ಸೆ.29ರಿಂದ 28ನೇ ದಸರಾ ಧರ್ಮ ಸಮ್ಮೇಳನ

ದಾವಣಗೆರೆ:

      ನಗರದ ಪ್ರೌಢಶಾಲಾ ಮೈದಾನದಲ್ಲಿ ಸೆ.29ರಿಂದ ಅ.8ರವರೆಗೆ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ  ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರ 28ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಲಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ, ಉದ್ಯಮಿ ಅಥಣಿ ವೀರಣ್ಣ ತಿಳಿಸಿದರು.

    ಈ ಕುರಿತು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಸ್ಕೂಲ್ ಮೈದಾನದಲ್ಲಿ ನಿರ್ಮಿಸುವ ಮಾನವ ಧರ್ಮ ಮಂಟಪದಲ್ಲಿ ಪ್ರತಿ ದಿನ ಸಂಜೆ 7 ಗಂಟೆಗೆ ಸಮಾರಂಭ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಭರದ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

     ಸೆ.29ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭ ಉದ್ಘಾಟಿಸುವರು. ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕೊಲ್ಲಿಪಾಕಿ ಕ್ಷೇತ್ರ ದರ್ಶನ ಕೃತಿಯನ್ನು ಬಿಡುಗಡೆ ಮಾಡುವರು. ಪ್ರತಿ ದಿನದ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸಚಿವರು, ರಾಜಕೀಯ ನಾಯಕರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಅವರು ಮಾಹಿತಿ ನೀಡಿದರು.

     ರಂಭಾಪುರಿ ಜಗದ್ಗುರುಗಳು ತಮ್ಮ ಪೂರ್ವಾಶ್ರಮದಲ್ಲಿ ಬರೆದ ಲೇಖನಗಳ ಸಂಗ್ರಹದ ಕೃತಿ ಸಾಧನೆಯ ಪಥ, ಪಂಚಾಚಾರ್ಯ ಪ್ರಭಾ, ಶ್ರೀಪೀಠದ ಮುಖವಾಣಿ ರಂಭಾಪುರಿ ಬೆಳಗು, ಶ್ರೀಪೀಠದ 2020ರ ದಿನದರ್ಶಿಕೆಗಳು ಸಮ್ಮೇಳನದಲ್ಲಿ ಬಿಡುಗಡೆಯಾಗÀಲಿವೆ. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರತಿದಿನ ಉಪನ್ಯಾಸ, ಗುರುರಕ್ಷೆ, ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆ ನಡೆಯಲಿವೆ ಎಂದು ಅವರು ವಿವರಿಸಿದರು.

      ಅ.8ರಂದು ಸಂಜೆ 4.30ಕ್ಕೆ ಶ್ರೀಮದ್ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವದೊಂದಿಗೆ ಜರುಗಲಿದೆ. ಶಮೀ(ಬನ್ನಿಮರ) ಪೂಜೆ ಸಲ್ಲಿಸಿದ ನಂತರ ಸಭಾಮಂಟಪಕ್ಕೆ ಆಗಮಿಸಿ ವೀರ ಸಿಂಹಾಸನಾರೋಹಣ ಮಾಡಲಿರುವ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ನಂತರ ಜಗದ್ಗುರುಗಳಿಗೆ ದಸರಾ ಮಹೋತ್ಸವ ಸಮಿತಿ ಹಾಗೂ ಶಿಷ್ಯ ವೃಂದದ ಸದ್ಭಕ್ತರಿಂದ ಶಮೀ ಕಾಣಿಕಾ ಸಮರ್ಪಣೆ ಮಾಡಲಿದ್ದಾರೆ ಎಂದು ಹೇಳಿದರು.

     ಪ್ರತಿದಿನ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಸಮುದಾಯದವರ ಸಹಕಾರರೊಂದಿಗೆ ಈ ಬಾರಿಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗುತ್ತಿದ್ದು, ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

      ಸುದ್ದಿಗೋಷ್ಠಿಯಲ್ಲಿ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ, ಎಡೆಯೂರು ಶ್ರೀಗಳು, ಯರಗುಂಟಿಯ ಶ್ರೀಪರಮೇಶ್ವರ ಸ್ವಾಮೀಜಿ, ಹರಪನಹಳ್ಳಿ ತೆಗ್ಗಿನ ಮಠದ ಶ್ರೀಗಳು, ತಾವರಕೆರೆ ಶ್ರೀಗಳು, ಚನ್ನಗಿರಿ ಶ್ರೀಗಳು, ಮುರುಗೇಶ್ ಆರಾಧ್ಯ, ಬಿ.ಎಂ.ನಂಜಯ್ಯ, ಜಿ.ಶಿವಯೋಗಪ್ಪ, ಇಟ್ಟಿಗುಡಿ ಮಹಾದೇವಪ್ಪ, ಟಿಂಕರ್ ಮಂಜಣ್ಣ, ದೇವರಮನೆ ಗಿರೀಶ್ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link