ಬಳ್ಳಾರಿ
ದೇಶಸೇವೆಗಾಗಿ ಇಡೀ ಪ್ರಾಣವನ್ನೇ ಪಣಕ್ಕಿಟ್ಟು ಜೀವತೆತ್ತ ಪೊಲೀಸ್‍ರ ಕುಟುಂಬಗಳ ನೋವು-ನಲಿವುಗಳಿಗೆ ಹಾಗೂ ಕಷ್ಟಗಳಿಗೆ ಪೊಲೀಸ್ ಇಲಾಖೆ ಸ್ಪಂದಿಸುವ ಕೆಲಸ ಮಾಡಬೇಕು ಮತ್ತು ಈ ಮೂಲಕ ಅವರನ್ನು ಗೌರವಿಸಬೇಕು ಎಂದು ಜಿಲ್ಲಾಧಿಕಾರಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ತಮ್ಮ ಕಷ್ಟ-ನಷ್ಟ ಹಾಗೂ ನೋವು-ನಲಿವುಗಳನ್ನು ಬದಿಗಿಟ್ಟು ದೇಶಸೇವೆಗಾಗಿ ಪೊಲೀಸರು ಸಲ್ಲಿಸುವ ಸೇವೆ ಅತ್ಯಂತ ಅನುಪಮ ಎಂದು ಬಣ್ಣಿಸಿದ ಡಿಸಿ ರಾಮ್ ಪ್ರಸಾತ್ ಅವರು ತಾವು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ದಿನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ ಎರಡೂವರೆ ವರ್ಷಗಳಿಂದ ನಾನು ಸೇವೆ ಸಲ್ಲಿಸುತ್ತಿದ್ದು,ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆ ವಿಷಯದಲ್ಲಿ ಸಹಕರಿಸಿದ್ದಾರೆ ಎಂದು ಹೇಳಿದ ಅವರು, ಈ ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಹುತಾತ್ಮರಾದ 15 ಜನ ಪೊಲೀಸ್ ಸಿಬ್ಬಂದಿಗೆ ಗೌರವ ಸಲ್ಲಿಸುವುದಾಗಿ ತಿಳಿಸಿದರು.
ಎಸ್ಪಿ ಅರುಣ ರಂಗರಾಜನ್ ಅವರು ಪೊಲೀಸ ಹುತಾತ್ಮರ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಐಜಿಪಿ ಮನಿಷ್ ಖರ್ಬೆಕರ್ ಇದ್ದರು. ಪೊಲೀಸ್ ಇಲಾಖೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ