ಬೆಂಗಳೂರು
ಎಲ್ಲ ಮಕ್ಕಳಿಗೆ ಶಿಕ್ಷಣ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದರೂ, ಪ್ರತಿ ವರ್ಷ ಶಾಲೆ ತೊರೆಯುವ ಮಕ್ಕಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ರಾಜ್ಯ ಶಿಕ್ಷಣ ಇಲಾಖೆ ಅಂಕಿ ಅಂಶಗಳ ಪ್ರಕಾರ, 2017-18 ಹಾಗೂ 2018-19ರ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ ಬರೋಬ್ಬರಿ 82 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಅತಿ ಹೆಚ್ಚು ವಲಸಿಗರಿರುವ ಬೆಂಗಳೂರು ನಗರದಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 17,875 , ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 10,411ಮಕ್ಕಳು ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದಿದ್ದಾರೆ. ಶೈಕ್ಷಣಿಕವಾಗಿ ಮುಂದುವರಿದಿರುವ ಉಡುಪಿ ಜಿಲ್ಲೆಯಲ್ಲಿ ಕೇವಲ 200 ಮಕ್ಕಳು ಶಾಲೆಯಿಂದ ದೂರವುಳಿದಿರುವುದು ದಾಖಲಾಗಿದೆ.
1ನೇ ತರಗತಿಯಲ್ಲಿ 7977, 2ನೇ ತರಗತಿಯಲ್ಲಿ 6497, 3ನೇ ತರಗತಿಯಲ್ಲಿ 5647, 4ನೇ ತರಗತಿಯಲ್ಲಿ 5509, 5ನೇ ತರಗತಿಯಲ್ಲಿ 9271, 6ನೇ ತರಗತಿಯಲ್ಲಿ 5256, 7ನೇ ತರಗತಿಯಲ್ಲಿ 8193, 8ನೇ ತರಗತಿಯಲ್ಲಿ 14769, 9ನೇ ತರಗತಿಯಲ್ಲಿ 19102 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.
ಆರ್ಥಿಕ ಸಮಸ್ಯೆಯ ಕಾರಣದಿಂದ ಮಕ್ಕಳು ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ಕೂಲಿ ಕೆಲಸದಲ್ಲಿ ತೊಡಗುವುದು, ಹೆಣ್ಣು ಮಕ್ಕಳು ಋತುಮತಿಯಾದ ನಂತರ ಶಾಲೆಯಿಂದ ಹೊರಗುಳಿಯುವುದು, ವರ್ಗಾವಣೆ, ವಲಸೆ, ಸಂಚಾರ ಸೌಲಭ್ಯದ ಅಭಾವ ಮತ್ತಿತರರ ಮೂಲಭೂತ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವುಳಿಯುವಂತಾಗುತ್ತದೆ. ಅದರಲ್ಲೂ 8 ಹಾಗೂ 9 ನೇ ತರಗತಿಯ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಆರ್‍ಟಿಇ ಕಾರ್ಯಪಡೆಯ ಸಂಚಾಲಕ ಜಿ.ನಾಗಸಿಂಹರಾವ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ