ಮಹಿಳಾ ಮತದಾರರ ಆಕರ್ಷಣೆಗೆ 16 ಸಖಿ ಬೂತ್

ದಾವಣಗೆರೆ:

        ಮಹಿಳಾ ಮತದಾರರನ್ನು ಆಕರ್ಷಿಸಿ, ಮತದಾನ ಪ್ರಮಾಣ ವೃದ್ಧಿಸಲಿಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 16 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಮುಂದಾಗಿದೆ.ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಲ್ಲೂ ಪ್ರತಿ ವಿಧಾನಸಭಾ ಕ್ಷೇತ್ರಕ್ಷೇತ್ರಗಳಲ್ಲಿ 2 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಏನಿದು ಸಖಿ ಬೂತ್:

      ಮಹಿಳಾ ಮತದಾರರ ಸಂಖ್ಯೆ ಹೆಚ್ಚಿರುವ ಬೂತ್‍ಗಳಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸಖಿ ಮತಗಟ್ಟೆ ತೆರೆಯಲಾಗುತ್ತಿದ್ದು, ಈ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಚುನಾವಣಾ ಕಾರ್ಯ ನಿರ್ವಹಿಸುವುದು ವಿಶೇಷವಾಗಿದೆ. ಮಹಿಳೆಯರು ಭಯ, ಸಂಕೋಚವಿಲ್ಲದೇ ಬಂದು ತಮ್ಮ ಹಕ್ಕು ಚಲಾಯಿಸಲು ಪೂರಕ ವಾತಾವರಣ ಈ ಮತಗಟ್ಟೆಯಲ್ಲಿ ಸೃಷ್ಟಿಯಾಗಲಿದೆ.

     ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಹಿಳಾ ಮತದಾರರಿಗಾಗಿ ಆಯ್ದ ಸ್ಥಳಗಳಲ್ಲಿ ಪಿಂಕ್ ಬೂತ್‍ಗಳನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆ ಒಳಗಿನ ಮ್ಯಾಟ್, ಅಲ್ಲಿರುವ ಬಟ್ಟೆಗಳು, ಟೇಬಲ್ ಕ್ಲಾತ್, ಕುರ್ಚಿಗಳು ಎಲ್ಲವೂ ಪಿಂಕ್ ಬಣ್ಣದಿಂದ ಕೂಡಿದ್ದವು. ಅಲಂಕಾರಕ್ಕಾಗಿ ಬಲೂನ್‍ಗಳನ್ನು ಕಟ್ಟಲಾಗಿತ್ತು. ಮಹಿಳೆಯರ ಜತೆಗೆ ಬರುವ ಪುಟ್ಟ ಮಕ್ಕಳಿಗಾಗಿ ಆಟದ ಸಾಮಾನುಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಲ್ಲದೇ, ಮೊಬೈಲ್‍ಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಸಹ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ ಸಖಿ ಬೂತ್‍ಗಳ ವಿನ್ಯಾಸ ಹೆಗಿರಲಿವೆ ಎಂಬ ಕುತೂಹಲ ಮತದಾರರಲ್ಲಿ ಮೂಡಿದೆ.

ಎಲ್ಲೆಲ್ಲಿ ಸಖಿ ಬೂತ್:

      ಈ ಬಾರಿ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಹೊಸ ಕಟ್ಟಡ) ಬಿಳಿಚೋಡು, ಜಗಳೂರು ಪಟ್ಟಣದ ಸಂತೆಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಹರಪನಹಳ್ಳಿ ಕ್ಷೇತ್ರದ ವ್ಯಾಪ್ತಿಯ ನಂದಿಬೇವೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಪನಹಳ್ಳಿ ಉಪ್ಪಾರಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಹರಿಹರ ಕ್ಷೇತ್ರದ ಕೊಂಡಜ್ಜಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಹರಿಹರದ ಮೈಸೂರು ಕಿರ್ಲೋಸ್ಕರ್ ಪ್ರೌಢಶಾಲೆ. ದಾವಣಗೆರೆ ಉತ್ತರ ಕ್ಷೇತ್ರದ ವ್ಯಾಪ್ತಿಯ ದೊಡ್ಡಬಾತಿಯ ಸರ್ಕಾರಿ ಪ್ರೌಢಶಾಲೆ, ವಿನೋಬನಗರ 4ನೇ ಮೇನ್, 1ನೇ ಕ್ರಾಸ್‍ನ ಸೇಂಟ್ ಮೇರೀಸ್ ಕಾನ್ವೆಂಟ್.

      ದಾವಣಗೆರೆ ದಕ್ಷಿಣ ಕ್ಷೇತ್ರದ ಜಾಲಿನಗರದ ದುರ್ಗಾಂಬಿಕಾ ಟ್ರಸ್ಟ್ ಕಮಿಟಿ ಶಾಲೆ, ಶಿರಮಗೊಂಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಣಜಿ. ತ್ಯಾವಣಿಗೆಯ ಸರ್ಕಾರಿ ಪ್ರೌಢಶಾಲೆ. ಚನ್ನಗಿರಿ ಕ್ಷೇತ್ರದ ಕೆರೆಬಿಳಚಿ ಗ್ರಾಮೀಣ ಪ್ರೌಢಶಾಲೆ, ಚನ್ನಗಿರಿಯ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ. ಹೊನ್ನಾಳಿ ಕ್ಷೇತ್ರದ ಹೊನ್ನಾಳಿಯ ಶ್ರೀ ಚನ್ನಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ, ಸುರಹೊನ್ನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link