ದಾವಣಗೆರೆ :
ನಿವೇಶನ ಮತ್ತು ವಸತಿ ರಹಿತರಿಗೆ ಸೂರು ಕಲ್ಪಿಸುವ ವಿಚಾರದಲ್ಲಿ ಯಾವುದೇ ಸರ್ಕಾರ ಮೊಂಡಾಟ ಮಾಡಿದರೆ, ಆ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಲು ಸಜ್ಜಾಗಬೇಕು ಎಂದು ಭಾರತ ಕಮ್ಯುನಿಷ್ಟ್ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್ ಕರೆ ನೀಡಿದರು.
ನಿವೇಶನ ರಹಿತರ ಮತ್ತು ವಸತಿ ರಹಿತರ ಹೋರಾಟ ಸಮಿತಿಯಿಂದ ಸಂಚರಿಸುತ್ತಿರುವ ‘ಸೂರಿಗಾಗಿ ಕೋಟಿ ಹೆಜ್ಜೆಗಳ ಕಾಲ್ನಡಿಗೆ ಜಾಥಾ’ವು ಮಂಗಳವಾರ ದಾವಣಗೆರೆಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದ ಬಳಿಯಲ್ಲಿರುವ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಭಾರತ ಕಮ್ಯುನಿಷ್ಟ್ ಪಕ್ಷದಿಂದ ಏರ್ಪಡಿಸಿದ್ದ ಬಹಿರಂಗ ಸಭೆಯನ್ನು ಕಂಜೂರಾ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಿವೇಶನ ರಹಿತರಿಗೆ ನಿವೇಶನ ಕೊಡುವ ಮತ್ತು ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು ನೀಡುವ ಮನಸ್ಸು ಯಾವುದೇ ಸರ್ಕಾರಕ್ಕೆ ಇದ್ದರೆ, ಸೂರು ಕಲ್ಪಿಸುವುದು ಕಷ್ಟದ ಕೆಲಸ ಆಗುವುದಿಲ್ಲ. ಆದರೆ, ಸೂರು ಕಲ್ಪಿಸಲು ಇಚ್ಛಾಸಕ್ತಿಯೇ ಪ್ರದರ್ಶಿಸದೆ, ಮೊಂಡಾಟ ಮಾಡುವ ಸರ್ಕಾರವನ್ನು ಅಧಿಕಾರದಿಂದ ತೊಲಗಿಸಲಿಕ್ಕಾಗಿ ನಿವೇಶನ ಮತ್ತು ವಸತಿ ರಹಿತರು ಸಂಘ ಕಟ್ಟಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಿಮ್ಮಿಂದ ಅರ್ಜಿ ತೆಗೆದುಕೊಂಡು, ನಾವೇ ನಿವೇಶನ, ಮನೆ ಮಂಜೂರು ಮಾಡಿಕೊಡುತ್ತೇವೆಂಬ ಅನ್ನೋ ಭ್ರಮೆಯಲ್ಲಿ ನೀವ್ಯಾರೂ ಇರಬಾರದು. ಏಕೆಂದರೆ, ನಾವು ನಿಮ್ಮ ಪರವಾಗಿ ಹೋರಾಟಕ್ಕೆ ಇಳಿದಿದ್ದೇವೆ ಅಷ್ಟೆ. ನಿಮಗೆ ನಿವೇಶನ ಸಿಗುವುದು ಸುಲಭದ ಕೆಲಸವಲ್ಲ. ಏಕೆಂದರೆ, ರಾಜ್ಯದಲ್ಲಿ ಈಗಾಗಲೇ 37 ಲಕ್ಷ ಕುಟುಂಬಗಳು ಅರ್ಜಿ ಸಲ್ಲಿಸಿ, ಸೂರಿಗಾಗಿ ಕಾಯುತ್ತಿವೆ. ಆದರೆ, ಇನ್ನೂ ಅರ್ಜಿ ಸಲ್ಲಿಸದೆ ಇರುವ ನಿಮ್ಮ ಅರ್ಜಿಗಳು ಸಹ ಸಲ್ಲಿಕೆಯಾಗಬೇಕಾದರೆ, ಚುನಾವಣೆಯಲ್ಲಿ ನಿಮ್ಮ ಬಳಿ ಬಂದು ಮನೆ, ನಿವೇಶನ ನೀಡುತ್ತೇವೆಂದು ಆಶ್ವಾಸನೆ ನೀಡಿ ಗೆದ್ದವರನ್ನು ಮನೆ ಕೊಡಿ ಎಂಬುದಾಗಿ ನೀವೆಲ್ಲರೂ ಕೇಳಿದರೆ ಮಾತ್ರ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದರು.
ನಿವೇಶನ ರಹಿತರು ಒಗ್ಗಟಾಗಿ, ಸರ್ಕಾರದ ಮೇಲೆ ಒತ್ತಡ ಹೇರಿದರೆ, ನಿವೇಶನ ಸಿಕ್ಕೆ ಸಿಗುತ್ತದೆ ಎಂದ ಅವರು, ದೇಶಕ್ಕೆ ಸಂಪತ್ತು ಸೃಷ್ಟಿಸುವ ನಿಮ್ಮಂತಹ ದುಡಿಯುವ ವರ್ಗದ ಜನತೆಗೆ ವಾಸಕ್ಕೆ ಬೇಕಾಗಿರುವ ಮನೆಯನ್ನು ಅರ್ಜಿ ಹಾಕಿ ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ವಿಷಾಧನೀಯ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ.41 ರಷ್ಟು ಕುಟುಂಬಳಿಗೆ ಸ್ವಂತ ನಿವೇಶನ, ಸ್ವಂತ ಮನೆಗಳಿಲ್ಲ. ಮನೆ, ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದರೆ, ಭೂಮಿ ಎಲ್ಲಿದೆ ಎಂಬುದಾಗಿ ನಿಮ್ಮನ್ನು ಪ್ರಶ್ನಿಸುವ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಳೆದ ಮೂರು ವರ್ಷಗಳಹಿಂದೆ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಹ್ಮಣ್ಯಂ ನೇತೃತ್ವದ ಸಮಿತಿ ಯರ್ಯಾರೂ ಎಲ್ಲೆಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಹಾಗೂ ಯಾರ್ಯಾರೂ ಹೆಚ್ಚುವರಿ ಭೂಮಿ ಹೊಂದಿದ್ದಾರೆ ಎಂಬುದಾಗಿ ಸಲ್ಲಿಸಿರುವ ವರದಿಯನ್ನು ತೆರೆದು ನೋಡಬೇಕೆಂದು ಒತ್ತಾಯಿಸಿದರು.
ಲಂಚ ಪಡೆದು ಮನೆ, ನಿವೇಶನ ಮಂಜೂರು ಮಾಡುವ ವಾತಾವರಣಕ್ಕೆ ಕಡಿವಾಣ ಹಾಕಬೇಕು. ಈಗಾಗಲೇ ಸಾಲ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿರುವವರ ಬಾಕಿ ಕಂತಿನ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಸಹಾಯಧನ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಸ್ವತಃ ಮುಖ್ಯಮಂತ್ರಿಗಳೇ ರಾಜ್ಯದಲ್ಲಿ 37 ಲಕ್ಷ ಕುಟುಂಬಗಳಿಗೆ ಮನೆ ಇಲ್ಲ ಎಂದು ಮಾಹಿತಿ ನೀಡಿದರೆ, ವಸತಿ ಸಚಿವ ವಿ.ಸೋಮಣ್ಣ ವರ್ಷಕ್ಕೆ ಒಂದು ಲಕ್ಷ ಮನೆ ಕಟ್ಟಿಸಿಕೊಡುವುದಾಗಿ ಹೇಳುತ್ತಿದ್ದು, ಇವರ ಪ್ರಕಾರ ಸೂರಿಗಾಗಿ ಇನ್ನೂ 37 ವರ್ಷ ಕಾಯಬೇಕಾಗಿದೆ. ಸರ್ಕಾರ ಇಂತಹ ಗೊಂದಲ ಜನರ ಮಧ್ಯೆ ಬಿತ್ತಿ ಜನರ ದಿಕ್ಕು ತಪ್ಪಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.
ದೇಶದಲ್ಲಿ ದನ-ಕರುಗಳ ಕೊಟ್ಟಿಗೆಯಲ್ಲಿ ಮೂರು ಕುಟುಂಬಳು ಬದುಕುವ, ಒಂದು ಸಣ್ಣ ಮನೆಯಲ್ಲಿ ಮೂರ್ನಾಲ್ಕು ಕುಟುಂಬ ಬದುಕವ ವಾತಾವರಣವಿದೆ. ಒಂದು ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಇನ್ನೂ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮನೆ ಇಲ್ಲವಾಗಿದೆ. ಇವರಿಗೆಲ್ಲರಿಗೂ ಸೂರು ಸಿಗಬೇಕಾದರೆ, ಸುಳ್ಳು ಹೇಳುವ ರಾಜಕಾರಣಿಗಳ ವಿರುದ್ಧ ಹೋರಾಟ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಡಾ.ಕೆ.ಎಸ್.ಜನಾರ್ಧನ್, ಜಿಲ್ಲಾ ಖಜಾಂಚಿ ಆನಂದರಾಜ್, ಸೂರಿಗಾಗಿ ಸಮರ ಸಮಿತಿಯ ಮೋನಪ್ಪ, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಆವರಗೆರೆ ಚಂದು, ಆವರಗೆರೆ ಉಮೇಶ್, ಮೊಹಮ್ಮದ್ ಭಾಷಾ, ಮೊಹಮ್ಮದ್ ರಫಿಕ್, ವಿ.ಲಕ್ಷ್ಮಣ್, ಜಯಣ್ಣ, ಶಿವಮೂರ್ತಿ, ಎನ್.ಟಿ.ಬಸವರಾಜ, ಸೈಯದ್ ಖಾಜಾಪೀರ್, ಗದಿಗೇಶ್, ಕೆ.ಎಚ್.ಹನುಮಂತರಾಜು, ಪಿ.ಷಣ್ಮುಖಸ್ವಾಮಿ, ಸಿ.ರಮೇಶ್, ಎಂ.ಬಿ.ಶಾರದಮ್ಮ, ಟಿ.ಎಚ್.ನಾಗರಾಜ್, ರಾಜು ಕೆರೆನಹಳ್ಳಿ, ಎ.ತಿಪ್ಪೇಶ್, ಸರೋಜಾ, ಸಂತೋಷಕುಮಾರ ಮತ್ತಿತರರು ಉಪಸ್ಥಿತರಿದ್ದರು.ಆವರೆಗೆರೆ ವಾಸು ಸ್ವಾಗತಿಸಿದರು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ದ್ವಾರಕೀಶ, ಭಾನಪ್ಪ ಮತ್ತಿತರರು ಜಾಗೃತ ಗೀತೆಗಳನ್ನು ಹಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
