ಬೆಂಗಳೂರು
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಡಿ.ಪಿ.ಆರ್ ಗೆ ತ್ವರಿತವಾಗಿ ಒಪ್ಪಿಗೆ ನೀಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.
ನಾಲ್ಕು ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಹಾಗೂ ಕುಡಿಯುವ ನೀರೂ ಒದಗಿಸುವ ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ ಎಂದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಸದಾನಂದಗೌಡ,ಶ್ರೀಮತಿ ನಿರ್ಮಲಾ ಸೀತಾರಾಮನ್ ಸೇರಿದಂತೆ ರಾಜ್ಯದ ನಾಲ್ಕು ಮಂದಿ ಕೇಂದ್ರ ಸಚಿವರಿಗೆ,ಸಂಸದರಿಗೆ,ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂಬಂಧ ದೆಹಲಿಗೆ ಹೋಗಿ ಎಲ್ಲರಿಗೂ ಮನವಿ ಸಲ್ಲಿಸಿದ್ದೇನೆ.ತಮಿಳ್ನಾಡಿನವರು ಈ ಯೋಜನೆಗೆ ತಕರಾರು ತೆಗೆದಿದ್ದಾರೆ.ನಾನು ಅವರ ಜತೆ ಜಗಳ ಮಾಡಲು ಸಿದ್ಧನಿಲ್ಲ.ಅವರು ನಮ್ಮ ನೆರೆ ರಾಜ್ಯದವರು,ನಮ್ಮ ಸಹೋದರರು.ಆದರೆ ಯೋಜನೆಗೆ ಬಳಕೆಯಾಗುತ್ತಿರುವುದು ನಮ್ಮ ನೀರು ಎಂದರು.
ಮುಂಚೆ ಮೇಕೆದಾಟು ಆಣೆಕಟ್ಟು ಕಟ್ಟುವ ಮೂಲಕ ಮುನ್ನೂರು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಚನೆ ಇತ್ತು.ಈಗ ಅದು ನಾಲ್ಕು ನೂರಕ್ಕೇರಿದೆ ಎಂದ ಅವರು,ಬೆಂಗಳೂರಿಗೆ ಕುಡಿಯುವ ನೀರು ಒದಗಿಸಲು ಮೇಕೆದಾಟು ಯೋಜನೆಯನ್ನು ಪೂರ್ಣಗೊಳಿಸುವ ಬದಲು ಲಿಂಗನಮಕ್ಕಿ ಜಲಾಶಯದ ಮೇಲೆ ಕಣ್ಣು ಹಾಕಿರುವುದು ಸರಿಯಲ್ಲ ಎಂಬ ಮಾತಿಗೆ ಹೆಚ್ಚು ಉತ್ತರ ನೀಡುವ ಗೋಜಿಗೆ ಹೋಗಲಿಲ್ಲ.
ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರನ್ನು ಬೆಂಗಳೂರಿಗೆ ತರಬೇಕು ಎಂಬ ಪ್ರಸ್ತಾವದ ಬಗ್ಗೆ ಸಿಎಂ ಹಾಗೂ ಡಿಸಿಎಂ ಹೇಳಿದ್ದಾರೆ.ಈ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ.ಆದರೆ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಹೊರಗಿನಿಂದ ನೀರು ತರುವ ಅನಿವಾರ್ಯತೆ ಇದೆ ಎಂದರು.
ಬೆಂಗಳೂರಿನ ಬೆಳವಣಿಗೆಯನ್ನು ತಡೆಯಲು ವಲಸಿಗರಿಗೆ ನಿರ್ಭಂಧ ಹೇರಬೇಕು ಎಂಬುದು ಸೇರಿದಂತೆ ಮೂರು ಬಗೆಯ ಚಿಂತನೆ ನಡೆಯುತ್ತಿದೆ.ಆದರೆ ಇವತ್ತಿನ ಪರಿಸ್ಥಿತಿ ಕರಾಳವಾಗಿದೆ ಎಂದರು.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಕಳೆದ ವರ್ಷ ಮೂವತ್ತು ಟಿಎಂಸಿ ನೀರಿತ್ತು.ಆದರೆ ಈಗ ಹತ್ತು ಟಿಎಂಸಿ ನೀರು ಮಾತ್ರ ಇದೆ.ಕಳೆದ ವರ್ಷ ಇದೇ ಹೊತ್ತಿಗೆ ಪ್ರತಿದಿನ 7603 ಕ್ಯೂಸೆಕ್ಸ್ ನೀರಿನ ಒಳಹರಿವಿದ್ದರೆ,ಈ ವರ್ಷ ಕೇವಲ 669 ಕ್ಯೂಸೆಕ್ಸ್ ನೀರಿನ ಒಳಹರಿವಿದೆ ಎಂದರು.ನಾನು ವಿದ್ಯುತ್ ಸಚಿವನಾಗಿದ್ದಾಗಿನಿಂದಲೂ ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ಕುಡಿಯುವ ನೀರು ತರಬೇಕು ಎಂಬ ಪ್ರಸ್ತಾಪವಿತ್ತು.ಆದರೆ ಅದನ್ನು ತಡೆದುಕೊಂಡೇ ಬಂದಿದ್ದೇನೆ ಎಂದು ಅವರು ಮಾರ್ಮಿಕವಾಗಿ ನುಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
