ಋಣಮುಕ್ತ ಕಾಯಿದೆ ಜಾರಿಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಒತ್ತಾಯ

ಹುಳಿಯಾರು

     ದೇಶದಲ್ಲಿ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಹಾಗೂ ಡಾ. ಎಂ ಎಸ್ ಸ್ವಾಮಿನಾಥನ್ ವರದಿ ಅನ್ವಯ ಬೆಂಬಲ ಬೆಲೆ ಕಾನೂನು ಹಾಗೂ ಎಲ್ಲಾ ರೈತರು ಮತ್ತು ಕೃಷಿ ಕೂಲಿಕಾರರಿಗೆ ಸಾಲ ಮನ್ನಾ ಮಾಡುವ ಋಣಮುಕ್ತ ಕಾಯಿದೆ ಜಾರಿಗೆ ಸಂಸತ್ತಿನಲ್ಲಿ ವಿಶೇಷ ಅಧಿವೇಶನ ನಡೆಸುವಂತೆ ಒತ್ತಾಯಿಸಿ ರೈತ ಮುಕ್ತಿ ಮಹಾ ಪಾದಯಾತ್ರೆ ಮತ್ತು ಸಮಾವೇಶವನ್ನು ದೆಹಲಿಯ ರಾಮಲೀಲಾ ಮೈದಾನದಲ್ಲಿ ಇದೇ ತಿಂಗಳ 30ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ತಿಳಿಸಿದರು.

     ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕೆಂಕೆರೆ ಸತೀಶ್ ರೈತರ ಎಲ್ಲ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಸಮನ್ವಯ ಸಮಿತಿವತಿಯಿಂದ 29ರಂದು ಉತ್ತರ ಪ್ರದೇಶದಲ್ಲಿ ಪಾದಯಾತ್ರೆ ಪ್ರಾರಂಭಗೊಂಡು 30ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಅಂದು ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ 400 ಮಂದಿ ರೈತರು ಅದರಲ್ಲೂ ಚಿಕ್ಕನಾಯಕನಹಳ್ಳಿ ತಾಲೂಕಿನಿಂದಲೇ ಸುಮಾರು 200 ಮಂದಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

      ಸಮಾವೇಶದಲ್ಲಿ ಪಾಲ್ಗೊಳ್ಳಲು ರೈತರಿಗೆ ವಿಶೇಷ ರೈಲಿನ ವ್ಯವಸ್ಥೆ ವ್ಯವಸ್ಥೆ ಮಾಡಲಿದ್ದು 27ರಂದು ಎಲ್ಲಾ ರೈತರು ಬೆಂಗಳೂರಿನಲ್ಲಿ ಸೇರಿ ವಿಶೇಷ ರೈಲಿನಲ್ಲಿ ದೆಹಲಿಗೆ ತಲುಪಲಿದ್ದಾರೆ ಎಂದರು.ಹೋಗಿ ಬರುವ ಪ್ರಯಾಣಕ್ಕಾಗಿ ಒಬ್ಬರಿಗೆ 800 ರೂಪಾಯಿ ವೆಚ್ಚ ತಗುಲಲಿದ್ದು ವೆಚ್ಚವನ್ನು ರೈತರೇ ಭರಿಸಬೇಕು ಹಾಗೂ ಊಟದ ವ್ಯವಸ್ಥೆಯನ್ನು ಅವರವರೇ ಮಾಡಿಕೊಳ್ಳಬೇಕು ಎಂದರು.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

      ಜಿಲ್ಲೆಯ ಶಿರಾ,ಗುಬ್ಬಿ,ತಿಪಟೂರು,ಕುಣಿಗಲ್,ಚಿಕ್ಕನಾಯಕನಹಳ್ಳಿ ಮುಂತಾದ ಭಾಗದಿಂದ 400ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದು ರಾಜ್ಯದಿಂದ ಸುಮಾರು 4000 ರೈತರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದರು.

      ದೇಶದಲ್ಲಿ ರೈತರ ಆತ್ಮಹತ್ಯೆ ತಡೆಗಟ್ಟಲು ಹಾಗೂ ಕೃಷಿ ಬಿಕ್ಕಟ್ಟಿನಿಂದ ಪಾರು ಮಾಡಲು ಸ್ವಾಮಿನಾಥನ್ ವರದಿ ಅನ್ವಯ ಉತ್ಪಾದನಾ ವೆಚ್ಚದ ಮೇಲೆ ಕನಿಷ್ಠ 50 ರಷ್ಟು ಲಾಭವನ್ನು ಸೇರಿಸಿ ಬೆಂಬಲ ಬೆಲೆ ಖಾತ್ರಿಗೊಳಿಸುವ ಕಾನೂನು ಹಾಗೂ ಎಲ್ಲಾ ರೈತರಿಗೆ ಕೃಷಿ ಕೂಲಿಕಾರರಿಗೆ ಬಡ್ಡಿ ರಹಿತ ವ್ಯವಸಾಯಕ್ಕೆ ಬೇಕಾಗುವಷ್ಟು ಬ್ಯಾಂಕ್ ಸಾಲ ನೀಡಬೇಕು ಸೇರಿದಂತೆ ಇತರ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೂಡಲೇ ಲೋಕಸಭೆಯಲ್ಲಿ ವಿಶೇಷ ಅಧಿವೇಶನ ಕರೆದು ಅಂಗೀಕಾರ ಮಾಡಬೇಕು ಎಂದು ಒತ್ತಾಯಿಸಲು ಸಮಾವೇಶಕ್ಕೆ ತೆರಳುತ್ತಿರುವುದಾಗಿ ಅವರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link