ಶಿರಾ
ಶ್ರೀ ಶಂಕರ ಸಹಸ್ರ ಲಿಂಗಾರ್ಚನಾ ಸಮಿತಿಯ ವತಿಯಿಂದ ಶಿರಾ ನಗರದಲ್ಲಿ ಮಹಾ ಶಿವರಾತ್ರಿಯ ಅಂಗವಾಗಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಹಸ್ರ ಲಿಂಗಾರ್ಚನ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಪಿ.ಎಸ್.ಸುರೇಶ್‍ಶಾಸ್ತ್ರಿ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಲಿಂಗಾರ್ಚನಾ ಸಮಿತಿಯ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಂತೆಪೇಟೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಕೂಡ ಮಹಾ ಶಿವರಾತ್ರಿಯ ದಿನದಂದು ಲೋಕ ಕಲ್ಯಾಣಾರ್ಥವಾಗಿ ಸಹಸ್ರ ಲಿಂಗಾರ್ಚನಾ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಅಂದು ಬೆಳಗ್ಗೆ 6 ಗಂಟೆಗೆ ಗುರು ಗಣಪತಿ ಪ್ರಾರ್ಥನೆ, ಪುಣ್ಯಾಹ, 6.30ಕ್ಕೆ ದಂಪತಿಗಳು ಮತ್ತು ಯುವಕ, ಯುವತಿಯರಿಂದ ಸಹಸ್ರ ಲಿಂಗಾರ್ಚನೆ, ರಾತ್ರಿ 12 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಇದೇ ದಿನ ರಾತ್ರಿ 10 ಗಂಟೆಗೆ ಪಾವಗಡ ಪ್ರಕಾಶ್‍ರಾವ್ ಅವರಿಂದ ವಿಶೇಷ ಪ್ರವಚನ ನಡೆಯಲಿದ್ದು ಶಿವಲಿಂಗಗಳನ್ನು ಪಾವಗಡದ ರಾಧಮ್ಮ ನೀಡಿರುತ್ತಾರೆ. ಪೂಜೆಗೆ ಯಾವುದೇ ಶುಲ್ಕ ಇಲ್ಲ. ಲೋಕ ಕಲ್ಯಾಣಾರ್ಥವಾಗಿ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಪೂಜೆಯ ನಂತರ ಲಿಂಗಗಳನ್ನು ಶಿರಸಿ ತಾಲ್ಲೂಕು ಸೋದೆ ವಾದಿರಾಜ ಮಠ ಮತ್ತು ಸ್ವರ್ಣವಲ್ಲಿ ಮಠದ ಮಧ್ಯದಲ್ಲಿರುವ ಶಾಮಲಾ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಸುರೇಶ್‍ಶಾಸ್ತ್ರಿ ತಿಳಿಸಿದರು.ಎಸ್.ಅನಂತರಾಮ್‍ಸಿಂಗ್, ಚಂದ್ರಶೇಖರ್, ನಂದಿನಿ ಶೇಖರ್, ನರಸಿಂಹಮೂರ್ತಿ, ಆರ್.ರಾಮು, ಶೃಂಗೇಶ್, ಜೈಕೃಷ್ಣ, ಸುಬ್ರಹ್ಮಣ್ಯ, ಶ್ರೀರಂಗಪ್ಪ, ಸತ್ಯನಾರಾಯಣ್, ಚಂದ್ರು ಮುಂತಾದವರು ಹಾಜರಿದ್ದರು.