ಶಿರಾ
ರಾಜ್ಯ ಸರ್ಕಾರವು ಅಧಿಕಾರದ ಚುಕ್ಕಾಣಿ ಹಿಡಿದ ನಂತರದಲ್ಲಿ 2019-20ನೆ ಸಾಲಿನ ಅಭಿವೃದ್ಧಿ ಕಾಮಗಾರಿಗಳ ಪೈಕಿ ರಸ್ತೆ ಅಭಿವೃದ್ಧಿಗಾಗಿ 655 ಕೋಟಿ ರೂ.ಗಳ ಅನುದಾನದ ಪೈಕಿ 1278 ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಶಿರಾ ನಗರದ ಪ್ರವಾಸಿ ಮಂದಿರದ ಬಳಿ 2.25 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ನಿರೀಕ್ಷಣಾ ಮಂದಿರದ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಶಿರಾ ನಗರದಲ್ಲಿ ನಿರ್ಮಾಣಗೊಂಡಿರುವ ಈ ನೂತನ ನಿರೀಕ್ಷಣಾ ಮಂದಿರವು 800 ಚ.ಮೀ. ಇದ್ದು 3 ವಿ.ವಿ.ಐ.ಪಿ. ಕೊಠಡಿಗಳು, ಅಡುಗೆ ಮನೆ, ಡೈನಿಂಗ್ ಹಾಲ್, ಮೀಟಿಂಗ್ ಹಾಲ್‍ಗಳನ್ನೂ ಒಳಗೊಂಡಿದ್ದು ಸುಸಜ್ಜಿತವಾಗಿದೆ ಎಂದರು.
2019-20ರಲ್ಲಿ ಮಧುಗಿರಿ ಉಪ ವಿಭಾಗವೊಂದರಲ್ಲಿಯೇ 655 ಕೋಟಿ ರೂ.ಗಳ ಅನುದಾನದ ಪೈಕಿ 1278 ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 2019-20 ರಲ್ಲಿ 9,033 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದ್ದು ಈ ಪೈಕಿ 8778 ಕೋಟಿ ರೂ. ವೆಚ್ಚವಾಗಿದೆ. ಶೇ.97 ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಎಂದರು.
2019-20ರಲ್ಲಿ ರಾಜ್ಯದಲ್ಲಿ ಕೆ.ಆರ್.ಡಿ.ಸಿ. ಯೋಜನೆಯಡಿಯಲ್ಲಿ 155 ಕಿ.ಮೀ. ರಸ್ತೆ ಹಾಗೂ 215 ಸೇತುವೆಗಳ ನಿರ್ಮಾಣ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 4792 ಕೋಟಿ ರೂ.ಗಳ ಮಂಜೂರಾತಿಯನ್ನು ಪಡೆದು ಕಾಮಗಾರಿ ಆರಂಭಿಸಲಾಗಿದೆ. 2019-20ನೆ ಸಾಲಿನ ಅನೇಕ ಕಾಮಗಾರಿಗಳು ರಾಜ್ಯದ ಅನೇಕ ಭಾಗಗಳಲ್ಲಿ ನಡೆಯಬೇಕಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಈ ಕಾಮಗಾರಿಗಳಿಗೆ ಕೂಡಲೆ ಚಾಲನೆ ನೀಡಲಾಗುವುದು ಎಂದು ಗೋವಿಂದ ಕಾರಜೋಳ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ.ಆರ್.ತಿಪ್ಪೇಸ್ವಾಮಿ, ಶಿರಾ ತಾಲ್ಲೂಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಉಪ ಮುಖ್ಯಮಂತ್ರಿಗಳ ಗಮನ ಸೆಳೆದು, ಶಿರಾ ಭಾಗವು ಗಡಿ ಪ್ರದೇಶವಾಗಿದ್ದು, ಅತ್ಯಂತ ಹಿಂದುಳಿದ ತಾಲ್ಲೂಕಾಗಿದೆ. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಾಗಬೇಕಿದ್ದು, ರಸ್ತೆ ಅಭಿವೃದ್ಧಿಗೆ ತಾವು ಹೆಚ್ಚಿನ ಅನುದಾನ ಮಂಜೂರು ಮಾಡಬೇಕೆಂದು ಮನವಿ ಮಾಡಿದರು.
ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಲಾಗುತ್ತಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಅತ್ಯಂತ ಸರಳವಾಗಿ ಮುಗಿಸಲಾಗಿದೆ ಎಂದರು.
ಶಿರಾ-ಕಳ್ಳಂಬೆಳ್ಳ ಕೆರೆಗೆ ಹೇಮಾವತಿಯ ನೀರನ್ನು ಹರಿಸುವ ಸಂಬಂಧ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಜೆ.ಸಿ.ಮಾಧುಸ್ವಾಮಿ ಜೂನ್ 10 ರಿಂದ ಹೇಮಾವತಿ ನೀರನ್ನು ಶಿರಾ-ಕಳ್ಳಂಬೆಳ್ಳದತ್ತ ಹರಿಸಲು ಕ್ರಮ ಕೈಗೊಳ್ಳಲಾಯಿತು. ಆದರೆ, ನೀರಾವರಿ ಸಮಿತಿಯ ಸೂಚನೆಯಂತೆ ಹೇಮಾವತಿ ನಾಲಾವಲಯದ ಅಧಿಕಾರಿಗಳು ಜೂನ್ 11 ರಿಂದ ನೀರನ್ನು ನಿಲ್ಲಿಸಿದ್ದಾರೆ. ಹಾಸನ ಜಿಲ್ಲೆಗೆ ಕುಡಿಯುವ ನೀರಿನ ಸಲುವಾಗಿ ನೀರನ್ನು ಹರಿಸಬೇಕಾಗಿರುವುದರಿಂದ ಆ ಭಾಗಕ್ಕೆ ನೀರನ್ನು ನೀಡಲಾಗಿದೆ. ಮಳೆ ಬಂದ ಕೂಡಲೆ ಶಿರಾ-ಕಳ್ಳಂಬೆಳ್ಳ ಕೆರೆಗಳಿಗೆ ಹೇಮಾವತಿ ನೀರನ್ನು ಹರಿಸಲಾಗುವುದು ಎಂದರು.
ಶಾಸಕ ಬಿ.ಸತ್ಯನಾರಾಯಣ್, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ಉಪಾಧ್ಯಕ್ಷೆ ಶಾರದಾ ನರಸಿಂಹ ಮೂರ್ತಿ, ವಿಧಾನ ಪರಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ತಾಲ್ಲೂಕು ದಂಡಾಧಿಕಾರಿ ನಾಹಿದಾ ಜಮ್ ಜಮ್, ಎಸ್.ಆರ್.ಗೌಡ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
