ಹೂವಿನಹಡಗಲಿ

ರೈತರ ಬದುಕಿಗೆ ಬೆಳಕಾಗಬೇಕಾದ ಡಾ. ಸ್ವಾಮಿನಾಥನ್‍ರವರ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂದು ಎ.ಐ.ಟಿ.ಯು.ಸಿ. ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಆಗ್ರಹಿಸಿದರು.
ಅವರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಆಯೋಜಿಸಲಾಗಿದ್ದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಶಾಸ್ತ್ರೀ ವೃತ್ತದಲ್ಲಿ ನಡೆದಂತಹ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶ ಇಂದು ಆರ್ಥಿಕವಾಗಿ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ ಎಂದ ಅವರು, ಇದಕ್ಕೆ ಮುಖ್ಯ ಕಾರಣ ನೂತನವಾಗಿ ಜಾರಿಗೊಂಡಂತಹ ನೀತಿ ರೂಪನೆಗಳೆ ಎಂದರು.
ರೈತರು ಕಾರ್ಮಿಕರು, ಮಹಿಳೆಯರು ಯುವ ಜನತೆ ವಿದ್ಯಾರ್ಥಿಗಳು ಸೇರಿದಂತೆ ಶ್ರಮಿಕವರ್ಗ ಅಸಮಾನತೆಯಿಂದ ಬಳಲುತ್ತಿದೆ. ನಿರುದ್ಯೋಗ ಅನಗತ್ಯ ವಸ್ತುಗಳ ಬೆಲೆ ಏರಿಕೆ ರೈತರ ಆತ್ಮಹತ್ಯೆ ಇವುಗಳು ಇತ್ತೀಚಿನ ದಿನಮಾನಗಳಲ್ಲಿ ಭಾರತವನ್ನು ಬೆಂಬಿಡದ ಭೂತವಾಗಿ ಕಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್.ಆರ್.ಸಿ. ಮತ್ತು ಎನ್.ಪಿ.ಆರ್. ಕಾಯ್ದೆ ಜಾರಿಗೊಳಿಸುವ ನಿರ್ಧಾರವನ್ನು ತಕ್ಷಣವೇ ಕೈಬಿಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ದುಡಿಯುವ ವರ್ಗಕ್ಕೆ ಸಮಾನ ವೇತನ ನೀಡಬೇಕು, ಕಾತ್ರಿ ಪಿಂಚಣಿದಾರರು ಮತ್ತು ಮಾಸಿಕ ಪಿಂಚಣಿ ಕನಿಷ್ಠ 10 ಸಾವಿರ ನೀಡಬೇಕು, ಐ.ಎಲ್.ಓ. 87 ಮತ್ತು 98 ಸಮಾವೇಶಗಳ ಸಂಸತ್ತಿನ ಅನುಮೋದನೆ ನೀಡಿ, ಕಾರ್ಮಿಕ ಸಂಘಟನೆಗಳ ಮಾನ್ಯತೆಗೆ ಶಾಸನ ರೂಪಿಸಬೇಕು ಎಂದರು.
ವಿಕಲಚೇತನರ ಮಾಶಾಸನವನ್ನು 2500ಕ್ಕೆ ಹೆಚ್ಚಿಸಿ, ವಸತಿ ಸೌಲಭ್ಯ, ಬಸ್‍ಪಾಸ್, ಅಂತರ ವಿಸ್ತರಣೆ ಮಾಡಿ ವಿ.ಆರ್.ಡಬ್ಲ್ಯೂ, ಯು.ಆರ್.ಡಬ್ಲ್ಯೂ, ಎಂ.ಆರ್. ಡಬ್ಲ್ಯೂ ಹುದ್ದೆಗಳನ್ನು ಖಾಯಂಗೊಳಿಸಬೇಕೆಂದು ಹೇಳಿದರು. ಬಿಸಿಯೂಟ, ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರನ್ನು ಖಾಯಂಗೊಳಿಸಿ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ತಿಳಿಸಿದರು. ಹಾಸ್ಟಲ್ ಕೆಲಸ ಮಾಡುವ ನೌಕರರನ್ನು ಹೊರಗುತ್ತಿಗೆಯಿಂದ ಬಿಡುಗಡೆಗೊಳಿಸಿ, ಖಾಯಂ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಎನ್.ಮಂಜುಳ, ಶಾಂತರಾಜ್ ಜೈನ್ ಮಾತನಾಡಿದರು. ನಂತರದಲ್ಲಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸಂದರ್ಭದಲ್ಲಿ ಕಮಲಾಕ್ಷಿ ಕರೆಯತ್ತಿನ , ಬಿ.ಜಯಲಕ್ಷ್ಮಿ, ಕವಿತ, ಸುನಿತಾ ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
