ಶಾಂತಿನಗರ ಭಾಗದಲ್ಲಿ ವಿಕೆಡ್‍ಗೇಟ್ ಅಳವಡಿಕೆಗೆ ಆದೇಶ

ತುಮಕೂರು:

      ನಗರದ ರೈಲು ನಿಲ್ದಾಣದ ಉತ್ತರ ಭಾಗದಲ್ಲಿರುವ ಪ್ರದೇಶಗಳ ಜನರಿಗೆ ಅನುಕೂಲವಾಗುವಂತೆ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟು ಅದಕ್ಕೆ ವಿಕೆಡ್‍ಗೇಟ್ ಅಳವಡಿಸುವಂತೆ ನೈಋತ್ಯರೈಲ್ವೇ ವಲಯದ ಜನರಲ್ ಮ್ಯಾನೇಜರ್ ಅಜಯ್‍ಕುಮಾರ್ ಸಿಂಗ್ ಅವರು ಆದೇಶಿಸಿದರು.

      ಭಾನುವಾರ ಮಧ್ಯಾಹ್ನ ತುಮಕೂರು ರೈಲು ನಿಲ್ದಾಣಕ್ಕೆ ಭೇಟಿ ಮಾಡಿದ ಸಂದರ್ಭದಲ್ಲಿ ತುಮಕೂರು-ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆ ಪದಾಧಿಕಾರಿಗಳು ಮತ್ತು ಮುಖಂಡ ರಾಜಣ್ಣ ನೇತೃತ್ವದ ಶಾಂತಿನಗರ ನಿವಾಸಿಗಳ ಮನವಿಗೆ ಸ್ಪಂದಿಸಿದ ಅವರು, ಇಂದೇ ಅಲ್ಲಿ ಪ್ರವೇಶ ಕಲ್ಪಿಸಿಕೊಡಬೇಕೆಂದು ಆದೇಶಿಸಿದರು. ಇದರಿಂದ ಮೂರ್ನಾಲ್ಕು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಬೇಡಿಕೆ ಈಡೇರಿದಂತಾಗಿದೆ.

      ತುಮಕೂರು ರೈಲು ನಿಲ್ದಾಣದಎರಡನೇ ಪ್ಲಾಟ್‍ಫಾರಂನಲ್ಲಿ ಇನ್ನೂಎರಡು ಶೆಲ್ಟರ್‍ಗಳನ್ನು ನಿರ್ಮಿಸಬೇಕೆಂಬ ಮನವಿಗೆ ಸ್ಪಂದಿಸಿದ ಸಿಂಗ್ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳದಲ್ಲೇ ಹಾಜರಿದ್ದ ಬೆಂಗಳೂರು ವಿಭಾಗೀಯ ಅಧಿಕಾರಿ ಆರ್.ಎಸ್. ಸಕ್ಸೇನಾ ಅವರಿಗೆ ಸೂಚಿಸಿದರು.

      ಈ ಸಂದರ್ಭದಲ್ಲಿ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿದ ವೇದಿಕೆ ಪದಾಧಿಕಾರಿಗಳು, ಚಿಕ್ಕಬಾಣಾವರ-ತುಮಕೂರು ಮಾರ್ಗವನ್ನುಆದ್ಯತೆಯ ಮೇರೆಗೆ ವಿದ್ಯುದೀಕರಣಗೊಳಿಸಬೇಕು. ಬೆಂಗಳೂರು-ತುಮಕೂರು ಮಧ್ಯೆ ನಿಗದಿತ ಅವಧಿಯಲ್ಲಿ ಸಂಚರಿಸಲು ಡೆಮು ರೈಲು ಸಂಚಾರ, ಯಶವಂತಪುರದಿಂದ ತುಮಕೂರು ಮೂಲಕ ಮಂಗಳೂರಿಗೆ ನೂತನ ರೈಲು, ತುಮಕೂರು ಹಾಸನ ಮಧ್ಯೆ ಪ್ಯಾಸೆಂಜರ್ ರೈಲು, ಬೆಳಗ್ಗೆ 10 ಗಂಟೆ ಹೊತ್ತಿಗೆ ಬೆಂಗಳೂರಿನಿಂದ ಅರಸೀಕೆರೆಗೆ ಮತ್ತೊಂದು ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಬೇಕು. ಪ್ರತಿ ಗುರುವಾರ ಸಂಜೆ 6 ಗಂಟೆಗೆ ಯಶವಂತಪುರದಿಂದ ಹೊರಡುವ ಪಂಢರಾಪುರ ರೈಲು ಸಂಚಾರವನ್ನು ಪ್ರತಿ ನಿತ್ಯ ಸಂಚರಿಸುವಂತೆ ಮಾಡಬೇಕೆಂದು ಮನವಿ ಮಾಡಿದರು. ಅಲ್ಲದೆ, ತುಮಕೂರು ರೈಲು ನಿಲ್ದಾಣದ ವಾಹನ ಪಾರ್ಕಿಂಗ್ ಸ್ಥಳದ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.

      ಇದೇ ವೇಳೆ ಸಿಂಗ್ ಅವರಿಗೆ ಮನವಿ ಸಲ್ಲಿಸಿದ ಗುಬ್ಬಿಯ ಕೆಲವು ಸಾರ್ವಜನಿಕರು ರೈಲು ನಿಲ್ದಾಣದ ಉತ್ತರ ಭಾಗದಲ್ಲಿ ಮತ್ತೊಂದು ಪ್ರವೇಶವನ್ನು ಕಲ್ಪಸಿಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಂಗ್ ಅವರು ಪ್ರವೇಶದ್ವಾರ ಕಲ್ಪಿಸಲು ಆದೇಶ ನೀಡಿದರು.

      ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯದರ್ಶಿ ಕರಣಂರಮೇಶ್, ಪದಾಧಿಕಾರಿಗಳಾದ ಸಿ ನಾಗರಾಜ್, ಆರ್.ರಘು ಮತ್ತು ರಾಮಾಂಜನೇಯ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap