ಬದ್ದಿ ಬೆಟ್ಟಕ್ಕೆ ಕಂದಾಯ ಅಧಿಕಾರಿಗಳ ಭೇಟಿ

ಮಿಡಿಗೇಶಿ

     ಕರ್ನಾಟಕದ ಮುಕ್ಕಾಲು ಭಾಗ ಹಾಗೂ ಆಂಧ್ರ್ರದ ನಾಲ್ಕನೇ ಒಂದು ಭಾಗ ಹೊಂದಿರುವ ಬದ್ದಿ ಬೆಟ್ಟದಲ್ಲಿನ ಗಣಿಗಾರಿಕೆ ನಿಲ್ಲಿಸುವಂತೆ ಆಂಧ್ರ ಪ್ರದೇಶ ರಾಜ್ಯದ ರೈತರೆ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇಂದಿಗೂ ಗಾಢ ನಿದ್ರೆಯಲ್ಲಿ ಮೈ ಮರೆತಂತಿದೆ. ಈ ಕುರಿತು ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಕರ್ತವ್ಯ ನಿಷ್ಠೆ ಬಗ್ಗೆ ನಾಗರಿಕರು ತೀವ್ರ ಬೇಸರ ವ್ಯಕ್ತ ಪಡಿಸಿರುವುದು ಈಗಾಗಲೆ ವೈರಲ್ ಆಗಿದೆ.

     ಸೆ. 14 ರಂದು ಪ್ರಜಾ ಪ್ರಗತಿ ಪತ್ರಿಕೆಯಲ್ಲಿ  “ಬದ್ದಿ ಬೆಟ್ಟದ ಗಣಿಗಾರಿಕೆ ಅನಾಹುತ ಖಚಿತ” ಶೇ. 25 ಭಾಗ ಒಳಗೊಂಡಿರುವ ಆಂಧ್ರ ರೈತರಿಂದ ಪ್ರತಿಭಟನೆ ಆದರೆ ನಮ್ಮವರಿಂದ ವಿರೋಧವಿಲ್ಲ” ಎಂಬ ಶೀರ್ಷಿಕೆಯ ವರದಿ ಪ್ರಕಟವಾಗಿತ್ತು. ಈ ಬಗ್ಗೆ ಉಪವಿಭಾಗಾಧಿಕಾರಿ ಡಾ.ನಂದಿನಿರವರನ್ನು ಪ್ರಗತಿ ಪ್ರಶ್ನಿಸಿದಾಗ ಅವರು ಪ್ರತಿಕ್ರಿಯಿಸಿ, ತಹಸೀಲ್ದಾರ್, ನಾಡಕಚೆರಿಯ ಉಪತಹಸೀಲ್ದಾರ್, ಕಂದಾಯಾಧಿಕಾರಿ ಹಾಗೂ ಗ್ರಾಮಲೆಕ್ಕಿಗರಿಂದ ಸ್ಥಳ ಪರಿಶೀಲನೆಯ ವರದಿಯನ್ನು ತರಿಸಿಕೊಂಡಿದ್ದು, ಸದರಿ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಆಂಧ್ರರಾಜ್ಯದ ಅನಂತಪುರಂ ಜಿಲ್ಲಾಧಿಕಾರಿ ಜೊತೆ ಮಾತನಾಡಿ ಗಣಿಗಾರಿಕೆ ಪ್ರಾರಂಭ ಮಾಡದಂತೆ ತಡೆಯಬೇಕು. ಇಲ್ಲದಿದ್ದರೆ ಎಸಿಬಿಗೆ ಲಿಖಿತ ದೂರನ್ನು ನೀಡಲಾಗುವುದೆಂದು ಈ ಭಾಗದ ರೈತರು ಹಾಗೂ ನಾಗರಿಕರು ಪತ್ರಿಕೆಗೆ ತಿಳಿಸಿದ್ದಾರೆ.

     ಸೆ. 25 ರಂದು ಬದ್ದಿ ಬೆಟ್ಟದಲ್ಲಿ ಗಣಿ ಪ್ರಾರಂಭಿಸಲು ಮುಂದಾಗಿರುವ ಸ್ಥಳ ಪರಿಶೀಲನೆ ನಡೆಸಿದ ರಾಜಸ್ವ ನಿರೀಕ್ಷಕರು ತಮ್ಮ ವರದಿಯನ್ನು ಉಪವಿಭಾಗಾಧಿಕಾರಿಗೆ ಸಲ್ಲಿಸಿದ್ದು, ಅದರ ಪೂರ್ಣ ಪಾಠ ಈ ಮುಂದಿನಂತಿದೆ. ಮಧುಗಿರಿ ತಾಲ್ಲೂಕು, ಮಿಡಿಗೇಶಿ ಹೋಬಳಿ, ರೆಡ್ಡಿಹಳ್ಳಿ ಗ್ರಾಮದ ಸ.ನಂ. 136 ಕಸಾಪುರ ಗ್ರಾಮದ ಸ.ನಂ 47 ರ ಸರ್ಕಾರಿ ಜಮೀನಿನಲ್ಲಿರುವ ಬದ್ದಿ ಬೆಟ್ಟವು ಆಂಧ್ರÀ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಸುಮಾರು ಶೇ. 60 ರಷ್ಟು ಬೆಟ್ಟವು ಕರ್ನಾಟಕದ ಗಡಿ ಒಳಗೆ ಇದ್ದು, ಕರ್ನಾಟಕದ ಗಡಿ ಭಾಗದ ದಕ್ಷಿಣಕ್ಕೆ ಹಾಗೂ ಪಶ್ಚಿಮಕ್ಕೆ ಹೊಂದಿಕೊಂಡಂತೆ ಆಂಧ್ರ್ರಪ್ರದೇಶದ ವ್ಯಾಪ್ತಿಯಲ್ಲಿರುವ ಅನಂತಪುರ ಜಿಲ್ಲೆ.

     ಮಡಕಶಿರಾ ತಾಲ್ಲೂಕು, ರೊಳ್ಳ ಮಂಡಲ್, ರತ್ನಗಿರಿ ಗ್ರಾಮದ ಸ.ನಂ. 152ರಲ್ಲಿನ ಇದೇ ಬದ್ದಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಸಹಾಯಕ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಅನಂತಪುರಂ ಜಿಲ್ಲೆ, ಆಂಧ್ರಪ್ರದೇಶ ರವರು ಈ ಕೆಳಕಂಡವರಿಗೆ ಗಣಿ ಗುತ್ತಿಗೆ ಆದೇಶ ನೀಡಿದ್ದು, ಈ ಹಿನ್ನೆಲೆಯಲ್ಲಿ ಗಣಿಗಾರಿಕೆ ಪ್ರದೇಶದ ಬಾಧಿತ ರೈತರು (ಹೆಚ್ಚಿನದಾಗಿ ಆಂಧ್ರ ಪ್ರದೇಶದವರು) ಹಿಂದಿನಿಂದಲೂ ಗಣಿಗಾರಿಕೆ ವಿರೋಧಿಸಿ ಹೋರಾಟ ಮತ್ತು ಮುಷ್ಕರಗಳನ್ನು ನಡೆಸಿ ಮಾನ್ಯ ಅನಂತಪುರಂ ಜಿಲ್ಲಾಧಿಕಾರಿಗಳ ಗಮನವನ್ನು ಸೆಳೆದಿರುತ್ತಾರೆ.
ಈ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಸೆ. 25 ರಂದು ಗ್ರಾಮ ಲೆಕ್ಕಿಗರೊಂದಿಗೆ ಪ್ರಸ್ತಾಪಿತ ಬದ್ದಿ ಬೆಟ್ಟದ ತಪ್ಪಲಿಗೆ ಭೇಟಿ ನೀಡಿ ಪರಿಶೀಲಿಸಿರುತ್ತೇನೆ.

       ನನ್ನ ಸ್ಥಳ ತನಿಖೆ ಹಾಜರಾತಿ ಸಮಯದಲ್ಲಿ ಸುಮಾರು 50 ರಿಂದ 60 ಜನರು ಹಾಜರಿದ್ದು, ವ್ಯಕ್ತಿವಾರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲರ ಅಭಿಪ್ರಾಯವು ಕಲ್ಲು ಗಣಿಗಾರಿಕೆಗೆ ವಿರುದ್ದವಾಗಿದ್ದು, ಹಾಜರಿದ್ದ ರೈತರುಗಳು ಕರ್ನಾಟಕದ ರೆಡ್ಡಿಹಳ್ಳಿ, ಕಸಾಪುರ, ಬ್ರಹ್ಮದೇವರಹಳ್ಳಿ ಕಾವಲ್ ಹಾಗೂ ಆಂಧ್ರ ಪ್ರದೇಶದ ರತ್ನಗಿರಿ ಗ್ರಾಮದ ಮಜರೆ ಗುಟ್ಟಕುರಿಕೆ, ಗುಟ್ಟಕುರಿಕೆ ಗೊಲ್ಲರಹಟ್ಟಿ, ಇಂದ್ರಮ್ಮ ಕಾಲನಿ, ಕ್ಯಾತಪ್ಪನಪಾಳ್ಯದವರಾಗಿರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವನ್ಯ ಮೃಗಗಳಾದ ಕರಡಿ, ಚಿರತೆ, ನವಿಲುಗಳ ಅಡಗು ತಾಣವಾಗಿರುತ್ತದೆ. ಬಹುತೇಕ ಕರ್ನಾಟಕದ ಹಳ್ಳಿಗಳಾದ ರೆಡ್ಡಿಹಳ್ಳಿ, ಆರ್.ಗೊಲ್ಲಹಳ್ಳಿ, ಕಾಡಪ್ಪನಪಾಳ್ಯ, ಕಸಾಪುರ, ಬ್ರಹ್ಮದೇವರಹಳ್ಳಿ ಕಾವಲ್, ಬ್ರಹ್ಮದೇವರಹಳ್ಳಿ ಹಾಗೂ ಹೊಸಹಳ್ಳಿ ಗ್ರಾಮಗಳಿಗೆ ನೀರಿನ ಆಶ್ರಯವಾಗಿರುತ್ತದೆ. ಈ ಆಂಧ್ರ ಪ್ರದೇಶದ ವ್ಯಾಪ್ತಿಯ ಗಣಿ ಗುತ್ತಿಗೆ ಪ್ರದೇಶದಿಂದ ಸುಮಾರು 2 ಕಿ.ಮೀ. ಬ್ರಹ್ಮದೇವರಹಳ್ಳಿ ಕಾವಲ್ ಗ್ರಾಮದ ಸ.ನಂ. 134, 136 ಹಾಗೂ 138 ರಲ್ಲಿ ಮೀಸಲು ಹಾಗೂ ಪರಿಭ್ರಮಿತ ಅರಣ್ಯ ಪ್ರದೇಶವಿರುತ್ತದೆ.

      ಆಂಧ್ರ ಪ್ರದೇಶದ ರತ್ನಗಿರಿ ಸ.ನಂ. 152 ರಲ್ಲಿ ಗಣಿಗಾರಿಕೆ ಗುತ್ತಿಗೆಯಂತೆ ಗಣಿಗಾರಿಕೆ ಪ್ರಾರಂಭವಾದರೆ ಕರ್ನಾಟಕದ ಕೆಲ ಗ್ರಾಮಗಳಲ್ಲಿ ಅಂತರ್ಜಲ ಕುಸಿತ, ಪರಿಸರ ಹಾನಿ, ರೈತರ ಬೆಳೆ ಹಾನಿ, ಕಾಡು ಪ್ರಾಣಿಗಳ ದಾಳಿಯಂತಹ ಭೀಕರ ಸಮಸ್ಯೆಗಳು ಘಟಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮೇಲಿನ ಅಂಶಗಳನ್ನು ಪರಿಗಣಿಸಿ ಆಂಧ್ರ ಪ್ರದೇಶದ ಅವೈಜ್ಞಾನಿಕ ಗಣಿಗಾರಿಕೆಯನ್ನು ನಡೆಸಲು ನೀಡಿರುವ ಕಲ್ಲು ಗಣಿಗುತ್ತಿಗೆಯನ್ನು ರದ್ದು ಪಡಿಸಲು ಆಂಧ್ರಪ್ರದೇಶದ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಬಹುದಾಗಿರುತ್ತದೆ ಎಂಬ ಅಂಶದೊಂದಿಗೆ ಗ್ರಾಮಸ್ಥರ ಅಭಿಪ್ರಾಯದ ಮಹಜರ್ ಅನ್ನು ತಮ್ಮ ಮುಂದಿನ ಕ್ರಮಕ್ಕೆ ಸಲ್ಲಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap