ಚಳ್ಳಕೆರೆ
ತಾಲ್ಲೂಕಿನ ಕೆಲವೆಡೆ ಬುಧವಾರ ಮತ್ತು ಶುಕ್ರವಾರ ಉತ್ತಮ ಹದ ಮಳೆಯಾಗಿದ್ದು, ದೇವರಮರಿಕುಂಟೆ, ಬೆಳಗೆರೆ, ಗೋಪನಹಳ್ಳಿ, ಅಡವಿಚಿಕ್ಕೇನಹಳ್ಳಿ ಮುಂತಾದ ಕಡೆಗಳಲ್ಲಿ ಹಳ್ಳಗಳು ಹರಿದು ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಇದೇ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕಿನ ಗಡಿ ಪ್ರದೇಶವಾದ ಅಬ್ಬೇನಹಳ್ಳಿ ವ್ಯಾಪ್ತಿಯಲ್ಲಿ ಸುರಿದ ಬಾರಿ ಮಳೆಗೆ ಅಲ್ಲಿನ ಕೆರೆ ಕಟ್ಟೆಗಳ ತುಂಬಿ ಅದೇ ನೀರು ಚಳ್ಳಕೆರೆ ಕಡೆಗೂ ಹದಿದು ಬಂದಿದ್ದು, ದೇವರಮರಿಕುಂಟೆ ವ್ಯಾಪ್ತಿಯ ಫೀಡರ್ ಚಾನಲ್‍ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸ್ವಲ್ಪ ಭಾಗ ರಾಣೀಕೆರೆಗೂ, ಇನ್ನೂ ಸ್ವಲ್ಪ ಭಾಗ ವೇದಾವತಿ ನದಿಯ ಕಡೆಗೂ ಹರಿದಿದೆ.
ತಾಲ್ಲೂಕಿನಾದ್ಯಂತ ಕಳೆದ ಮೂರು ದಿನಗಳ ಅವಧಿಯಲ್ಲಿ ಒಟ್ಟು 38 ಮಿ.ಮಿ, ಚಳ್ಳಕೆರೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸುರಿದಿದ್ದು, ಉಳಿದಂತೆ ದೇವರಮರಿಕುಂಟೆ ಮತ್ತು ತಳಕು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಹದ ಮಳೆಯಾಗಿರುತ್ತದೆ. ಪ್ರಸ್ತುತ ಈ ಮಳೆ ಜಾನುವಾರುಗಳ ಮೇವು ಹಾಗೂ ನೀರಿನ ಬವಣೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಿದ್ದು, ಶೇಂಗಾ ಬೆಳೆ ಮಾತ್ರ ಈ ಮಳೆಯಿಂದ ಉತ್ತಮಗೊಳ್ಳಲು ಸಾಧ್ಯವಿಲ್ಲವೆಂಬುವುದು ರೈತರ ಅಭಿಪ್ರಾಯವಾಗಿದೆ.
ಕಾರಣ, ತಾಲ್ಲೂಕಿನ ಬಹುತೇಕ ಕಡೆ ಶೇಂಗಾ ಬೆಳೆ ಸಂಪೂರ್ಣವಾಗಿ ಒಣಗಿದ್ದು, ಶೇಂಗಾ ಬೆಳೆಯ ಬುಡ ಮತ್ತು ಮೇಲ್ಭಾಗದಲ್ಲೂ ಯಾವುದೇ ತೇವಾಂಶವಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಳೆ ವೈಪಲ್ಯ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರ ವರದಿ ಸಿದ್ದಪಡಿಸಲು ಸಮೀಕ್ಷೆಯಲ್ಲಿ ತೊಡಗಿದ್ದಾರೆ.
ಆದರೆ ತಾಲ್ಲೂಕಿನಾದ್ಯಂತ ಮಳೆಯ ನೀರು ಹರಿಯುವುದೇ ಅಪರೂಪವಾದ ಈ ಸಂದರ್ಭದಲ್ಲಿ ನಾರಾಯಣಪುರ, ಯಲಗಟ್ಟೆ, ಗೋಪನಹಳ್ಳಿ ಮತ್ತು ದೇವರಮರಿಕುಂಟೆ ವ್ಯಾಪ್ತಿಯಲ್ಲಿ ಮಳೆಯ ನೀರು ಹರಿಯುವ ದೃಶ್ಯವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಪ್ರತಿನಿತ್ಯ ಆಗಮಿಸಿ ಹರಿಯುವ ನೀರನ್ನು ಕಂಡು ಸಂತಸ ವ್ಯಕ್ತ ಪಡಿಸುತ್ತಿದ್ಧಾರೆ.
ಒಟ್ಟಿನಲ್ಲಿ ರೈತರು ಈ ಬಾರಿ ಶೇಂಗಾ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಆಗುವಿದಿಲ್ಲವೆಂಬ ಖಚಿತ ತೀರ್ಮಾನಕ್ಕೆ ಬಂದಿದ್ದು, ಪ್ರಸ್ತುತ ಮಳೆಯಿಂದ ಇರುವ ಕೇವಲ ಕೆಲವೇ ಎಕರೆಗಳ ಬೆಳೆಗಳಿಗೆ ಯಾವುದಾದರೂ ರೋಗಗಳು ಅಂಟಿಕೊಂಡಿದ್ದಲ್ಲಿ ಅವುಗಳು ನಿವಾರಣೆಯಾಗಿ ಶೇಂಗಾ ಗಿಡ ಉತ್ತಮ ಬೆಳವಣಿಗೆ ಕಾಣಲಿದೆ. ರೈತರು ಆತ್ಮವಿಶ್ವಾಸದಿಂದ ಬಿತ್ತನೆ ಮಾಡಿದ್ದು, ತಡವಾಗಿ ಬಂದ ಮಳೆ ಪುನಃ ರೈತರನ್ನು ನಷ್ಟದ ಕಡೆಗೆ ಮುಖ ಮಾಡುವಂತೆ ಮಾಡಿದೆ.
ಸಹಾಯಕ ಕೃಷಿ ನಿರ್ದೇಶಕ ಎನ್.ಮಾರುತಿ ಈ ಬಗ್ಗೆ ಮಾಹಿತಿ ನೀಡಿ, ಕಸಬಾ, ಪರಶುರಾಮಪುರ, ತಳಕು ವ್ಯಾಪ್ತಿಯಲ್ಲಿ ಮಾತ್ರ ಮಳೆ ಬಂದಿದ್ದು, ಪ್ರಸ್ತುತ ಸ್ಥಿತಿಯಲ್ಲಿ ಶೇಂಗಾ ಬೆಳೆ ಚೇತರಿಕೆ ಕಂಡಿದೆ. ಕಡೇಯ ಪಕ್ಷ ಉಳಿದಿರುವ ಅಲ್ಪ ಬೆಳೆಗೆ ಇನ್ನು ಒಂದೆರಡು ಮಳೆಯಾದಲ್ಲಿ ಮಾತ್ರ ರೈತರು ಶೇ.30ರಷ್ಟು ಬೆಳೆಯನ್ನು ಪಡೆಯಬಹುದು ಎಂಬ ನಿರೀಕ್ಷೆ ಇದೆ . ಆದರೂ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಸಹಾಯದೊಂದಿಗೆ ಈಗಾಗಲೇ ಕಳೆದ ಮೂರು ದಿನಗಳಿಂದ ಬೆಳೆ ನಷ್ಟ ಸಮೀಕ್ಷೆ ನಡೆಸುತ್ತಿದ್ದು, ಒಂದೆರಡು ದಿನಗಳಲ್ಲಿ ಸಂಪೂರ್ಣ ವರದಿಯನ್ನು ಸಿದ್ದ ಪಡಿಸಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರರೊಡನೆ ಚರ್ಚಿಸಿ ಮುಂದಿನ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿಯನ್ನು ಕಳುಹಿಸಿಕೊಡಲಾಗುವುದು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಯಕನಹಟ್ಟಿ, ತಳಕು ಗ್ರಾಮಗಳ ವ್ಯಾಪ್ತಿಯಲ್ಲಿ ಮಾತ್ರ ಅಲ್ಪಸ್ವಲ್ಪ ಮಳೆಯಾಗಿದ್ದು, ಅಲ್ಲಿನ ಬೆಳೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಚೇತರಿಕೆ ಇದ್ದು, ಅಲ್ಲಿಯೂ ಸಹ ಬೆಳೆ ಸಮೀಕ್ಷೆ ನಡೆಸಿ ಕ್ಷೇತ್ರದ ಶಾಸಕರಾದ ಶ್ರೀರಾಮುಲರೊಡನೆ ಚರ್ಚಿಸಿ ವರದಿ ನೀಡಲಾಗುವುದು ಎಂದಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ