ತುಮಕೂರು
ಶೋಷಿತ ವರ್ಗದ ಅಭಿವೃದ್ಧಿಗೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಸಮಾನತೆ ಹಾಗೂ ಮೀಸಲಾತಿ ಮೂಲಕ ನೀಡಿರುವ ಅಸ್ತ್ರವನ್ನು ಬಿಜೆಪಿ ಪಕ್ಷ ಬದಲಾಯಿಸುವುದಾಗಿ ಹೇಳುತ್ತಿದೆ. ಸಂವಿಧಾನವನ್ನು ಬದಲಿಸಿದರೆ ಶೋಷಿತರು ಶೋಷಿತರಾಗಿಯೇ ಉಳಿಯಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ನಡೆದ ಭೋವಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ದುಡಿಯುವ ವರ್ಗವನ್ನು ದುಡಿಯುತ್ತಲೇ ಇರಬೇಕು ಎನ್ನುವ ಭಾವನೆಯನ್ನು ಬಿಜೆಪಿ ಹೊಂದಿದೆ. ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನವನ್ನು ಮುಂದಿನ ಪೀಳಿಗೆಗೆ ನೀಡಬೇಕೆಂದರೆ ಸಂವಿಧಾನ ವಿರೋಧಿಗಳನ್ನು ಸೋಲಿಸಬೇಕಿದೆ ಎಂದು ಹೇಳಿದರು.
ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ಬದ್ಧತೆ ಹಾಗೂ ನಿಲುವು ಒಂದೇ ಆಗಿದೆ. ಶೋಷಿತರಿಗೆ ಧ್ವನಿಯಾಗುವ ನಿಲುವು ನಮ್ಮಲ್ಲಿದೆ. ಅದಕ್ಕಾಗಿಯೇ ಭೋವಿ ಅಭಿವೃದ್ಧಿ ನಿಗಮವನ್ನು ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದೆ. ನಿಗಮದಿಂದ ಪ್ರೊತ್ಸಾಹ ಸಿಕ್ಕರೆ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವ ಭರವಸೆ ಇದೆ. ಅದಕ್ಕಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಸಮ್ಮಿಶ್ರ ಹೋರಾಟವನ್ನು ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಭೋವಿ ಸಮುದಾಯ ಮುಂದಾಗಬೇಕಿದೆ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಭೋವಿ ಸಮುದಾಯಕ್ಕೆ ಪ್ರಾತಿನಿಧ್ಯವನ್ನು ನೀಡಿ ವೆಂಕಟರಮಣಪ್ಪ ಅವರನ್ನು ಸಚಿವರನ್ನಾಗಿ ಮಾಡಿದ್ದೇವೆ, ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳನ್ನು ಸೆಳೆಯಲು ಬೇರೆ ಪಕ್ಷಗಳು ಗೊಂದಲವನ್ನು ಸೃಷ್ಟಿಸುವ ಮೂಲಕ ಮತಗಳನ್ನು ವಿಭಜಿಸುವ ಕೆಲಸ ಮಾಡುತ್ತವೆ, ಅಂತಹ ಗೊಂದಲಗಳಿಗೆ ಒಳಗಾಗದೇ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಸಚಿವ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ದಲಿತರ ಭೂಮಿಯಲ್ಲಿ ಎಳನೀರು ಫ್ಯಾಕ್ಟರಿ ಮಾಡುತ್ತೇವೆ ಎಂದು ಕಾಲೇಜು ಕಟ್ಟಿದವರು ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ದಲಿತರಿಗೆ ಮೀಸಲಿರುವ ಭೂಮಿಯನ್ನು ಕಬಳಿಸಲು ದಲಿತರ ಮೇಲೆ ದೌರ್ಜನ್ಯ ಮಾಡಿ, ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ಕೊಟ್ಟ ಜಿ.ಎಸ್.ಬಸವರಾಜು ಜಿಲ್ಲೆಯಲ್ಲಿ ಯಾವುದೇ ಸಮುದಾಯಕ್ಕೆ ಏನು ಕೊಡುಗೆಯನ್ನು ನೀಡಿಲ್ಲ ಎಂದು ಆರೋಪಿದರು.
ಶೋಷಿತರಿಗೆ ಭಗದ್ಗೀತೆಯಾಗಿರುವ ಸಂವಿಧಾನ ಬದಲಿಸುವುದಾಗಿ ಹೇಳುವ ಬಿಜೆಪಿ ಅಭ್ಯರ್ಥಿಗಳಿಗೆ ರಾಜ್ಯದಲ್ಲಿರುವ ದಲಿತರು ಮತ ಹಾಕಬಾರದು, ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ ನೇರವಾಗಿ ದಲಿತರವನ್ನು ಅವಮಾನಿಸುತ್ತಾರೆ. ದಲಿತರು ಮತ ಹಾಕುವ ಮುನ್ನ ಒಮ್ಮೆ ಯೋಚಿಸಬೇಕು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಿ ದಲಿತರ ಮೇಲೆ ಕಲ್ಲು ಚಪ್ಪಡಿಯನ್ನು ಎಳೆಯುತ್ತಾರೆ ಎಂಬ ಎಚ್ಚರಿಯಿಂದ ಮತ ಚಲಾಯಿಸುವಂತೆ ಹೇಳಿದರು.
ಸಚಿವ ವೆಂಕರಮಣಪ್ಪ ಮಾತನಾಡಿ, ಯಡಿಯೂರಪ್ಪ, ಈಶ್ವರಪ್ಪ ಬಾಯಲ್ಲಿ ಒಳ್ಳೆಯ ಮಾತು ಬರಲ್ಲ, ಕೊಳಕು ನಾಲಿಗೆಯವರು, ಚುನಾವಣೆ ಆದ ಮೇಲೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಯಡಿಯೂರಪ್ಪನದ್ದು ತಿರುಕುನ ಕನಸು, ಸಮ್ಮಿಶ್ರ ಸರ್ಕಾರವನ್ನು ಬೀಳಿಸುವುದಕ್ಕೆ ಕಾಯುತ್ತಿರುವ ಬಿಜೆಪಿ ಭೋವಿ ಸಮುದಾಯದವರು ಮತ ನೀಡಬಾರದು ಎಂದು ಕರೆ ನೀಡಿದರು.
ಸಮುದಾಯಕ್ಕಾಗಿ ನಿಗಮ ಸ್ಥಾಪಿಸಿದ್ದು ಸಿದ್ದರಾಮಯ್ಯ ಎನ್ನುವುದನ್ನು ಭೋವಿ ಸಮುದಾಯ ಮರೆಯಬಾರದು, ಮೋದಿ ಸರ್ಕಾರ ರೈತರಿಗೆ, ಬಡವರಿಗೆ ಏನು ಮಾಡಿದೆ, ರೈತರಿಗೆ ತಿಂಗಳಿಗೆ ಐನೂರು ರೂಪಾಯಿ ಕೋಡ್ತೀವಿ ಅನ್ನುವ ಬಿಜೆಪಿ ಸರ್ಕಾರ ಉದ್ಯಮಿಗಳ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡುತ್ತದೆ. ಬಿಜೆಪಿಗೆ ಬಡವರು ಬೇಕಿಲ್ಲ, ಶ್ರೀಮಂತ ಉದ್ಯಮಿಗಳೇ ಸಾಕು, ಚುನಾವಣೆ ವೇಳೆ ಅಪಪ್ರಚಾರ ಮಾಡುವ ಮೂಲಕ ಗೆಲ್ಲುವುದಕ್ಕೆ ಯತ್ನಿಸುವವರಿಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಹೇಳಿದರು.
ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗೆ ಭೋವಿ ಸಮುದಾಯದವರನ್ನು ಕಂಡರೆ ಭಯ, ಅದಕ್ಕಾಗಿ ಮಧ್ಯರಾತ್ರಿ ಭೋವಿ ಸಮಾಜದ ಜಿಲ್ಲಾಧ್ಯಕ್ಷರ ಮನೆಗೆ ಹೋಗಿ ಸಭೆಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ವೆಂಕಟರಮಣಪ್ಪನವರು ಈ ಹಿಂದೆ ಸಚಿವರಾಗಿದ್ದಾಗ ಚಿತ್ರ ಹಿಂಸೆ ಕೊಟ್ಟವರು ಇದೇ ಬಿಜೆಪಿ ಪಕ್ಷದವರು, ತುಮಕೂರು ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಭೋವಿ ಸಮುದಾಯದ ಒಬ್ಬರಿಗೂ ಟಿಕೆಟ್ ಕೊಡದ ಬಿಜೆಪಿ ಅಭ್ಯರ್ಥಿ ಇಂದು ನಿಮ್ಮ ಬಳಿಗೆ ಮತ ಕೇಳಲು ಬರಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಊರುಕೆರೆ ಉಮೇಶ್ ಮಾತನಾಡಿ ನಮ್ಮನ್ನು ಪ್ರೀತಿಸುವವರಿಗೆ ಪ್ರೀತಿಕೊಡಬೇಕು, ತಾಲ್ಲೂಕು ಪಂಚಾಯತಿಯಲ್ಲೇ ನಮಗೆ ಟಿಕೆಟ್ ಕೊಡದೇ ಹೀಯಾಳಿಸಿದವರಿಗೆ ಮತನೀಡಬೇಕಾ ಎನ್ನುವುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ತೂಪಲ್ಲಿ ಮಾಜಿ ಶಾಸಕರಾದ ತಿಮ್ಮರಾಯಪ್ಪ, ಸುಧಾಕರ್‍ಲಾಲ್, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ರಾಧಾಕೃಷ್ಣ, ಮುಖಂಡರಾದ ಊರುಕೆರೆ ಉಮೇಶ್, ದೀಪಕ್, ಹಾಲನೂರು ಅನಂತ್, ಆರ್.ಸಿ.ಆಂಜಿನಪ್ಪ, ಚಂದ್ರಶೇಖರ್, ಸೇರಿದಂತೆ ಇತರರಿದ್ದರು