ವಿಶ್ವ ಸಾಹಿತ್ಯ ಸಮ್ಮೇಳನಕ್ಕಾಗಿ ಅಭಿಯಾನ ನಡೆಸಿ

ದಾವಣಗೆರೆ:

      ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅಭಿಯಾನ ನಡೆಸಬೇಕೆಂದು ಸಾಹಿತಿ, ನೃಪತುಂಗ ಪ್ರಶಸ್ತಿ ಪುರಸ್ಕತ ಕುಂ.ವೀರಭದಪ್ಪ ಕರೆ ನೀಡಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆಯುತ್ತಿದ್ದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಮತ್ತು ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ದಾವಣಗೆರೆಯಲ್ಲಿ ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆಯೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಬೇಕಿತ್ತು. ಆದರೆ, ಅದು ಕಾರಣಾಂತರದಿಂದ ಮುಂದೆ ಹೋಗುತ್ತಿದೆ. ಆದ್ದರಿಂದ ಇಲ್ಲಿಯ ಜನತೆ ಲೋಕಸಭಾ ಚುನಾವಣೆಯ ನಂತರ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕೆಂದು ಒತ್ತಾಯಿಸಿ ಅಭಿಯಾನ ನಡೆಸಬೇಕೆಂದು ಕಿವಿಮಾತು ಹೇಳಿದರು.

      ಕನ್ನಡ ಭಾಷೆಯಲ್ಲಿ ಮಾತ್ರ ರಾಜ್ಯೋತ್ಸವ, ಸಮ್ಮೇಳನ ಸೇರಿದಂತೆ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ಸಂಭ್ರಮಿಸುವ ಅವಕಾಶವಿದೆ. ಆದರೆ, ಬೇರೆ ಯಾವ ಭಾಷೆಯಲ್ಲೂ ಈ ಅವಕಾಶಗಳಿಲ್ಲ. ಅಲ್ಲದೇ, ಈ ಕಾರ್ಯಕ್ರಮಗಳು ಕನ್ನಡದ ಆತ್ಮವಿಶ್ವಾಸವನ್ನು ಸಹ ತುಂಬುತ್ತಿವೆ ಎಂದರು.

       ಹಳೆಗನ್ನಡ ಸಾಹಿತ್ಯವನ್ನು ಜನಪ್ರಿಯಗೊಳಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕು. ಹಳೆಗನ್ನಡ ಸಾಹಿತ್ಯವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಆಗಬೇಕಿದೆ. ಆದರೆ, ಬಹುತೇಕ ಶಿಕ್ಷಕರಿಗೆ ಈ ಹಳೆಗನ್ನಡವನ್ನು ಪಾಠ ಮಾಡುವ ಪ್ರತಿಭೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ತಾಲೂಕು, ಜಿಲ್ಲಾ, ರಾಜ್ಯ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಿಗೆ ಸರ್ಕಾರ ವಿಶೇಷ ಅಧಿಕಾರ ಕೊಡಬೇಕು. ಕನ್ನಡಕ್ಕೆ ಸಂಬಂಧಿಸಿದಂತೆ ಒಂದು ವರ್ಷ ನಿರಂತರವಾಗಿ ಇವರುಗಳ ಜೊತೆಯಲ್ಲಿ ಅಧಿಕಾರಿಗಳು ಸಮಾಲೋಚನೆ ನಡೆಸುವ ಮೂಲಕ ಸಲಹೆ, ಸೂಚನೆ ಪಡೆದು ಕನ್ನಡ ಭಾಷೆಯನ್ನು ಕಟ್ಟುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

       ನಮ್ಮನ್ನಾಳುವ ಜನಪ್ರತಿನಿಧಿಗಳಲ್ಲಿ ಶೇ.40 ರಷ್ಟು ಪೈಕಿ ಕೋಟ್ಯಾಧಿಪತಿಗಳು, ಶೇ.25ರಷ್ಟು ಜನ ಅಪರಾಧಿ ಜಗತ್ತಿಗೆ ಸೇರಿದವರಿದ್ದಾರೆ. ಇವರಿಂದ ಕನ್ನಡ ಉದ್ಧಾರವಾಗಲು ಸಾಧ್ಯವೇ ಇಲ್ಲ. ಏಕೆಂದರೆ, ಇವರ್ಯಾರಿಗೂ ಸಾಹಿತ್ಯದ ಜೊತೆಗೆ ನಿಟಕ ಸಂಪರ್ಕವೇ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದರು.

      ಅಲ್ಲಿಲ್ಲಿ ಕುಡಿದು ಬೀಳಬಾರದು, ರೆಸಾರ್ಟ್‍ಗಳಲ್ಲಿ ಬಾಟಲಿ ತಗೆಂದುಕೊಂಡು ಹೊಡೆದಾಡಿಕೊಳ್ಳಬಾರದೆಂಬ ಕಾರಣಕ್ಕೆ ಜೆ.ಹೆಚ್.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದಲ್ಲಿ ಗ್ರಂಥಾಲಯ ನಿರ್ಮಿಸಿದ್ದರು. ಆದರೆ, ಈ ಗ್ರಂಥಾಲಯದಲ್ಲಿ ಮಾಟ, ಮಂತ್ರ ಮಾಡುವುದು ಹೇಗೆ, ಯಾರಿಗೆ ಹೇಗೆ ಲಿಂಬೆಹಣ್ಣು ಇಡಬೇಕೆಂಬುದರ ಕುರಿತ ಭಯೋತ್ಪಾದನೆ ಉಂಟು ಮಾಡುವ ಪುಸ್ತಕಗಳೇ ಹೆಚ್ಚು ಖರ್ಚಾಗುತ್ತಿವೆಯೇ ಹೊರತು, ಸದಾಭಿರುಚಿಯ ಪುಸ್ತಕಗಳು ಒಂದು ಖರ್ಚಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಸಾಹಿತ್ಯ ಮತ್ತು ರಾಜಕಾರಣ ಪರಸ್ಪರ ಅನ್ಯೂನ್ಯವಾಗಿದ್ದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ. ಆದರೆ, ಪ್ರಸ್ತುತ ಸಾಹಿತ್ಯದ ನಿಕಟ ಸಂಪರ್ಕ ಇರುವ ರಾಜಕಾರಣಿಗಳು ದೂರವಾಗುತ್ತಿದ್ದಾರೆಂದು ವಿಷಾಧ ವ್ಯಕ್ತಪಡಿಸಿದರು.ಸುಂದರ ಭಾಷೆಯಾಗಿರುವ ಕನ್ನಡ ದುರ್ದೈವವಶಾತ್ ಅತಂತ್ರ ಸ್ಥಿತಿಯಲ್ಲಿದೆ. ಹೀಗಂದ ಮಾತ್ರಕ್ಕೆ ಇದು ಅಳಿವಿನಂಚಿನಲಿಲ್ಲ. ಬೇರೆ ಭಾಷೆಗಳನ್ನು ತದ್ಭವೀಕರಿಸಿಕೊಂಡು ಬೆಳಯುವ ಶಕ್ತಿ ಕನ್ನಡ ಭಾಷೆಗೆ ಮಾತ್ರ ಇದೆ. ಅಲ್ಲದೆ, ಎಲ್ಲಾ ಭಾಷಿಕರನ್ನು ಪ್ರೀತಿಸುವ ತಾಯ್ತನದ ನೆಲ ನಮ್ಮ ಕರ್ನಾಟಕದ್ದಾಗಿದೆ ಎಂದರು.

        ಕನ್ನಡ ಮಾಧ್ಯಮದಲ್ಲಿ ಓದಿ, ಮಕ್ಕಳನ್ನೂ ಕನ್ನಡ ಮಾಧ್ಯಮದಲ್ಲಿ ಓದಿಸುವವರು ಮಾತ್ರ ಸಾಹಿತ್ಯ ಸಮ್ಮೇಳನದ, ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾಗಬೇಕೆಂಬ ನಿಯಮ ಆಗಬೇಕು. ಕನ್ನಡಕ್ಕೆ ಅನ್ನ ಕೊಡುವ ಶಕ್ತಿ ಇಲ್ಲ ಎಂಬ ಅಪವಾದ ಶುದ್ದ ಸುಳ್ಳು. ಅನ್ನ ಕೊಡುವ ಏಕೈಕ ಭಾಷೆ ಕನ್ನಡವಾಗಿದೆ ಎಂದ ಅವರು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವ್ಯಕ್ತಿ ಯಾವುದೇ ಕಾರಣಕ್ಕೂ ತಂದೆ-ತಾಯಿಂದಿರನ್ನ ವೃದ್ಧಾಶ್ರಮ ಸೇರಿಸುವುದಿಲ್ಲ. ಆದರೆ, ಇಂಗ್ಲೀಷ್ ಮಾಧ್ಯಮದಲ್ಲಿ ಓದಿದವರು ಮಾತ್ರ ಪೋಷಕರನ್ನು ದೇವರಾಣೆಗೂ ವೃದ್ಧಾಶ್ರಮ ಸೇರಿಸಲಿದ್ದಾರೆ. ಆ ಕಾರಣಕ್ಕಾಗಿಯೇ 10 ವರ್ಷದ ಹಿಂದೆ 10 ಸಾವಿರಗಳಿದ್ದ ವೃದ್ಧಾಶ್ರಮಗಳ ಸಂಖ್ಯೆ ಈಗ 28 ಸಾವಿರ ದಾಟಿದೆ ಎಂದು ಮಾರ್ಮಿಕವಾಗಿ ನುಡಿದರು.

        ಇಂಗ್ಲೀಷ್ ಮಾಧ್ಯಮದಲ್ಲಿ ಓದುವವರು ಎಲ್‍ಕೆಜಿ-ಯುಕೆಜಿ ಓದಿ, ಓದಿ ಮಾನವೀಯತೆ ಕಳೆದುಕೊಂಡು ಕೊನೆಗೆ ಮಿಲಿಗ್ರಾಂ ಆಗಿಬಿಡುತ್ತಾರೆ. ಇಂಗ್ಲೀಷ್ ಮಾಧ್ಯಮದಿಂದ ಮಾನವೀಯ ಸಂಬಂಧಗಳು ಹದಗೆಡಲಿವೆ. ಆದ್ದರಿಂದ ಎಲ್ಲರೂ ಮಕ್ಕಳನ್ನು ಕನ್ನಡ ಮಾಧ್ಯಮಗಳಲ್ಲಿಯೇ ಓದಿಸಬೇಕೆಂದು ಸಲಹೆ ನೀಡಿದರು.

        ಜಾಗತೀಕರಣದ ಪ್ರಭಾವದಿಂದ ಮಾತನಾಡುವ ಶಕ್ತಿ ಕಳೆದುಕೊಂಡಿರುವ ಅಪಾಯಕಾರಿ ಸನ್ನಿವೇಶದಲ್ಲಿ ಕನ್ನಡದ ಅಂತಃಕರಣವನ್ನು ಪ್ರಚೋದಿಸುವ ಯಾವ ಮಾಧ್ಯಮವೂ ನಮ್ಮ ಸುತ್ತಲಿಲ್ಲ. ಮಕ್ಕಳನ್ನು ಪೋಷಕರು ರೂಪಾಯಿ ಸಂಪಾದಿಸುವ ಸುಸಂಸ್ಕತರನ್ನಾಗಿ ರೂಪಿಸಬೇಕೇ, ವಿನಃ ಡಾಲರ್ ಹಿಂದೆ ಬಿಳುವವರನ್ನು ತಯಾರು ಮಾಡಬಾರದು ಎಂದು ಕಿವಿಮಾತು ಹೇಳಿದರು.

         ಕನ್ನಡವನ್ನು ಉಳಿಸಿ ಬೆಳೆಸುವ ನೈತಿಕ ಜವಾಬ್ದಾರಿ ನಮ್ಮ ಮೇಲಿದೆ. ಮನೆ, ಮನೆಗಳಲ್ಲಿ ಕನ್ನಡದ ವಾತಾವರಣ ಸೃಷ್ಟಿಯಾಗಬೇಕು. ಬರೆಯುವ, ಓದುವ ವಾತಾವರಣ ಹುಟ್ಟು ಹಾಕಬೇಕಿದೆ. ಇಂಗ್ಲೀಷ್ ಭಾಷೆಯನ್ನು ಯಾವುದೇ ಕಾರಣಕ್ಕೂ ಅಡುಗೆ ಮನೆಯ ಭಾಷೆಯನ್ನಾಗಿ ಬೆಳೆಯಲು ಬಿಡಬಾರದು. ಬೇರೆ, ಬೇರೆ ಭಾಷೆಗಳಿಂದ ಅಕ್ಷರಗಳನ್ನು ಕಡ ಪಡೆದು ಅಸ್ತಿತ್ವಕ್ಕೆ ಬಂದಿರುವ ಇಂಗ್ಲೀಷ್ ಭಾಷೆಗೆ ಸ್ವತಂತ್ರ ಅಸ್ತಿತ್ವ ಇಲ್ಲವಾಗಿದ್ದು, ಅದೊಂದು ಗುಲಾಮಿ ಭಾಷೆಯಾಗಿದೆ ಎಂದರು.

         ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬುರುಡೇಕಟ್ಟೆ ಮಂಜಪ್ಪ ನಿರ್ಣಯ ಮಂಡಿಸಿದರು. ಸಮ್ಮೇಳನದ ಅಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಮಂಜುನಾಥ್ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರುಗಳಾದ ಎಸ್.ಹೆಚ್.ಹೂಗಾರ್, ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಎ.ಆರ್.ಉಜ್ಜಿನಪ್ಪ, ತಾಲೂಕು ಕಸಾಪ ಅಧ್ಯಕ್ಷ ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು. ರೇವಣಸಿದ್ದಪ್ಪ ಅಂಗಡಿ ಸ್ವಾಗತಿಸಿದರು. ಎನ್.ಎಸ್.ರಾಜು ನಿರೂಪಿಸಿದರು. ಹನುಮಂತಪ್ಪ ಕೆ.ಎನ್. ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link