ಬೆಂಗಳೂರು:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಿಯಾದ ವಿಳಾಸ ನೀಡಿದರೆ ನನ್ನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಪ್ರಗತಿ ವರದಿಯನ್ನು ಅಂಚೆ ಮೂಲಕ ಕಳುಹಿಸಿಕೊಡುತ್ತೇನೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರು ಟಾಂಗ್ ನೀಡಿದರು.
ಮಂಗಳವಾರ ಬೆಳಿಗ್ಗೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಕೆರೆಗುಡ್ಡದಹಳ್ಳಿಯ ಗಂಗಾಧರಯ್ಯ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಇದಕ್ಕೆ ತಿರುಗೇಟು ನೀಡಿದ ಸದಾನಂದಗೌಡರು, ಪ್ರಗತಿ ವರದಿಯನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳುಹಿಸಬೇಕೋ ಅಥವಾ ಬೇರೆಲ್ಲಿಗಾದರೂ ಕಳುಹಿಸಬೇಕೋ ಎಂಬುದನ್ನು ಸಿದ್ದರಾಮಯ್ಯನವರೇ ತಿಳಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯಗೂ ಮೋದಿ ಚೌಕಿದಾರ್
ಸಿದ್ದರಾಮಯ್ಯನವರು ಭ್ರಮನಿರಸನಗೊಂಡು ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ನರೇಂದ್ರ ಮೋದಿಯವರು ದೇಶದ 130 ಕೋಟಿ ಜನರಿಗೂ ಚೌಕಿದಾರರು. ಅದರಲ್ಲಿ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಹ ಸೇರಿದ್ದಾರೆ. ಮೋದಿಯವರು ದೇಶದ ಜನತೆಗೆ ಚೌಕಿದಾರರು. ದೇಶ ರಕ್ಷಣೆಯ ಚೌಕಿದಾರರು ನರೇಂದ್ರ ಮೋದಿ ಎಂದು ಪ್ರತಿಕ್ರಿಯಿಸಿದರು.
ನಂತರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಸದಾನಂದಗೌಡರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ 65 ಸಾವಿರ ಮತಗಳ ಲೀಡಿಂಗ್ ಸಿಕ್ಕಿತ್ತು. ಆದರೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರಾಜು ಪರಾಭವಗೊಂಡರು. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ ಮುನಿರಾಜು ಅವರು ಜಯಗಳಿಸಲಿಲ್ಲ. ಆದ್ದರಿಂದ ಇನ್ನು ಮುಂದೆ ದಾಸರಹಳ್ಳಿ ಬಿಜೆಪಿ ಭದ್ರಕೋಟೆ ಎಂಬುದನ್ನು ಇನ್ನು ಮುಂದಿನ ಎಲ್ಲ ಚುನಾವಣೆಗಳಲ್ಲಿ ಸಾಬೀತುಮಾಡಿ ಎಂದು ಕರೆ ನೀಡಿದರು.
ಮುಖಂಡರಾದ ಎಸ್.ಮುನಿರಾಜು, ಅ.ದೇವೇಗೌಡ, ಚಿಕ್ಕಬೈಲಪ್ಪ, ಮರಿಸ್ವಾಮಿ, ರಾಜಣ್ಣ, ಶೃತಿ ರಮೇಶ್, ಭಾಗ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.ನಂತರ ಹೆಸರಘಟ್ಟ ಮುಖ್ಯ ರಸ್ತೆಯ ಚಿಕ್ಕಬಾಣಾವರದಲ್ಲಿ ತೆರೆದ ಜೀಪ್‍ನಲ್ಲಿ ಕೆಲಹೊತ್ತು ಸದಾನಂದಗೌಡರು ಮತಯಾಚಿಸಿದರು. ಬಲಮುರಿಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
