ಹಾವೇರಿ :
ಭಾರತೀಯರಿಗೆ ಸಂವಿಧಾನ ಅಮೂಲ್ಯವಾಗಿದ್ದು, ದೇಶದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸರ್ವ ಕಾನೂನುಗಳ ತಾಯಿಯಾದ ಭಾರತ ಸಂವಿಧಾನ ಮೂಲ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಎಚ್‍ಎನ್ ನಾಗಮೋಹನದಾಸ್ ಹೇಳಿದರು. ನಗರದ ಶ್ರೀ ರಾಚೋಟೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಭಾರತ ದೇಶ ಸಂಸ್ಕøತಿಕ ದಿವಾಳಿತ,ಭಯೋತ್ಪಾಧನೆ, ಬಡತನ. ನಿರುದ್ಯೋಗ ಸಮಸ್ಯೆ.ರಾಜಕೀಯದಲ್ಲಿ ಮೌಲ್ಯಗಳ ಅಧ:ಪತನ ಸೇರಿದಂತೆ ಅನೇಕ ರೀತಿಯ ಸವಾಲುಗಳನ್ನು ಎದುರಸಬೇಕಾಗಿದೆ. ಇವುಗಳ ಪರಿಹಾರಕ್ಕೆ ಸಂವಿಧಾನ ಮಾರ್ಗಸೂಚಿಯಾಗಿದೆ.
ವಿದ್ಯಾರ್ಥಿಗಳು,ಯುವಜನರು ಹಾಗೂ ಭಾರತೀಯ ಪ್ರಜೆಗಳು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸಂವಿಧಾನ ಅರ್ಥವಾಗದ ಕವಿತೆ,ಗ್ರಂಥ,ಕಾದಂಬರಿ ಅಲ.್ಲ ಅದೊಂದು ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದರೆ ಅದನ್ನು ಅರ್ಥ ಮಾಡಿಕೊಂಡು ಅರಗಿಸಿಕೊಂಡರೆ ಮಾತ್ರ ಸಾಧ್ಯವಾಗುತ್ತದೆ. ನಮ್ಮ ಮೂಲ ಕಾನೂನುಗಳ ಸಮಗ್ರ ಗ್ರಂಥವಾದ ಸಂವಿಧಾನವನ್ನು ತಿಳಿದುಕೊಳ್ಳಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ನೇತಾರರು ಅನುಷ್ಠಾನಗೊಳಿಸಲು ಇಚ್ಚಾಶಕ್ತಿ ತೊರಿಸಬೇಕು ಎಂದರು. ಭಾರತದ ಒಟ್ಟು ಬಹುತ್ವ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕು . ಈ ಬಹುತ್ವ ಅಡಗಿರುವುದು ನಮ್ಮ ಸಂವಿಧಾನದಲ್ಲಿ. ಅದನ್ನು ಬದಲಿಸುವ ಹುನ್ನಾರ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ.
ದೇಶಕ್ಕಿಂತ ವ್ಯಕ್ತಿ ಶ್ರೇಷ್ಠ ಎಂದು ಬಿಂಬಿಸುವುದು ಸರಿಯಾದ ಪ್ರಜಾಪ್ರಭುತ್ವದ ಮಾರ್ಗ ಅಲ್ಲ. ಸಾಮಾನ್ಯ ವ್ಯಕ್ತಿಗೂ ಅರ್ಥವಾಗಬೇಕು ಎಂದು ಕಿರು ಸಂವಿಧಾನ ಓದು ಎಂಬ ಪುಸ್ತಕ ಹೊರತರಲಾಗಿದೆ. ಎಲ್ಲರೂ ಅದನ್ನು ಓದಬೇಕು. ಅಂದಾಗ ಮಾತ್ರ ಭಾರತ ಅರ್ಥವಾಗುತ್ತದೆ. ಭಾರತ ಅಡಗಿರುವುದು ಸಂವಿಧಾನದ ಮೂಲ ತತ್ವದಲ್ಲಿ ಎನ್ನಬಹುದು. ವಿದ್ಯಾರ್ಥಿಗಳೊಂದಿಗೆ ಸಂವಾದ : ನಿವೃತ್ತ ನ್ಯಾಯಮೂರ್ತಿಗಳಾದ ಎಚ್‍ಎನ್ ನಾಗಮೋಹನದಾಸ್ ಅವರು ಸಂವಿಧಾನ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪ್ರಶ್ನೆಗಳ ಸುರಿಮಳೆಗೆ ಸಮರ್ಥವಾದ ವಿಷಯ ತಿಳಿಸಿದರು. ದೇಶದ ಮುನ್ನಡೆಗೆ ಭಾರತೀಯರಾದ ನಾವೇಲ್ಲರೂ ಸಂವಿಧಾನ ಅರ್ಥ ಮಾಡಿಕೊಳ್ಳುವುದು ಅವಶ್ಯಕವಾಗಿದ್ದು, ಈ ಸಂವಿಧಾನ ಓದು ಎಂಬ ಕಾರ್ಯಕ್ರಮಗಳಿಗಾಗಿ ಎಲ್ಲರೂ ಕೈಜೋಡಿಸಬೇಕಾಗಿದೆ.
ಸಂವಿಧಾನ ಅರ್ಥವಾದರೆ ದೇಶವೇ ಅರ್ಥವಾದಂತೆ. ಇದನ್ನು ಆಂದೋಲನದಂತೆ ಪ್ರಚಾರಗೋಳಿಸಬೇಕಾಗಿದೆ ಎಂದು ಮಾಹಿತಿಯನ್ನು ನೀಡಿದರು. ಸಂವಿಧಾನ ಓದು ಪುಸ್ತಕ ಬಿಡುಗಡೆ ಮಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷರಾದ ಕೆಸಿ ಪಾವಲಿ ಮಾತನಾಡಿ ನಾವು ಸಂವಿಧಾನವಿಲ್ಲದೇ ಬದುಕಲು ಸಾಧ್ಯವಿಲ್ಲ. ಹುಟ್ಟಿನಿಂದ ಮರಣದ ತನಕವೂ ಸಂವಿಧಾನನ ಅಡಿಯಲ್ಲಿ ಬರುತ್ತೇವೆ. ಈ ಸಂವಿಧಾನ ಓದು ಕಾರ್ಯಕ್ರಮವನ್ನು ಪ್ರತಿ ಜಿಲ್ಲೆಗೂ ಪ್ರತಿ ವ್ಯಕ್ತಿಗಳಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು, ನಾವೇಲ್ಲರೂ ಇದರಲ್ಲಿ ಪಾಲ್ಗೊಂಡು ದೇಶದ ಸಂವಿಧಾನದ ಆಶಯಗಳನ್ನು ಸಕಾರಗೊಳಿಸೋಣ ಎಂದರು. ಸಂವಿಧಾನ ಓದು ಅಭಿಯಾನ ಸಮಿತಿಯ ರಾಜ್ಯ ಸಂಚಾಲಕರಾದ ಡಾ. ವಿಠ್ಠಲ ಭಂಡಾರಿ ಪ್ರಸ್ತಾವಿಕ ಮಾತನಾಡಿ ಸಂವಿಧಾನ ಓದು ಕಾರ್ಯಕ್ರಮ 17 ನೇ ಜಿಲ್ಲೆ ಈಗಾಗಲೇ ಮಾಡಲಾಗಿದ್ದು, ರಾಜ್ಯ ಎಲ್ಲ ಜಿಲ್ಲೆಗಳಲ್ಲಿಯೂ ಮುಂದುವರಿಸಲಾಗುವುದು.
1 ಲಕ್ಷ ಪುಸ್ತಕಗಳು ಜನರನ್ನು ತಲುಪಿಸಿ ಇದೊಂದು ಅರ್ಥಗರ್ಭಿತ ಕಾರ್ಯಕ್ರಮವಾಗಲಿದೆ ಎಂದರು. ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕು.ಅಕ್ಷತಾ ಕೆಸಿ ಮಾತನಾಡಿ ಎಲ್ಲ ವರ್ಗದ ಜನರು ಬದುಕಬೇಕಾದರೆ ನಾವೇಲ್ಲರೂ ಡಾ|| ಬಿಆರ್ ಅಂಬೇಡ್ಕರ್ ನೀಡಿದ ಸಂವಿಧಾನ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಎಲ್ಲರಿಗೂ ಅರ್ಥವಾದರೆ ದೇಶ ಸರ್ವಾಂಗಿಣ ಅಭಿವೃದ್ದಿ ಸಾಧ್ಯ ಎಂದು ಸಂವಿಧಾನ ಮಹತ್ವ ತಿಳಿಸಿದರು. ಅಧ್ಯಕ್ಷತೆವಹಿಸಿದ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ ಸಂವಿಧಾನ ಓದು ಅಭಿಯಾನ ಕಾರ್ಯಕ್ರಮ ಕೇವಲ ಒಬ್ಬ ವ್ಯಕ್ತಿಗೆ ಸಿಮಿತವಲ್ಲ. ಇದೊಂದು ದೇಶ ಅರ್ಥ ಮಾಡಿಸುವ ಅರ್ಥಪೂರ್ಣ ಕಾರ್ಯಕ್ರಮ ಇದನ್ನು ನಾವೆಲ್ಲರೂ ಮುಂದುವರಿಸೋಣ ಎಂದರು.
ಈ ಸಂದರ್ಭದಲ್ಲಿ ಶಿವಲಿಂಗೇಶ್ವರ ವಿದ್ಯಾಪೀಠದ ಬಿ ಬಸವರಾಜಪ್ಪ.ಹೊನ್ನಪ್ಪ ತಗಡಿನಮನಿ.ವಕೀಲರಾದ ಪಿಎಂ ಬೆನ್ನೂರ.ಎಸ್ ಎಂ ಕೊತಂಬರಿ.ಬಸವರಾಜ ಪೂಜಾರ. ನಾರಾಯಣ ಕಾಳೆ. ಪರಿಮಳಾ ಜೈನ್. ಇಸ್ಮಾಯಿಲ್ ಬುಡಂದಿ.ಬಸವರಾಜ ಭೋವಿ. ಹಸೀನಾ ಹೆಡಿಯಾಲ.ಮಂಜುನಾಥ. ಮೋಹನ್ ಸೇರಿದಂತೆ ವಿದ್ಯಾರ್ಥಿ- ಯುವಜನ ಮಿತ್ರರು. ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ