ಚಳ್ಳಕೆರೆ 
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇಯಾದ ಗುಣಾತ್ಮಕ ಬದುಕನ್ನು ಹೊಂದಲು ಪ್ರಾಮಾಣಿಕ ಪ್ರಯತ್ನ ಪಡಬೇಕಿದೆ. ಕಷ್ಟಪಟ್ಟು ದುಡಿದು ತಮ್ಮ ಕುಟುಂಬವನ್ನು ಉತ್ತಮವಾಗಿ ಸಾಗಿಸಿದಲ್ಲಿ ಹೆಚ್ಚು ಗೌರವ ಸಂಪಾದಿಸಬಹುದು. ಆದರೆ, ನಿಮ್ಮ ಕೆಟ್ಟ ನಡವಳಿಕೆ ಸಮಾಜಕ್ಕೂ ಮತ್ತು ಕುಟುಂಬಕ್ಕೂ ಎರಡೂ ಮಾರಕವಾಗುತ್ತದೆ.
ಈ ಹಿನ್ನೆಲೆಯಲ್ಲಿ ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಸಮಾಜ ಮುಖಿಯಾಗಿ ಬದುಕನ್ನು ರೂಪಿಸಿಕೊಳ್ಳುವಂತೆ ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಮಹನಿಂಗ ಬಿ.ನಂದಗಾಂವಿ ತಿಳಿಸಿದರು. ಅವರು, ಭಾನುವಾರ ಇಲ್ಲಿನ ಡಿವೈಎಸ್ಪಿ ಕಚೇರಿಯಲ್ಲಿ ಚಳ್ಳಕೆರೆ ವೃತ್ತ ವ್ಯಾಪ್ತಿಯಲ್ಲಿ ಸಮಾಜದ ಅಶಾಂತಿಗೆ ಕಾರಣವಾದ ರೌಡಿಗಳ ವಿಚಾರಣೆಯನ್ನು ನಡೆಸಿ ಅವರೊಂದಿಗೆ ಸುರ್ಧೀಘವಾಗಿ ಚರ್ಚಿಸಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಸಹ ನೀಡಿದರು.
ಈಗಾಗಲೇ ಕಳೆದ ಹಲವಾರು ವರ್ಷಗಳಿಂದ ನಿಮ್ಮ ಮೇಲೆ ರೌಡಿ ಎಂಬ ಅಡ್ಡ ಪಟ್ಟಿ ಇದ್ದು ಇದು ನಿಮ್ಮ ವೈಯಕ್ತಿಕ ಬದುಕಿಗೆ ಕಪ್ಪು ಚುಕ್ಕೆಯಾಗಿದೆ. ಯಾವುದೇ ರೌಡಿಗೆ ಬೆಲೆ ಸಿಗುವುದಿಲ್ಲ. ನಿಮ್ಮ ಸಂಸ್ಕಾರ ಎಲ್ಲರಂತೆ ತಲೆ ಎತ್ತಿ ನಿಲ್ಲಲ್ಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಮಾಜದ ವಿರೋಧಿ ಚಟುವಟಿಕೆಗಳನ್ನು ಕೈಬಿಡಬೇಕು. ಹೊಸ ಬದುಕನ್ನು ಹುಡುಕುವ ನಿಟ್ಟಿನಲ್ಲಿ ಕಾರ್ಯಶೀಲರಾಗಬೇಕು ಎಂದರು. ಯಾರು ಉತ್ತಮ ನಡವಳಿಕೆಯನ್ನು ಹೊಂದುತ್ತಾರೋ ಸಂಬಂಧಪಟ್ಟ ಅಧಿಕಾರಿಯ ಮಾಹಿತಿ ಪಡೆದು ಅಂತಹವರನ್ನು ಈ ಪಟ್ಟಿಯಿಂದ ಕೈಬಿಡಲಾಗುವುದು ಎಂದರು.
ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾತನಾಡಿ, ವೃತ್ತ ವ್ಯಾಪ್ತಿಯಲ್ಲಿ ಈಗಾಗಲೇ ಎಲ್ಲಾ ಠಾಣೆಯ ರೌಡಿ ಶೀಟ್ ಹೊಂದಿರುವ ವ್ಯಕ್ತಿಗಳನ್ನು ಕರೆಸಿ ಎಚ್ಚರಿಕೆ ನೀಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯಾರೂ ಸಹ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೌಡಿಗಳು ಸಧ್ಯದ ಸ್ಥಿತಿಯಲ್ಲಿ ತಮ್ಮ ಕಾರ್ಯಚಟುವಟಿಕೆಗಳಿಂದ ತಟಸ್ಥರಾಗಿದ್ಧಾರೆಂದರು.
ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾತನಾಡಿ, ಚಳ್ಳಕೆರೆ ವೃತ್ತ ವ್ಯಾಪ್ತಿಯ ನಾಯಕನಹಟ್ಟಿಯಲ್ಲಿ 22, ತಳಕು ಠಾಣೆಯಲ್ಲಿ 38, ಪರಶುರಾಮಪುರ ಠಾಣೆಯಲ್ಲಿ 18, ಚಳ್ಳಕೆರೆ ಠಾಣೆಯಲ್ಲಿ 58 ರೌಡಿಗಳಿದ್ಧಾರೆ. ಇಂದಿನ ರೌಡಿ ಪರಿಶೀಲನಾ ಪಟ್ಟಿಯ ಬಹುತೇಕ ರೌಡಿಗಳು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. 136 ರೌಡಿಗಳ ಪೈಕಿ 62 ರೌಡಿಗಳು ಹಾಜರಾಗಿ ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರ ನೀಡಿದ್ಧಾರೆಂದರು. ಆದರೂ ಇಲಾಖೆ ಇವರ ಚಲನವಲನಗಳ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ವಹಿಸಿದೆ ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಪಿಎಸ್‍ಐ ಕೆ.ಸತೀಶ್‍ನಾಯ್ಕ, ಎನ್.ಗುಡ್ಡಪ್ಪ, ತಳಕು ಪಿಎಸ್‍ಐ ಮೋಹನ್‍ಕುಮಾರ್, ನಾಯಕನಹಟ್ಟಿ ಪಿಎಸ್‍ಐ ರಘುನಾಥ, ಪರಶುರಾಮಪುರ ಪಿಎಸ್‍ಐ ರವಿಕುಮಾರ್, ಪ್ರೊಬೇಷನರಿ ಪಿಎಸ್‍ಐ ಧನಂಜಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








