ದಾವಣಗೆರೆ:
ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಪ್ರಧಾನಿ ಭಾರತ ಲಾಕ್‍ಡೌನ್ ಮಾಡಿದ್ದರೂ, ಜನರ ಅವಶ್ಯಕತೆ ಪೂರೈಸಲು ಕೆಲ ನಿಯಮ ಸಡಿಲಿಸಿರುವುದನ್ನು ಕೆಲವರು ದುರುಪಯೋಗ ಪಡೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಬಿದ್ದರೆ ಕಫ್ರ್ಯೂ ವಿಧಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕರು ಆದ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಭಾನುವಾರ ನಡೆದ ಕೊರೊನಾ ವೈರಸ್ ಕುರಿತ ಜಾಗೃತಿ ಅಭಿಯಾನದ ನೇತೃತ್ವ, ಔಷಧಿ ಸಿಂಪಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ಹರಡುತ್ತಿರುವುದನ್ನು ತಡೆಯುವ ಉದ್ದೇಶದಿಂದ ಏ.14ರ ವರೆಗೆ ಭಾರತ ಲಾಕ್‍ಡೌನ್ ಮಾಡಲಾಗಿದೆ. ಆದರೆ, ಜನರ ಅಗತ್ಯಗಳಾದ ತರಕಾರಿ, ಹಾಲು, ಹಣ್ಣು ಸೇರಿದಂತೆ ಇತರೆ ವಸ್ತುಗಳನ್ನು ಪೂರೈಸುವ ಉದ್ದೇಶದಿಂದ ಕೆಲ ನಿಯಮಗಳನ್ನು ಸಡಿಲಗೊಳಿಸಿರುವುದನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೆಟ್ರೋಲ್ ಬಂಕ್‍ಗಳು ಸಹ ಅವಶ್ಯ ವಸ್ತುಗಳ ಅಡಿ ಬರುವ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು. ಆದರೆ, ಕೆಲ ಯುವಕರು ಪೆಟ್ರೋಲ್ ಸಿಗುತ್ತೆ ಎಂಬ ಕಾರಣಕ್ಕೆ ಬೈಕ್‍ಗಳಲ್ಲಿ ಶೋಕಿ ಮಾಡುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ, ಇನ್ನೂ ಕೆಲವರು ಗ್ರಾಮೀಣ ಪ್ರದೇಶಗಳಲ್ಲಿ ಗುಂಪು, ಗುಂಪಾಗಿ ಸೇರಿಕೊಂಡು ಜೂಜಾಡುತ್ತಿದ್ದಾರೆ. ಇವರಿಗೆ ಮೋದಿ ಕಳಕಳಿ ಮತ್ತು ಸಾಮಾಜಿಕ ಅಂತರದ ಅರ್ಥವಾದರೂ ಗೊತ್ತಿದಿಯೇ? ಎಂದು ಖಾರವಾಗಿ ಪ್ರಶ್ನಿಸಿದರು.
ಸಾರ್ವಜನಿಕರು ಯಾವುದೇ ಕಾರಣಕ್ಕೂ ಸಡಿಲಗೊಂಡಿರುವ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು. ದಯವಿಟ್ಟು ಏ.14ರ ವರೆಗೂ ಮನೆಯೊಳಗೆ ಇರುವ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಕಾಯಿಪೇಟೆ, ಎಂ.ಬಿ.ಕೇರಿ, ತ್ಯಾಪೇರಗಲ್ಲಿ, ಹೋಂಡದ ವೃತ್ತ, ಶಿವಾಜಿ ವೃತ್ತ ಸೇರಿದಂತೆ ಹಲವೆಡೆ ಕೊರೊನಾ ಕುರಿತು ಜಾಗೃತಿ ಮೂಡಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯರಿಗೆ ಮಹಾನಗರ ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಸೌಮ್ಯ ನರೇಂದ್ರಕುಮಾರ್, ಸದಸ್ಯೆ ಗಾಯತ್ರಿ ಬಾಯಿ, ನಾಮನಿರ್ದೇಶಕ ಸದಸ್ಯರಾದ ಜಯಮ್ಮ, ಶಿವನಗೌಡ ಪಾಟೀಲ್, ತರಕಾರಿ ಶಿವು, ಜಿ.ಪಂ. ಸದಸ್ಯೆ ಉಮಾ ಎಂ.ಪಿ.ರಮೇಶ್, ಬಿಜೆಪಿ ಮುಖಂಡರಾದ ಪಿ.ಸಿ.ಶ್ರೀನಿವಾಸ್, ಪ್ರವೀಣ್ ಜಾಧವ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ