ಉ.ಕರ್ನಾಟಕದ ಜನತೆಗೆ ಹೆಚ್ಚಿನ ಸೌಲಭ್ಯಕ್ಕೆ ಕೇಂದ್ರದ ಮೇಲೆ ಒತ್ತಡ :ಬಿ.ಶ್ರೀರಾಮುಲು.

ಚಳ್ಳಕೆರೆ

    ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ಮಧ್ಯಂತರ ಪರಿಹಾರ ಧನವನ್ನು ನೀಡಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೆರವು ಒದಗಿಸುವಂತೆ ಮಾನ್ಯ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ವಿನಂತಿಸಲಿದ್ದು, ಈ ಬಗ್ಗೆ ಉತ್ತರ ಕರ್ನಾಟಕ ಜನರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಸಿದ್ದವಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಿಳಿಸಿದರು.

     ಅವರು, ಭಾನುವಾರ ಇಲ್ಲಿನ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ವಿವಾಹ ಸಂದರ್ಭಕ್ಕೆ ಆಗಮಿಸಿದ್ದ ನಂತರ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಬಾರಿ ಚಳ್ಳಕೆರೆಗ ಭೇಟಿ ನೀಡಿದಾಗ ಕೇಂದ್ರ ಸರ್ಕಾರ ಪರಿಹಾರ ಒದಗಿಸುವಲ್ಲಿ ಯಾವುದೇ ಅನುಮಾನ ಬೇಡವೆಂದು ನಾನು ತಿಳಿಸಿದ್ದೆ. ಈಗ ಎಲ್ಲರ ನಿರೀಕ್ಷೆಯಂತೆ ಪರಿಹಾರವನ್ನು ಒದಗಿಸಲಾಗಿದೆ. ಆದರೂ ಸಹ ಕಾಂಗ್ರೆಸ್ ಪಕ್ಷ ಇದರಲ್ಲೂ ಸಹ ರಾಜಕೀಯ ಮಾಡಲು ಹೊರಟಿದೆ. ಯಾವುದೇ ಹಂತದಲ್ಲಾಗಲಿ ಉತ್ತರ ಕರ್ನಾಟಕದ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಸರ್ಕಾರ ಜಾಗ್ರತೆ ವಹಿಸುವುದು. ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರನ್ನು ಹರಿಸುವ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲೂ ಜಿಲ್ಲೆಯ ನೀರಿನ ಸಮಸ್ಯೆ ಬಿಗುಡಾಯಿಸದಂತೆ ಎಚ್ಚರಿಕೆ ವಹಿಸಲಾಗುವುದು.

      ರಾಜ್ಯದ ಸಾರ್ವಜನಿಕರ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸನ್ನದ್ದವಾಗಿದೆ. ಇಲಾಖೆಯ ಸೌಲಭ್ಯಗಳ ಬಗ್ಗೆ ಪ್ರಾಥಮಿಕ ಮಾಹಿತಿ ಮಾತ್ರ ನನಗೆ ದೊರಕಿದ್ದು, ಈ ಬಗ್ಗೆ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೌಲಭ್ಯಗಳನ್ನು ನೀಡಲಾಗುವುದು.

      ಈಗಾಗಲೇ ಖಾಲಿ ಇರುವ ಹುದ್ದೆಗಳ ಭರ್ತಿ ಬಗ್ಗೆ ಮಾಹಿತಿ ಪಡೆದಿದ್ದು, ಮುಂದಿನ ದಿನಗಳಲ್ಲಿ ವೈದ್ಯರೂ ಸೇರಿದಂತೆ ಸಿಬ್ಬಂದಿಯನ್ನು ನೇಮಕ ಮಾಡಿ ಆರೋಗ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಜಾಗ್ರತೆ ವಹಿಸಲಾಗುವುದು. ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡುವ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ಸರ್ಕಾರ ಮೇಲೆ ಒತ್ತಾಯವಿದ್ದು, ಈ ಸಮಸ್ಯೆಯನ್ನು ಸಹ ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬಗೆಹರಿಸುವರು ಎಂದರು.

      ಶ್ರೀವಾಲ್ಮೀಕಿ ಕಲ್ಯಾಣ ಮಂಟಪದ ಆಡಳಿತ ಕಚೇರಿಗೆ ಭೇಟಿ ನೀಡಿದ ಸಚಿವರ ಶ್ರೀರಾಮುಲುರವರನ್ನು ಶ್ರೀವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್, ನಾಯಕ ಸಮುದಾಯ ಹಾಸ್ಟಲ್, ವಾಲ್ಮೀಕಿ ಮಹಿಳಾ ಸಂಘದ ಸದಸ್ಯರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಚಿತ್ರದುರ್ಗ ರಸ್ತೆಯ ಚಿನ್ಮಯ ಶಾಲೆಯ ಬಳಿ ನಾಯಕ ಸಮುದಾಯದ ಹಾಸ್ಟಲ್ ಜಾಗವಿದ್ದು, ಅಲ್ಲಿ ನಾಯಕ ಸಮುದಾಯದ ವಿದ್ಯಾರ್ಥಿಗಳಿಗಾಗಿ ಹಾಸ್ಟಲ್ ನಿರ್ಮಾಣ 3 ಕೋಟಿ ವೆಚ್ಚದಲ್ಲಿ ಮಾಡಲಿದ್ದು, ಸಹಕಾರ ಮಾಡುವಂತೆ ಮನವಿ ಮಾಡಿದರು.

      ನಾಯಕ ಹಾಸ್ಟಲ್ ಸಮಿತಿ ಅಧ್ಯಕ್ಷ ಮಲ್ಲಪ್ಪ ನಾಯಕ ಮಾತನಾಡಿ, ಅಂದಾಜು 3 ಕೋಟಿ ವೆಚ್ಚದಲ್ಲಿ ಹಾಸ್ಟಲ್ ನಿರ್ಮಾಣ ಮಾಡುವ ಉದ್ದೇಶವಿದ್ದು, ಜನಾಂಗ ಹಿರಿಯ ನಾಯಕ ದಿವಂಗತ ಮಾಜಿ ಸಚಿವ ತಿಪ್ಪೇಸ್ವಾಮಿಯವರ ಅಭಿಲಾಷೆಯಂತೆ ಹಾಸ್ಟಲ್ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದರಿಂದ ನಾಯಕ ಸಮುದಾಯದ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ವಾಲ್ಮೀಕಿ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷ ಬಂಗ್ಯಪ್ಪಮಾಸ್ಟರ್, ನಿರ್ದೇಶಕರಾದ ಚನ್ನಂಗಿ ರಂಗಸ್ವಾಮಿ, ನಗರಸಭಾ ಸದಸ್ಯ ಸಿ.ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಸ್ಪಪ್ನ, ಕಾರ್ಯದರ್ಶಿ ಸೂರ್ಯಪ್ರಭಾ, ರೂಪ, ಜಿ.ಟಿ.ವೀರಭದ್ರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap