ಜಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವು

ಕಲಬುರಗಿ:

    ಗುರುವಾರ ಸಂಜೆ ವೇಳೆಯಲ್ಲಿ ವೈದ್ಯರಿಲ್ಲದ ಹಿನ್ನಲೆ, ತಕ್ಷಣಕ್ಕೆ ಸಿಬ್ಬಂದಿಯವರು ತಪಾಸಣೆ ನಡೆಸದೆ ನಿರ್ಲಕ್ಷ್ಯ ತೋರಿರುವುದರಿಂದ ನಗರದ ಜಿಲ್ಲಾಸ್ಪತ್ರೆಯಲ್ಲಿ (ಜಿಮ್ಸ್) ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಎರಡು ಕಡೆಯ ಕುಟುಂಬಸ್ಥರು ಆರೋಪಿಸಿದ್ದಾರೆ .ಭಾರತ್ ನಗರ ತಾಂಡಾ ನಿವಾಸಿ ಶಾರದಾಬಾಯಿ (65) ಮತ್ತು ಉದನೂರ್ ತಾಂಡಾದ ನಿವಾಸಿ ದಶರಥ್ ರಾಠೋಡ್ (50) ಮೃತ ರೋಗಿಗಳೆಂದು ತಿಳಿದು ಬಂದಿದೆ.

    ಮೃತ ರೋಗಿಗಳಿಬ್ಬರೂ ಟಿಬಿ ರೋಗದಿಂದ ಬಳಲುತ್ತಿದ್ದರು, ಗುರುವಾರ ಸಂಜೆ ಒಂದು ಗಂಟೆ ಅಂತರದಲ್ಲಿ ವೈದ್ಯರ ಸಂಪೂರ್ಣ ನಿರ್ಲಕ್ಷ್ಯದಿಂದ ಇಬ್ಬರು ರೋಗಿಗಳು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.ಚಿಕಿತ್ಸೆಗಾಗಿ ಮಂಗಳವಾರ ಅಡ್ಮಿಟ್ ಆಗಿದ್ದ ಶಾರದಾಬಾಯಿ ಇನ್ನೊಬ್ಬ ಮೃತ ರೋಗಿ ದಶರಥ್ ಎಂಬುವವರು ಗುರುವಾರ ಸಂಜೆ ಸಿರಿಯಸ್ ಆಗಿದ್ದರು, ಆಗ ತಕ್ಷಣಕ್ಕೆ ವೈದ್ಯರು ಸ್ಪಂದಿಸಿಲ್ಲವೆಂದು ಹೇಳಲಾಗುತ್ತದೆ.

    ಇಬ್ಬರು ರೋಗಿಗಳು ಹಲವಾರು ವರ್ಷಗಳಿಂದ ಟಿಬಿ ರೋಗದಿಂದ ಬಳಲುತ್ತಿದ್ದರು, ಆಗಾಗ ಚಿಕಿತ್ಸೆ ತೆಗೆದುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದರು, ಕೆಲವು ದಿನಗಳ ಹಿಂದೆ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು, ಗುರುವಾರ ಸಂಜೆ ಸಿರಿಯಸ್ ಆಗಿ ಮೃತಪಟ್ಟಿದ್ದಾರೆ, ಯಾವ ಕಾರಣಕ್ಕಾಗಿ ರೋಗಿಗಳು ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ವರದಿ ಬಂದ ಬಳಿಕ ತಿಳಿದು ಬರಲಿದೆ. ಈ ಕುರಿತು ತನಿಖೆ ನಡೆಸಲು ವೈದ್ಯರ ತಂಡಕ್ಕೆ ಸೂಚಿಸಲಾಗಿದೆ.