ಬಳ್ಳಾರಿ
ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಅಪರಾಧವಾಗಿದೆ. ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವಜನಿಕರು ಪ್ರಯಾಣಿಸುವುದರಿಂದ ಅಪಘಾತ ಉಂಟಾದ ಸಂದರ್ಭಗಳಲ್ಲಿ ವಿಮಾ ಸೌಲಭ್ಯ ಪಡೆದುಕೊಳ್ಳುವುದು ಕಷ್ಠಕರವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್ ಎಸ್. ಮಲ್ಲೂರ್ ಅವರು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಮತ್ತು ಬಳ್ಳಾರಿಯ ಅತುಲ್ ಫ್ಯಾಷನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಬುಧುವಾರರಂದು ಅತುಲ್ ಫ್ಯಾಷನ್ಸ್ ಗಾರ್ಮೆಂಟ್ಸ್ ನಲ್ಲಿ “ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದನ್ನು ತಡೆಗಟ್ಟುವ ಬಗ್ಗೆ, ಮಹಿಳಾ ಮತ್ತು ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳ ಬಗ್ಗೆ” ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದು ಅಪರಾಧವಾಗಿದೆ ಅಲ್ಲದೆ, ಬಾಲಕಾರ್ಮಿಕರನ್ನು ನೇಮಕ ಮಾಡಿಕೊಂಡ ಮಾಲೀಕರಿಗೆ ಕಾನೂನಿನಲ್ಲಿ 20 ಸಾವಿರ ರೂ.ಗಳಿಂದ 50 ಸಾವಿರ ರೂ.ಗಳವರೆಗೆ ದಂಡ ಅಥವಾ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಇದೆ ವಿಧಿಸಲಾಗುತ್ತದೆ ಎಂದು ಹೇಳಿದ ಅವರು ಸಾರ್ವಜನಿಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಉಚಿತವಾಗಿ ಕಾನೂನು ಸಲಹೆ ಮಾರ್ಗದರ್ಶನ ಮತ್ತು ನೆರವು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಅತುಲ್ ಫ್ಯಾಷನ್ಸ್ ಮಾಲೀಕರಾದ ಪಿ. ಮಹಾವೀರ್ ಅವರು ಅಧ್ಯಕ್ಷತೆ ವಹಿಸಿದರು. ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ ಈಶ್ವರಯ್ಯ ಅವರು ನಿರೂಪಿಸಿದರು. ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ಚಂದ್ರಶೇಖರ್ ಐಲಿ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕರಾದ ಎ.ಮೌನೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ್, ಕಾರ್ಮಿಕ ನಿರೀಕ್ಷಕರಾದ ಎಂ. ರವಿದಾಸ್, ಸಿ.ಎನ್. ರಾಜೇಶ್, ಅತುಲ್ ಫ್ಯಾಷನ್ಸ್ ವ್ಯವಸ್ಥಾಪಕ ಜೆ.ಮೋಹತ್ ಸೇರಿದಂತೆ ಇತರರು ಇದ್ದರು.