ವಾರ್ಷಿಕ ಸಮಾರೋಪ ಸಮಾರಂಭ

ಚಿಕ್ಕನಾಯಕನಹಳ್ಳಿ

      ಪದವಿ ಹಂತ ವಿದ್ಯಾರ್ಥಿ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ಈ ಹಂತದಲ್ಲೇ ವಿದ್ಯಾರ್ಥಿ ತನ್ನ ಗುರಿ ಮತ್ತು ಉದ್ದೇಶಗಳನ್ನು ಬೆಳೆಸಿಕೊಳ್ಳಬೇಕು ಎಂದು ತುಮಕೂರಿನ ಹಿರಿಯ ಸಾಹಿತಿ ಜಿ.ಕೆ.ಕುಲಕರ್ಣಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

       ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಗುರಿ ಮತ್ತು ಉದ್ದೇಶಗಳು ಇದ್ದಾಗ ಮಾತ್ರ ಉತ್ತಮ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಪ್ರತಿ ಬಾರಿಯೂ ಎತ್ತರದ ಕನಸು ಹೊಂದುವಂತೆ ಕರೆ ನೀಡಿದ ಅವರು, ಪದವೀಧರ ಎಂದರೆ ಉತ್ತಮ ಜ್ಞಾನ, ಕೌಶಲ್ಯಗಳನ್ನು ಕಲಿಸುವ ದಾರಿದೀವಿಗೆ ಎಂದರು.

       ಕಲಿಕೆಗೆ ನಿರಂತರ ಪರಿಶ್ರಮ ಅಗತ್ಯ, ನಮ್ಮ ಜನಪದ ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿರುವ ನವೋದಯ ಕಾಲೇಜು ನಮ್ಮ ತುಮಕೂರು ಜಿಲ್ಲೆಗೆ ಬಹು ದೊಡ್ಡ ಕೊಡುಗೆ ಎಂದರಲ್ಲದೆ, ವಿದ್ಯಾರ್ಥಿಗಳು ವ್ಯಾಯಾಮ, ಧ್ಯಾನ, ಯೋಗಗಳ ಮೂಲಕ ಸದೃಢವಾದ ಆರೋಗ್ಯವನ್ನು ಕಾಪಾಡಿಕೊಂಡು ನಡೆದಾಗ ಮಾತ್ರ ಉತ್ತಮ ವ್ಯಕ್ತಿಯಾಗಲು ಸಾಧ್ಯ, ಈ ಎಲ್ಲಾ ಸಾಧನೆಗಳು ಪರಿಪೂರ್ಣವಾದಾಗ ಮಾತ್ರ ಶೈಕ್ಷಣಿಕ ಚಟುವಟಿಕೆಗಳಿಗೆ ಅರ್ಥ ಬರುತ್ತದೆ ಎಂದು ಹೇಳಿದರು.

       ನವೋದಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ನವೋದಯ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲರೂ ಒಂದೊಂದು ರತ್ನ, ಮಾಣಿಕ್ಯಗಳು ಎಂದ ಅವರು, ಜಿಲ್ಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಗಳನ್ನು ಬೆಳೆಸುವ ಕರ್ಮಭೂಮಿ ಚಿ.ನಾ.ಹಳ್ಳಿ ತಾಲ್ಲೂಕು ಎಂದರು.

       ನವೋದಯ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಕೆ.ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿವೇಚನಾ ಶಕ್ತಿ ಅಗತ್ಯ. ತಪ್ಪು ಸರಿಗಳನ್ನು ಯೋಚಿಸಿ ತೀರ್ಮಾನ ತೆಗೆದುಕೊಂಡು ಬೆಳೆದಾಗ ಮಾತ್ರ ಬದುಕಿಗೆ ಅರ್ಥ ಬರುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಿ ಯಶಸ್ಸು ಪಡೆಯಬೇಕು, ಆಗ ಮಾತ್ರ ಓದು ಸಾರ್ಥಕ ಪಡೆಯುತ್ತದೆ ಎಂದರು.

        ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕತಿಕ, ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಹೆಚ್.ಎಸ್.ಶಿವಯೋಗಿ ಉಪಸ್ಥಿತರಿದ್ದರು. ಪ್ರೊ.ಶಿವಪ್ರಸಾದ್ ಸ್ವಾಗತಿಸಿದರು. ದಿವ್ಯಶ್ರೀ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಎಂ.ಬಿ. ಶ್ರೀಧರಮೂರ್ತಿ, ಸಿ.ರವಿಕುಮಾರ್, ಡಾ.ಶೇಖರ್, ಬಿ.ಎಂ.ಸತೀಶ್ ಉಪಸ್ಥಿತರಿದ್ದರು. ಕು.ಭುವನ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ