ಚಳ್ಳಕೆರೆ
ನಗರದ ಬಹುತೇಕ ಎಲ್ಲಾ ರಸ್ತೆಗಳು ಇತ್ತೀಚೆಗೆ ಪಾದಚಾರಿಗಳ ಮತ್ತು ವಾಹನ ಸಂಚಾರ ಜನದಟ್ಟಣೆ ಹೆಚ್ಚುತ್ತಿದ್ದು, ಕೆಲವೊಂದು ರಸ್ತೆಗಳನ್ನು ಅನಿವಾರ್ಯವಾಗಿ ಸಾರ್ವಜನಿಕ ಹಿತದೃಷ್ಠಿಯಿಂದ ಅಗಲೀಕರಣ ಮಾಡಬೇಕಿದ್ದು, ಪ್ರಾರಂಭದ ಹಂತದಲ್ಲಿ ಪ್ರವಾಸಿ ಮಂದಿರ ಪಕ್ಕದ ಸೋಮಗುದ್ದ ರಸ್ತೆಯನ್ನು ಅಗಲೀಕರಣ ಗೊಳಿಸಲಾಗುತ್ತಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸೂಚನೆ ಹಾಗೂ ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಪ್ರಸ್ತುತ ಚಿತ್ರದುರ್ಗ ರಸ್ತೆಯ ಪ್ರವಾಸಿ ಮಂದಿರದಿಂದ ಸೋಮಗುದ್ದು ಮುರುಡಿ ಆಂಜನೇಯಸ್ವಾಮಿ ದೇವಸ್ಥಾನದ ತನಕ ಸುಮಾರು ಒಂದು ಕಿ.ಮೀ ದೂರದ ರಸ್ತೆಯನ್ನು ಒಟ್ಟು 11 ಮೀಟರ್ ರಸ್ತೆ ಅಗಲೀಕರಣಗೊಳಿಸಲಾಗುವುದು ಎಂದು ಅವರು ತಿಳಿಸಿದ್ಧಾರೆ.
ಈಗಾಗಲೇ ಈ ಬಗ್ಗೆ ರಸ್ತೆ ಅಗಲೀಕರಣ ಕುರಿತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗಿದ್ದು, ಅಗಲೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಪ್ರವಾಸಿ ಮಂದಿರದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ರಸ್ತೆಯ ಎರಡೂ ಬಂದಿಗಳಲ್ಲಿ ವಿಸ್ತರಣೆಯಾಗಲಿದ್ದು, ಅದೇ ರೀತಿ ಎರಡೂ ಕಡೆ ಪಾದಚಾರಿಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಅಲ್ಲದೆ ರಸ್ತೆಯ ಅಂದವನ್ನು ಹೆಚ್ಚಿಸಲು ರಸ್ತೆಯ ಮಧ್ಯಭಾಗದಲ್ಲಿ ವಿದ್ಯುತ್ ದೀಪಗಳನ್ನು ಸಹ ಅಳವಡಿಸಲಾಗುವುದು.
ಸಾರ್ವಜನಿಕರು ನಗರಸಭೆಯ ರಸ್ತೆ ಅಗಲೀಕರಣ ಕಾರ್ಯಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದ್ಧಾರೆ. ಗೂಡಂಗಡಿಗಳ ತೆರವಿಗೆ ಸೂಚನೆ :- ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ್ ಮಾತನಾಡಿ, ಚಿತ್ರದುರ್ಗ ರಸ್ತೆಯಿಂದ ಮುರಡಿ ಆಂಜನೇಯಸ್ವಾಮಿ ದೇವಸ್ಥಾನದ ತನಕ ಹಾಲಿ ಇರುವ ಅಕ್ಕಪಕ್ಕದ ರಸ್ತೆಯಲ್ಲಿನ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟನ ಸೂಚನೆ ನೀಡಲಾಗಿದೆ. ನಿಯಮವನ್ನು ನಿರಾಕಸಿದಲ್ಲಿ ನಗರಸಭೆಯವರೇ ಗೂಡಂಗಡಿಗಳನ್ನು ತೆರವುಗೊಳಿಸಿ ಕಾನೂನು ಉಲ್ಲಂಘಿಸಿದವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಒಟ್ಟಿನಲ್ಲಿ ಈಗಾಗಲೇ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಪರ್ವವನ್ನೇ ಹೊಂದಿದ್ದು, ನಗರದ ಒಳಭಾಗದ ರಸ್ತೆಗಳು ವಿಸ್ತರಣೆಗೊಂಡಲ್ಲಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲತೆಗಳು ಕಲ್ಪಿಸಿದಂತಾಗುತ್ತದೆ. ಚಳ್ಳಕೆರೆ ನಗರದ ಗೌರವಾನ್ವಿತ ನಾಗರೀಕರು, ನಗರಸಭಾ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳು ರಸ್ತೆ ಅಗಲೀಕರಣ ಕಾಮಗಾರಿಗೆ ಹೆಚ್ಚು ಸಹಕಾರ ನೀಡುವಂತೆ ಪೌರಾಯುಕ್ತರು ಮನವಿ ಮಾಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
