ಬೆಂಗಳೂರು
ಚಲಿಸುತ್ತಿದ್ದ ಮಾರುತಿ ರಿಡ್ಜ್ ಕಾರೊಂದಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ಜನನಿಬಿಡ ಮೆಜೆಸ್ಟಿಕ್ ಬಳಿಯ ಶಾಂತಲ ವೃತ್ತದಲ್ಲಿ ಭಾನುವಾರ ನಸುಕಿನಲ್ಲಿ ನಡೆದಿದೆ.ಶಾಂತಲ ವೃತ್ತದ ಬಳಿ ಮುಂಜಾನೆ 5.30ರ ವೇಳೆ ಮಾರುತಿ ರಿಡ್ಜ್ ಕಾರು ಹೋಗುತ್ತಿದ್ದಾಗ ಹಿಂಭಾಗದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು ಅದನ್ನು ಗಮನಿಸಿದ ಚಾಲಕ ಮಂಜು ನಮ್ಮ ಮೆಟ್ರೊ ನಿಲ್ದಾಣದ ಪಶ್ಚಿಮ ದಿಕ್ಕಿನ ಪ್ರವೇಶ ದ್ವಾರದ ಬಳಿ ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ.
ಬೆಂಕಿಯನ್ನು ಬಾಟಲಿ ನೀರು ತಂದು ಸುರಿಯುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದು ನೀರು ಹಾಕಿದ್ದು ಪ್ರಯೋಜನಕ್ಕೆ ಬರಲಿಲ್ಲ.ಸ್ಥಳಕ್ಕೆ ಬಂದ ವಾಯು ವಜ್ರ ಬಸ್ನ ಚಾಲಕರೊಬ್ಬರು ತಮ್ಮ ಬಸ್ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್ ನಿಂದ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿಕೊಂಡಿತ್ತು.
ಸುದ್ದಿ ತಿಳಿದು ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಧಗಧಗನೆ ಉರಿಯುತ್ತಿತ್ತು. ಅವರು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು.ಕಾರು ಜಯನಗರದ ರಾಘವೆಂದ್ರಸ್ವಾಮಿ ಮಠದ ಬಳಿಯ ನಿವಾಸಿ ಶ್ರೀನಿವಾಸ ಅವರಿಗೆ ಸೇರಿದ್ದು. ಮಾಲೀಕರ ಕುಟುಂಬಸ್ಥರೊಬ್ಬರನ್ನು ಬಿಟ್ಟು ಹಿಂದಕ್ಕೆ ಬರುವಾಗ ಕಾರಿನೊಳಗೆ ಹೊಗೆ ಕಾಣಿಸಿಕೊಂಡಿತು. ಬೆಂಕಿ ನಂದಿಸಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ ಎಂದು ಚಾಲಕ ಮಂಜು ತಿಳಿಸಿದರು.
ಕೇವಲ ನಾಲ್ಕೈದು ನಿಮಿಷಗಳಲ್ಲೇ ಕಾರು ಸುಟ್ಟು ಕರಕಲಾಯಿತು. ಹೊಗೆ ಕಾಣಿಸಿಕೊಡ ತಕ್ಷಣವೇ ಚಾಲಕ ಹೊರಗಿಳಿದಿದ್ದರಿಂದ ಅವರ ಜೀವಕ್ಕೇನೂ ಅಪಾಯ ವಾಗಲಿಲ್ಲ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದ್ದು ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ