ಹರಿಹರ
ಕರುನಾಡು ಕದಂಬ ರಕ್ಷಣಾ ವೇದಿಕೆ ವತಿಯಿಂದ 63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಫೆ.1 ರಂದು ನಗರದ ಗಾಂಧಿ ಮೈದಾನದಲ್ಲಿ ಸರ್ವ ಧರ್ಮಿಯರ ಸಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಹೆಚ್.ಸುಧಾಕರ ಹೇಳಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಡಿದ ಅವರು, ಅಂದು ಬೆಳಿಗ್ಗೆ 9ಕ್ಕೆ ಲೋಕ ಕಲ್ಯಾಣಾರ್ಥವಾಗಿ ಮಹಾ ಸುಹಾಸಿನಿ ಪೂಜೆ, ದೀಪಾರಾಧನೆ, ಕನ್ಯಾ ದೋಷ ಪರಿಹಾರ ಕಾರ್ಯಕ್ರಮಗಳನ್ನು ಬೆಂಗಳೂರಿನ ಮಹರ್ಷಿ ಆನಂದ ಗುರೂಜಿ ನೆರವೇರಿಸುವರು.
ಬೆಳಿಗ್ಗೆ 11-30ಕ್ಕೆ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ರದುರ್ಗ ಮುರುಘಾ ಮಠದ ಡಾ|ಶಿವಮೂರ್ತಿ ಮುರುಘಾ ಶರಣರು, ತರಳುಬಾಳು ಬೃಹನ್ಮಠದ ಡಾ|ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀ, ಕನಕ ಗುರುಪೀಠದ ನಿರಂಜನಾನಂದ ಶ್ರೀ, ಐರಣಿ ಹೊಳೆ ಮಠದ ಬಸವರಾಜ ದೇಶೀಕೇಂದ್ರ ಶ್ರೀ, ನಂದಿಗುಡಿ ವೃಷಭಪುರಿ ಪೀಠದ ಸಿದ್ದರಾಮೇಶ್ವರ ಶ್ರೀ, ಚಿತ್ರದುರ್ಗ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಶ್ರೀ, ಕೋಡಿಹಳ್ಳಿ ಮಠದ ಷಡಾಕ್ಷಮುನಿ ಸೇರಿದಂತೆ ವಿವಿಧ ಧರ್ಮ ಗುರುಗಳು ಭಾಗವಹಿಸುವರು.
ಲೋಕಕಲ್ಯಾಣಾರ್ಥವಾಗಿ, ನೊಂದ-ಬೆಂದ ರೈತರ ಏಳ್ಗೆಗಾಗಿ, ಮಹಿಳೆಯರಿಗಾಗಿ, ನಗರದಲ್ಲಿ ಪ್ರಥಮ ಬಾರಿಗೆ ಮಹಾಚಂಡಿಕ ಯಾಗವನ್ನೂ ಸಹ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಯಾಗ ರದ್ದುಪಡಿಸಿ, ಕೇವಲ ಪೂಜಾ ಕೈಂಕರ್ಯ ನಡೆಸಲಾಗುತ್ತಿದೆ ಎಂದರು.
ಶಾಸಕ ಎಸ್.ರಾಮಪ್ಪ ಅಧ್ಯಕ್ಷತೆ ವಹಿಸುವರು, ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸುವರು, ಶಾಮನೂರು ಶಿವಶಂಕರಪ್ಪ ಮಾಂಗಲ್ಯ ವಿತರಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ, ಶಾಸಕರಾದ ಎಸ್.ಎ.ರವೀಂಂದ್ರನಾಥ್, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಬಿ.ಪಿ.ಹರೀಶ್, ಪ್ರೊ.ನಿಂಗಪ್ಪ, ಎಸ್.ಎಸ್.ಮಲ್ಲಿಕಾರ್ಜುನ, ನಗರಸಭೆ ಅಧ್ಯಕ್ಷೆ ಸುಜಾತ ರೇವಣಸಿದ್ದಪ್ಪ, ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ ಮತ್ತಿತರರು ಭಾಗವಹಿಸುವರು.
ನಂತರ ಮಾತನಾಡಿದ ವೇದಿಕೆಯ ಗೌರವಾಧ್ಯಕ್ಷ ಚಂದ್ರಶೇಖರ ಪೂಜಾರ್, ಸಾಮೂಹಿಕ ವಿವಾಹಕ್ಕೆ ಈಗಾಗಲೆ 29 ಜೊತೆ ವಧು-ವರರು ನೊಂದಣಿ ಮಾಡಿದ್ದಾರೆ, 50 ಜೊತೆ ವಿವಾಹ ನೆರವೇರಿಸುವ ಗುರಿ ಹೊಂದಲಾಗಿದ್ದು, ಆಸಕ್ತರು ಸಂಘಟಕರ ಬಳಿ ಹೆಸರು ನೊಂದಾಯಿಸಬಹುದು ಎಂದರು.
ಈಗಾಗಲೆ ಗಾಂಧಿ ಮೈದಾನದಲ್ಲಿ ವಿಶಾಲ ವೇದಿಕೆ ಸಿದ್ದಗೊಳಿಸಿದ್ದು, 2 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಅಂದಾಜು 6-7 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಅಂದಾಜು 8 ಲಕ್ಷ ರೂ. ವೆಚ್ಚವಾಗಲಿದ್ದು, ದಾನಿಗಳ ನೆರವು ಪಡೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.
ನಗರಸಭೆ ಸದಸ್ಯ ಬಿ.ರೇವಣಸಿದ್ದಪ್ಪ, ವೇದಿಕೆಯ ಗೌರವಾಧ್ಯಕ್ಷೆ ಸುಮನ್ ಖಮಿತ್ಕರ್, ಮಹಿಳಾ ಅಧ್ಯಕ್ಷೆ ಕವಿತಾ ಎಸ್.ಪೇಟೆಮಠ, ಮುಖಂಡರಾದ ಶಶಿನಾಯ್ಕ, ಯಮನೂರು, ಸಾಧಿಕ್, ಕಾವ್ಯಶ್ರಿ, ಹೆಚ್.ಕೆ.ಕೊಟ್ರಪ್ಪ ಉಪಸ್ಥಿತರಿದರು.