ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ನಿಗಧಿಗೆ ಪ್ರಧಾನಿಗೆ ಮನವಿ : ಎಸ್ಪಿಎಂ

ತುಮಕೂರು

     ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ ಹೆಚ್‍ಎಎಲ್‍ನ ಹೆಲಿಕಾಪ್ಟರ್ ಬಿಡಿ ಭಾಗಗಳ ಉತ್ಪಾದನಾ ಘಟಕ ಬಹುತೇಕ ಸಿದ್ಧವಾಗಿದ್ದು, ಜನವರಿ 2ರಂದು ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಹೆಚ್‍ಎಎಲ್ ಘಟಕದ ಪ್ರಾರಂಭೋತ್ಸವದ ದಿನಾಂಕ ಘೋಷಿಸಬೇಕು ಎಂದು ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡರು ಮನವಿ ಮಾಡಿದ್ದಾರೆ.

     ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ (3-1-2016) ಪ್ರಧಾನಿ ಮೋದಿಯವರು ಹೆಚ್‍ಎಎಲ್ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, 2018ನೇ ಡಿಸೆಂಬರ್ ವೇಳೆಗೆ ಇಲ್ಲಿ ತಯಾರಾದ ಮೊದಲ ಹೆಲಿಕಾಪ್ಟರ್ ಹಾರಾಡಲಿದೆ ಎಂದು ಹೇಳಿದ್ದರು, ತಾವು ಸಂಸದರಾಗಿದ್ದ ಅವಧಿಯಲ್ಲೇ ಅದು ಸಾಧ್ಯವಾಗುತ್ತದೆ ಎಂದು ಸಂತಸವಾಗಿದ್ದೆ, ಆದರೆ ಈವರೆಗೂ ಹೆಚ್‍ಎಎಲ್ ಘಟಕ ಆರಂಭವಾಗಿಲ್ಲ, ಹೆಲಿಕಾಪ್ಟರ್ ಹಾರಾಡಲಿಲ್ಲ ಎಂದರು.

    ಹೆಚ್‍ಎಎಲ್ ಘಟಕ ಆರಂಭಗೊಂಡ ನಂತರ ಉದ್ಯೋಗಾವಕಾಶ ಹಾಗೂ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ ಎಂದು ಜನ ನಿರೀಕ್ಷಸಿದ್ದಾರೆ. ಜೊತೆಗೆ, ಪ್ರಧಾನಿಯವರ ಬಗ್ಗೆ ಜನರಲ್ಲೂ ನಂಬಿಕೆ ಬರುವುದರಿಂದ ತುಮಕೂರಿಗೆ ಬಂದ ಸಂದರ್ಭದಲ್ಲಿ ಹೆಚ್‍ಎಎಲ್ ಘಟಕ ಪ್ರಾರಂಭೋತ್ಸವದ ದಿನ ಪ್ರಕಟಿಸುವಂತೆ ಕೋರಿದರು.

    ಕೊಬ್ಬರಿ ತುಮಕೂರು ಜಿಲ್ಲೆ ರೈತರ ಜೀವನಾಡಿ. ಒಂದು ಸಂದರ್ಭದಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ 17.5 ಸಾವಿರ ರೂ.ಗಳಿತ್ತು, ಈಗ 11 ಸಾವಿರ ರೂ.ಗಳ ಆಸುಪಾಸಿನಲ್ಲಿದೆ. ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಪ್ರಧಾನ ಮಂತ್ರಿಗಳು ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಟ 20 ಸಾವಿರ ರೂ.ಗಳ ಬೆಂಬಲ ಬೆಲೆ ನಿಗಧಿ ಮಾಡುವಂತೆ ವಿನಂತಿಸಿದರು. ಇದೇ ರೀತಿ, ಅಡಿಕೆ ಹಾಗೂ ರೇಷ್ಮೆಗೆ ಸೂಕ್ತ ಬೆಲೆ ಸಿಗದೆ ಬೆಳೆಗಾರರು ಕಂಗಾಲಾಗಿದ್ದಾರೆ. ಹೊರ ದೇಶಗಳಿಂದ ಅಕ್ರಮವಾಗಿ ಸರಬರಾಜಾಗುವ ಅಡಿಕೆ ಮತ್ತು ರೇಷ್ಮೆಯನ್ನು ತಡೆದು, ದೇಶೀಯ ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮುದ್ದಹನುಮೇಗೌಡರು ವಿನಂತಿ ಮಾಡಿಕೊಂಡರು.

    ನಗರದ ಹೆಚ್‍ಎಂಟಿ ಜಾಗದಲ್ಲಿ ಸಿದ್ಧವಾಗುತ್ತಿರುವ ಇಸ್ರೋ ಘಟಕವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಚಾಲನೆಗೊಳಿಸಬೇಕು. ರಾಷ್ಟ್ರೀಯಹೆದ್ದಾರಿ 206 ಹಾಗೂ ತುಮಕೂರು ಜಿಲ್ಲೆಗೆ ಸಂಬಂಧಿಸಿದ ರೈಲ್ವೇ ಯೋಜನೆ ಕಾಮಗಾರಿಗಳು ಅನುದಾನದ ಕೊರತೆಯಿಂದಾಗಿ ಆಮೆ ವೇಗದಲ್ಲಿ ಸಾಗುತ್ತಿವೆ, ವೇಗ ಹೆಚ್ಚು ಮಾಡಿ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಆದೇಶ ನೀಡಬೇಕು ಎಂದು ಪ್ರಧಾನಿ ಮೋದಿಯವರಿಗೆ ಮನವಿ ಮಾಡಿದರು.

    ಈ ಎಲ್ಲಾ ವಿಚಾರವಾಗಿ ಪ್ರಧಾನಿಗಳಿಗೆ ಪತ್ರ ಬರೆದು ಕೋರಿದ್ದೇನೆ, ಜನವರಿ 2ರಂದು ತುಮಕೂರಿನ ಸಮಾರಂಭದಲ್ಲಿ ಮೋದಿಯವರು ತಮ್ಮ ಮನವಿಗೆ ಸ್ಪಂದಿಸಿ, ಸೂಕ್ತ ಕ್ರಮ ಪ್ರಕಟಿಸಲಿದ್ದಾರೆ ಎಂದು ಮುದ್ದಹನುಮೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರೂ ಮಾಧ್ಯಮಗಳಲ್ಲಿ ಪ್ರಸ್ತಾಪವಾಗುತ್ತಿದೆ, ನಾನೇನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಆದರೂ ಪಕ್ಷದ ಹೈಕಮಾಂಡ್ ತಮಗೆ ಆ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸಲು ಸಿದ್ಧ ಎಂದರು.

   ಸಂಸದರಾಗಿ, ಶಾಸಕರಾಗಿ, 10 ವರ್ಷ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಮಾಡಿದ ಅನುಭವವಿದೆ ಎಂದು ಮುದ್ದಹನುಮೇಗೌಡರು ಹೇಳಿದರು.ಮುಖಂಡರಾದ ರಾಯಸಂದ್ರ ರವಿಕುಮಾರ್, ಚಿಕ್ಕಸ್ವಾಮಿ, ರಂಗಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link