ಅಪರಾಧ ತಡೆ ಮತ್ತು ರಸ್ತೆ ಸುರಕ್ಷಾ ಸಪ್ತಾಹ ಮಾಸಾಚರಣೆಗೆ ಚಾಲನೆ

ಚಳ್ಳಕೆರೆ

         ಪ್ರತಿವರ್ಷ ಪೊಲೀಸ್ ಇಲಾಖೆ ಹಮ್ಮಿಕೊಳ್ಳುವ ರಸ್ತೆ ಸುರಕ್ಷಿತ ಸಪ್ತಾಹ ಮತ್ತು ಅಪರಾಧ ತಡೆ ಮಾಸಾಚರಣೆ ಚಾಲಕರನ್ನು ಜಾಗೃತಿಗೊಳಿಸುವುದಲ್ಲದೆ ಸಾರ್ವಜನಿಕರಿಗೂ ಕೂಡ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಚಾಲಕರು ಮತ್ತು ಸಾರ್ವಜನಿಕರು ರಸ್ತೆ ಸುರಕ್ಷಿತೆ ಮಾರ್ಗಸೂಚಿಗಳನ್ನು ಅನುಸರಿಸಿದಲ್ಲಿ ಪ್ರಾಣಾ ಹಾನಿ ನಿಯಂತ್ರಿಸಬಹುದಾಗಿದೆ ಎಂದು ಉಪವಿಭಾಗ ಡಿವೈಎಸ್ಪಿ ಎಸ್.ರೋಷನ್ ಜಮೀರ್ ತಿಳಿಸಿದರು.

       ಅವರು ಶನಿವಾರ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಆಟೋಚಾಲಕರಿಗಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷಾ ಸಪ್ತಾಹ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರದ ಮದ್ಯಮವರ್ಗದ ಮತ್ತು ಬಡ ಜನರು ಪ್ರತಿನಿತ್ಯ ಆಟೋರಿಕ್ಷಾಗಳಿಂದ ತಮ್ಮ ದೈನದೀನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಆಟೋಚಾಲಕರ ಮೇಲೆ ನಂಬಿಕೆ ವಿಶ್ವಾಸವಿಟ್ಟು ಪ್ರಯಾಣಿಸುತ್ತಾರೆ. ಇಂತಹ ಸಂದರ್ಭದಲ್ಲಿ ಆಟೋಚಾಲಕರು ಸಾರ್ವಜನಿಕರ ಜೊತೆಯಲ್ಲಿ ವಿಶ್ವಾಸ, ನಂಬಿಕೆಯಿಂದ ನಡೆದುಕೊಳ್ಳಬೇಕು.

       ಯಾವುದೇ ಹಂತದಲ್ಲೂ ಯಾರಿಗೂ ಸಹ ಮೋಸ ಅನ್ಯಾಯವಾಗದಂತೆ ಆಟೋಚಾಲಕರು ಜಾಗೃತೆ ವಹಿಸಬೇಕು. ರಾತ್ರಿ ಸಮಯದಲ್ಲಿ ಅಪರಿಚಿತರು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಎಂದರು. ರಾಷ್ಟ್ರದಲ್ಲಿ ಪ್ರತಿವರ್ಷ ಅಪಘಾತಗಳಿಂದ ಲಕ್ಷಾಂತರ ಸಾವು ಸಂಭವಿಸುತ್ತಿದ್ದು, ಇಂತಹ ದುರಂತಗಳನ್ನು ತಪ್ಪಿಸಲು ಮತ್ತು ಜನರ ಪ್ರಾಣವನ್ನು ರಕ್ಷಿಸಲು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದರು.

        ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಸಾರ್ವಜನಿಕರಿಗೆ ಮತ್ತು ಆಟೋಚಾಲಕರಿಗೆ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಪೊಲೀಸ್ ಇಲಾಖೆಯ ಈ ಕಾರ್ಯ ಸ್ವಾಗತಾರ್ಹ. ಬಹುತೇಕ ಅಪಘಾತಗಳು ಸಂಚಾರ ನಿಯಮ ಉಲ್ಲಂಘನೆಯಿಂದಲೇ ನಡೆಯುತ್ತವೆ. ಸಾರ್ವಜನಿಕರ ಹಿತದೃಷ್ಠಿಯಿಂದ ಪೊಲೀಸ್ ಇಲಾಖೆ ರಸ್ತೆ ನಿಯಮಗಳನ್ನು ರೂಪಿಸಿದೆ. ಚಾಲಕರು ಮತ್ತು ಸಾರ್ವಜನಿಕರು ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಂಡು ಮಾಹಿತಿ ಪಡೆದು ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

        ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ-2018ರಲ್ಲಿ ಚಳ್ಳಕೆರೆ ವೃತ್ತ ವ್ಯಾಪ್ತಿಯಲ್ಲಿ ಅಪರಾಧಗಳ ಪ್ರಕರಣಗಳನ್ನು ನಿಯಂತ್ರಿಸಲಾಗಿದೆ. ಸಂಚಾರಿ ನಿಯಮ ಪಾಲನೆ ಹಿನ್ನೆಲೆಯಲ್ಲಿ ಇಲಾಖೆ ಬೀಗಿ ಕ್ರಮಕೈಗೊಂಡಿದ್ದು ಅಪಘಾತಗಳು ಸಹ ಗಣನೀಯವಾಗಿ ಕಡಿಮೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಸಂಜೆ ಮತ್ತು ತಡ ರಾತ್ರಿ ದ್ವಿಚಕ್ರ ವಾಹನಗಳು ಮಾತ್ರ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿವೆ, ಇವುಗಳಿಗೆ ಕುಡಿತವೇ ಕಾರಣವಾಗಿದ್ದು, ಯಾರೂ ಸಹ ಪಾನಮತ್ತರಾಗಿ ವಾಹನ ಚಲಾಯಿಸಬಾರದು ಎಂದು ಮನವಿ ಮಾಡಿದರು.

        ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ನಾಗರಾಜು, ಪಿಎಸ್‍ಐ ಎನ್.ಗುಡ್ಡಪ್ಪ, ಕೆ.ಸತೀಶ್‍ನಾಯ್ಕ, ಆಟೋಚಾಲಕರ ಸಂಘದ ಅಧ್ಯಕ್ಷ ಕೆ.ನಾಗರಾಜು ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap