ಸಂವಿಧಾನ ಬದಲಾಯಿಸಲು ಕೈ ಹಾಕಿದರೆ ಎಚ್ಚರ: ಸಿದ್ದರಾಮಯ್ಯ

ಬೆಂಗಳೂರು

    ವೈವಿಧ್ಯತೆಯಲ್ಲಿ ಏಕತೆ ಸಮಾನತೆಯ ಪ್ರತಿಪಾದಿಸಿರುವ ಸಂವಿಧಾನ ಮುಟ್ಟಿದರೆ ರಕ್ತಪಾತ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.

    ನಗರದ ಪುರಭವನದಲ್ಲಿ ಮಂಗಳವಾರ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ರಾಜ್ಯಮಟ್ಟದ ಸಮಾವೇಶ ಹಾಗೂ ಮಿಲ್ಲರ್ ಕಮಿಷನ್ ವರದಿ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನ ಬದಲಾವಣೆಗೆ ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ಕೈ ಹಾಕುತ್ತಿರುವುದನ್ನು ಎಚ್ಚರಿಕೆಯಿಂದ ಗಮನಿಸಿ ಕಡಿವಾಣ ಹಾಕಬೇಕು ಎಂದರು.

    ಸಮಾನತೆಗೆ ಮೀಸಲಾತಿ ಪರಿಹಾರಲ್ಲ.ಆದರೆ, ಇದೊಂದು ದಾರಿಯಷ್ಟೆ. ಇನ್ನೂ, ದೇಶದ ಪ್ರತಿಯೊಬ್ಬರಿಗೂ ಗುಣಮಟ್ಟ ಶಿಕ್ಷಣ ಸಿಗಬೇಕು, ಸಂಪತ್ತು ಸಿಗಬೇಕು. ಈ ನಿಟ್ಟಿನಲ್ಲಿ, ಎಲ್ಲರೂ ದುಡಿಯಬೇಕು ಅದನ್ನು ಹೇಳಿರುವ ಸಂವಿಧಾನ ಇಲ್ಲದಿದ್ದರೆ, ಮೋದಿ ಪ್ರಧಾನಿ, ನಾನು ಸಿಎಂ ಆಗುತ್ತಿರಲಿಲ್ಲ ಎಂದು ತಿಳಿಸಿದರು.

    ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ಮಾತನಾಡಿ, ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ತತ್ಪರಿಣಾಮದ ಜೇಷ್ಠತೆಯನ್ನು ವಿಸ್ತರಿಸುವ ಅಧಿನಿಯಮ 2017 ರನ್ನು ಅನುಷ್ಠಾನಗೊಳಿಸಲು ಹೊರಡಿಸಿರುವ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

     ಸರ್ಕಾರದ ಆದೇಶದಂತೆ 50 ಲಕ್ಷ ರೂ.ವರೆಗಿನ ಕಾಮಗಾರಿಗಳನ್ನು ಪರಿಶಿಷ್ಟ ಗುತ್ತಿಗೆದಾರರಿಗೆ ನೀಡಬೇಕು. ನಗರಸಭೆ ಅಥವಾ ಜಿಲ್ಲಾ ಪಂಚಾಯಿತಿಗಳಲ್ಲಿ ಈ ಮೊತ್ತದವರೆಗಿನ ಕೆಲಸಗಳ ಟೆಂಡರ್ ಅನುಷ್ಠಾನಗೊಳ್ಳುತ್ತಿಲ್ಲ. ಎರಡು-ಮೂರು ಕೆಲಸಗಳನ್ನು ಪ್ಯಾಕೇಜ್ ಮಾಡಿ ಟೆಂಡರ್ (50 ಲಕ್ಷ ಮೀರಿ) ಕರೆಯುತ್ತಿರುವುದರಿಂದ ಮೀಸಲಾತಿ ಉದ್ದೇಶವನ್ನೇ ವಿಫಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

      ವಿಶೇಷವಾಗಿ ಲೋಕೋಪಯೋಗಿ, ನೀರಾವರಿ ಸೇರಿದಂತೆ ಅನೇಕ ಪ್ರಮುಖ ಇಲಾಖೆಗಳ ಟೆಂಡರ್ಗಳಲ್ಲಿ ಮೀಸಲಾತಿ ಜಾರಿಯಾಗುತ್ತಿಲ್ಲ. ರಾಜ್ಯದಲ್ಲಿ 8 ಸಾವಿರ ಎಸ್ಸಿ, ಎಸ್ಟಿ ಗುತ್ತಿಗೆದಾರರಿದ್ದರೂ 300 ಕೋಟಿ ರೂ. ಟೆಂಡರ್ ಸಿಗುವುದಿಲ್ಲ. ಹೀಗಾಗಿ ಟೆಂಡರ್ ಮೀಸಲಾತಿ ಕಾಗದದಲ್ಲಿ ಮಾತ್ರ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಟೆಂಡರ್ ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಹಣ ವಿಳಂಬ ಪಾವತಿ ತಪ್ಪಿಸಲು ಎಸ್ಸಿಪಿ ಮತ್ತು ಟಿಎಸ್ಪಿ ಹಣದಿಂದ ಬಿಲ್ ಪಾವತಿ ಮಾಡಬೇಕು,ಅಭಿವೃದ್ಧಿ ನಿಗಮಗಳಲ್ಲಿ ಕಾರ್ಯಾದೇಶವನ್ನೇ ಭದ್ರತೆಯಾಗಿಸಿ ‘ರಿವಾಲ್ವಿಂಗ್ ಫಂಡ್’ ರೂಪಿಸಬೇಕು.ಕಾಮಗಾರಿ ಮಿತಿಯನ್ನು 50 ಲಕ್ಷದಿಂದ ಒಂದು ಕೋಟಿ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಗುತ್ತಿಗೆದಾರರಿಗೂ ಮೀಸಲು ನೀಡಬೇಕು ಎಂದು ಆಗ್ರಹಿಸಿದರು.ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದರಾದ ಧ್ರುವನಾರಾಯಣ್, ಆರ್.ಚಂದ್ರಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಹಾಗೂ ಸಂಘದ ಪ್ರಮುಖರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap