯಕ ದೊಡ್ಡಮನಿ, ಲಕ್ಕಪ್ಪ ಸನದಿ, ಹಬೀಬ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap