ರಾಜ್ಯದ 100 ದೇವಾಲಯಗಳಲ್ಲಿ ಸಪ್ತಪದಿ ಕಾರ್ಯಕ್ರಮ

ಬೆಂಗಳೂರು

   ಮೈಸೂರಿನ ಚಾಮುಂಡೇಶ್ವರಿ ದೇವಾಲಯ,ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ,ಮಂಡ್ಯದ ನಿಮಿಷಾಂಬ ದೇವಾಲಯ ಸೇರಿದಂತೆ ರಾಜ್ಯದ ನೂರು ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸರ್ಕಾರಿ ವೆಚ್ಚದಲ್ಲಿ ಏರ್ಪಡಿಸುವ ಸಪ್ತಪದಿ ಕಾರ್ಯಕ್ರಮವನ್ನು ಘೋಷಿಸಲಾಗಿದೆ.

   ವಿಧಾನಸೌಧದಲ್ಲಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮುಜುರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ವಿಷಯ ತಿಳಿಸಿದರಲ್ಲದೆ ಮುಂದಿನ ಮೂರು ತಿಂಗಳಲ್ಲಿ ಸರಳತೆಗೆ ಆದ್ಯತೆ ನೀಡುವ ಸಪ್ತಪದಿ ಯೋಜನೆಯಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆರಂಭವಾಗಲಿದೆ ಎಂದು ಹೇಳಿದರು.

   ಕುಕ್ಕೆ ಸುಬ್ರಮಣ್ಯ ದೇವಾಲಯ,ಬನಶಂಕರಿ ದೇವಾಲಯ,ಘಾಟಿ ಸುಬ್ರಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಎ ದರ್ಜೆ ದೇವಾಲಯಗಳಲ್ಲಿ ಆಯಾ ದೇವಾಲಯಗಳೇ ಸಾಮೂಹಿಕ ವಿವಾಹ ಕಾರ್ಯಕ್ರಮದ ವೆಚ್ಚ ಭರಿಸುತ್ತವೆ.ಅದೇ ರೀತಿ ಕೊಪ್ಪಳ ಸೇರಿದಂತೆ ಐದು ಜಿಲ್ಲೆಗಳಲ್ಲಿ ಎ ದರ್ಜೆಯ ದೇವಾಲಯಗಳಿಲ್ಲ.ಆದರೆ ಬಿ,ಸಿ ದರ್ಜೆಯ ದೇವಾಲಯಗಳಿವೆ.ಇಲ್ಲಿ ಕೂಡಾ ದೇವಾಲಯದ ವತಿಯಿಂದಲೇ ವೆಚ್ಚವನ್ನು ಭರಿಸಲಾಗುತ್ತದೆ.ಒಂದು ವೇಳೆ ಹಣದ ಕೊರತೆ ಇದ್ದರೆ ಸರ್ಕಾರ ಇದಕ್ಕಾಗಿ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

  ವಿವಾಹ ಕಾರ್ಯಕ್ರಮಗಳ ವೆಚ್ಚ ಕೈಗೆಟುಕದ ಮಟ್ಟದಲ್ಲಿವೆ.ಬಡವರು ವಿವಾಹದಂತಹ ಕಾರ್ಯಕ್ರಮಗಳನ್ನು ಸಾಲ,ಸೋಲ ಮಾಡಿ ನಡೆಸಬೇಕಾಗುತ್ತದೆ.ಆದರೆ ಸಪ್ತಪದಿ ಕಾರ್ಯಕ್ರಮದಡಿ ಇಂತಹ ವೆಚ್ಚವನ್ನು ಸರ್ಕಾರವೇ ಭರಿಸುವುದರಿಂದ ಸಮಸ್ಯೆ ಇರುವುದಿಲ್ಲ ಎಂದರು.ಇಂತಹ ಸಾಮೂಹಿಕ ವಿವಾಹಗಳ ಮಾಹಿತಿ ನೀಡಲು ಸುಮಾರು ಹತ್ತು ದೇವಾಲಯಗಳಿಂದ ಪ್ರಚಾರ ರಥವನ್ನು ಹೊರಡಿಸಲಾಗುತ್ತದೆ .ಹಾಗೆಯೇ 18004256654 ಟೋಲ್ ಫ್ರೀ ಸಂಖ್ಯೆಯನ್ನು ಒದಗಿಸಲಾಗಿದ್ದು ಸಾಮೂಹಿಕ ವಿವಾಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪಡೆಯಬಹುದು ಎಂದು ವಿವರಿಸಿದರು.

   ಪ್ರಚಾರರಥಯಾತ್ರೆ ಫೆಬ್ರವರಿ 13 ರಂದು ಕೊಲ್ಲೂರು ದೇವಾಲಯದಲ್ಲಿ ಉದ್ಘಾಟನೆಗೊಂಡು ಆರಂಭವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.ಸಾಮೂಹಿಕ ವಿವಾಹಗಳ ಬಗ್ಗೆ ವ್ಯಾಪಕ ಪ್ರಚಾರ ನೀಡಲು ರಾಜ್ಯಾದ್ಯಂತ ಸುಮಾರು ಏಳುನೂರಾ ಐವತ್ತು ಪ್ರಚಾರ ಫಲಕಗಳು ಹಾಗೂ ಪತ್ರಿಕಾ ಪ್ರಕಟಣೆಯನ್ನು ನೀಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.ಕಂದಾಯ ಇಲಾಖೆಯಲ್ಲಿ ಇಂತಹ ವಿವಾಹಗಳನ್ನು ಉತ್ತೇಜಿಸುವ ಸಲುವಾಗಿ ಹತ್ತು ಸಾವಿರ ರೂಪಾಯಿಗಳನ್ನು ನೀಡುವ ಕಾರ್ಯಕ್ರಮವಿತ್ತು.ಆದರೆ ಅದನ್ನೀಗ ಸಪ್ತಪದಿ ಕಾರ್ಯಕ್ರಮದಲ್ಲಿ ವಿಲೀನಗೊಳಿಸಲಾಗಿದೆ.

   ಕಂದಾಯ ಇಲಾಖೆಯಲ್ಲಿ ಈ ಬಾಬ್ತು ಎರಡು ಕೋಟಿ ರೂಪಾಯಿಗಳಷ್ಟು ಹಣವಿದ್ದು ಅದೀಗ ತಮ್ಮ ಇಲಾಖೆಗೆ ಬರಲಿದ್ದು ಹಾಗೆಯೇ ಪರಿಶಿಷ್ಟ ಜಾತಿ,ಪಂಗಡದವರ ಮದುವೆಯನ್ನು ಉತ್ತೇಜಿಸಲು ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಕಾರ್ಯಕ್ರಮವನ್ನೂ ಮುಜುರಾಯಿ ಇಲಾಖೆಯ ಜತೆ ಸೇರ್ಪಡೆ ಮಾಡಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap