ಹಗರಿಬೊಮ್ಮನಹಳ್ಳಿ:
ಒಬ್ಬ ಮನುಷ್ಯನನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಿರುತ್ತದೆ ಎಂದು ಹೊಸಪೇಟೆಯ ವಿ.ವಿ.ಕಾಲೇಜ್‍ನ ನಿವೃತ್ತ ಉಪನ್ಯಾಸಕ ಡಾ.ಶಿವಾನಂದ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಹಳೇ ಊರಿನ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ 1991-92ರ ಕೆ.ಪಾಪುಸ್ವಾಮಿ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದಾಖಲಾತಿ ಹೊಂದಿದ್ದ ವಿದ್ಯಾರ್ಥಿಗಳಿಂದ ಗುರುವಂದನಾದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಒಂದು ಮಗು ವಾಗಿದ್ದಾಗ ಮಾತ್ರ ತಂದೆ ತಾಯಿಯ ಅಕ್ಕರೆಯಲ್ಲಿ ಬೆಳೆಯುತ್ತದೆ. ನಂತರ ಆ ಮಗು ಪ್ರೌಢಾವಸ್ಥೆ, ಮಧ್ಯಮಾವಸ್ಥೆಗೆ ಬರುವವರೆಗೂ ಗುರುವಿನ ಮಾರ್ಗದರ್ಶನದಲ್ಲಿಯೇ ಬೆಳೆಯಬೇಕಾಗುತ್ತದೆ. ಒಬ್ಬ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಶಿಕ್ಷಕನ ಪರಿಶ್ರಮ ಅಗತ್ಯವಾಗಿರುತ್ತೆ. ಅಂತಹ ಗುರುವನ್ನು ಇಂದು ನೆನೆಯುತ್ತ ಸನ್ಮಾನಿಸುತ್ತಿರುವ ಈ ಕಾರ್ಯಕ್ರಮ ನಿಜವಾಗಿಯೂ ಶ್ಲಾಘನೀಯವಾದುದ್ದು ಎಂದು ತಿಳಿಸಿದರು.
ಗದ್ದಿಕೆರೆಯ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪ್ರತಿಯೊಬ್ಬರಿಗೂ ಶಿಕ್ಷಣ ನೀಡಿದ ಗುರುಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಅಂತಹ ಗುರುಗಳಿಗೆ ಪ್ರತಿಯೊಬ್ಬರು ಆಗಾಗ ಸನ್ಮಾನದ ಮೂಲಕ ಗೌರವಿಸುವುದರಿಂದ ಅವರ ಸೇವಾರ್ಥ ಜೀವನ ಸಾರ್ಥಕವಾಗುತ್ತದೆ ಎಂದರು.
ಹ.ಬೊ.ಹಳ್ಳಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸೋಮನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಗುರಿ ಹೊಂದಿರುವುದಿಲ್ಲ. ಆದರೆ, ಗುರುಗಳಾದವರು ನಮ್ಮ ಕೈಗಳನ್ನಿಡಿದು ತಿದ್ದಿತೀಡಿ, ತಲೆಯಲ್ಲಿ ಅಕ್ಷಾರ ಜ್ಞಾನವನ್ನು ತುಂಬುವ ಮೂಲಕ ಈ ಸಮಾಜದಲ್ಲಿ ಹೆಮ್ಮೆಯಿಂದ ಬಾಳಲು ಮಾರ್ಗದರ್ಶಕರಾಗಿರುತ್ತಾರೆ. ಮೊದಲು ಜನ್ಮದಾತರಾದ ತಂದೆ-ತಾಯಿಯರನ್ನು ಪೂಜ್ಯನೀಯ ಭಾವನೆಗಳಿಂದ ಕಾಣುವುದಾದರೆ. ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪರಿಶ್ರಮಿಸಿದ ಗುರುಗಳನ್ನು ಸಹ ಪೂಜ್ಯಭಾವನೆಗಳಿಂದ ಕಾಣಬೇಕು ಎಂದರು.
ಈ ಹಿನ್ನೆಲೆಯಲ್ಲಿ ಕಳೆದ ಅನೇಕ ದಿನಗಳಿಂದ ಎಸ್.ಎಸ್.ಎಲ್.ಸಿ ನಮ್ಮ ಬ್ಯಾಚ್‍ನ ಬಳಗವನ್ನು ಸಂಪರ್ಕಿಸುವ ಮೂಲಕ ಕಾರ್ಯಕ್ರಮ ರೂಪರೇಷಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಳೆದ 27ವರ್ಷಗಳ ಹಿಂದೆ ಸರ್ಕಾರಿ ಪ್ರೌಢಶಾಲೆ ನಿರ್ಮಾಣಮಾಡಲು 2.5ಎಕರೆಯಷ್ಟು ಭೂಮಿ ದಾನವಾಗಿ ನೀಡಲಾಗಿತ್ತು. ಆ ದಾನಿಗಳಾದ ಕೆ.ಪಾಪುಸ್ವಾಮಿ ಅವರ ಕುಟುಂಬವನ್ನು ಪ್ರಥಮಬಾರಿಗೆ ಈ ಕಾರ್ಯಕ್ರಮದಲ್ಲಿ ಗುರುತಿಸಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ಜೊತೆಗೆ ನಿವೃತ್ತ ಶಿಕ್ಷಕ ಪಂಪಾಪತಿ ಮತ್ತು ಕೆ.ಎಂ.ಸ್ವಾಮಿ ಅವರನ್ನು ಸೇರಿದಂತೆ ಅನೇಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ವಿ.ಎಸ್.ಮಲ್ಲಿಕಾರ್ಜುನ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾಯ ಮುಖ್ಯಶಿಕ್ಷಕ ಕೊಟ್ರೇಶ್ ಶೆಟ್ಟರ್, ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗಪ್ಪ, ಬಸಪ್ಪ, ಮಲ್ಲಿಕಾರ್ಝುನ ಶಿರೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಾಲ್ಮನಿ ನಾಗರಾಜ್, ಬಾಳನಗೌಡ, ಸುರೇಶ್ ಬೆಟಗೇರಿ, ಶಂಕ್ರಾನಂದ ಸಪ್ತಸಾಗರ ರೇಣುಕಾ, ಗೌರಮ್ಮ, ಪರಿಮಳ, ಬಿಸ್ನಳ್ಳಿ ಸಾವಿತ್ರಿ, ವಿದ್ಯಾ, ಶೋಭ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ನಂತರ ಸಾಂಸ್ಕತಿಕ ಕಾರ್ಯಕ್ರಮ ಜರುಗಿತು.ತ್ರಿವೇಣಿ ಸ್ವಾಗತಿಸಿದರು. ಶಿಕ್ಷಕ ಜ್ಞಾನದೇವ ಹಾಗೂ ರಾಜಶೇಖರ್ ನಿರ್ವಹಿಸಿದರು