ಸಾರಿಗೆ ನೌಕರರಿಗೆ ಕಿರುಕುಳ ನೀಡುವುದು ನಿಲ್ಲಿಸಬೇಕು – ಎಚ್.ಎಸ್.ಮಂಜುನಾಥ್

ತುಮಕೂರು:

     ಕೆಎಸ್‍ಆರ್‍ಟಿಸಿ ಸಂಸ್ಥೆ ಪ್ರಯಾಣಿಕರಿಗೆ ನೀಡುತ್ತಿರುವ ಉತ್ತಮ ಸೇವೆಗೆ ಹಲವು ಪ್ರಶಸ್ತಿಗಳು ಬಂದಿದ್ದರೂ ಸರ್ಕಾರ ಮತ್ತು ಆಡಳಿತ ವರ್ಗ ಸಾರಿಗೆ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಂಜುನಾಥ್ ಒತ್ತಾಯಿಸಿದರು.

      ತುಮಕೂರಿನ ಗಾಂಧೀನಗರದಲ್ಲಿರುವ ಜನಚಳವಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತುಮಕೂರು ವಿಭಾಗದ ಸಾರಿಗೆ ಕಾರ್ಮಿಕರ ಸಮಾವೇಶದಲ್ಲಿ ಮಾತನಾಡಿದರು. ಆಡಳಿತ ವರ್ಗ ನೀಡುತ್ತಿರುವ ಕಿರುಕುಳದಿಂದ ಸಾರಿಗೆ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ.

     ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ಬದಲು ಕಿರುಕುಳ ನೀಡತೊಡಗಿದ್ದಾರೆ. ಪ್ರತಿಹಂತದಲ್ಲೂ ಅಧಿಕಾರಿಗಳಿಗೆ ಲಂಚ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ತವ್ಯದ ವೇಳೆ ಆಗುವ ಸಣ್ಣಪುಟ್ಟ ಪ್ರಕರಣಗಳಿಗೂ ರಜೆ ಪಡೆಯಲು ಹಣ ನೀಡಬೇಕಾಗಿದೆ. ಹೀಗಾಗಿ ನಿಯಮಾನುಸಾರ ಆಡಳಿತ ನಡೆಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.

     ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಂಘದ ಉಪಾಧ್ಯಕ್ಷ ಕೆ. ಪ್ರಕಾಶ್ ಮಾತನಾಡಿ ದಿನವೊಂದಕ್ಕೆ 8-9 ಗಂಟೆ ಹಾಗೂ ವಾರಕ್ಕೆ 45 ರಿಂದ 54 ಗಂಟೆದ ದುಡಿಸಬಾರದು. ಆದರೆ ಬಾರ್ ಡ್ಯೂಟಿ ಹೆಸರಿನಲ್ಲಿ ಎರಡು ದಿನಕ್ಕೆ 35 ಗಂಟೆಗಳಿಗೂ ಅಧಿಕಾವಗಿ ದುಡಿಸಲಾಗುತ್ತಿದೆ. ಫಾರಂ ನಂ.4 ಅನ್ನು ತಯಾರಿಸಲು ಇದ್ದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಗಂಟೆಗೆ ವೇಗದೂತಕ್ಕೆ 40 ಕಿಮೀ. ಸಾಮಾನ್ಯ ವಾಹನಕ್ಕೆ 30 ಕಿಮೀ ನಿಗದಿಪಡಿಸಲಾಗಿತ್ತು. ಈಗ ನಿಯಮ ತಿದ್ದುಪಡಿ ಇಲ್ಲದೆ ಗಂಟೆಗೆ 55, 45 ಕಿಮೀ ಹೆಚ್ಚಳ ಮಾಡಿರುವುದು ನೌಕರರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದರು.

      ಸಾರ್ವಜನಿಕ ಒಪ್ಪಂದಕ್ಕೆ ನೀಡುವ ವಾಹನಗಳಿಗೆ ದಿನಕ್ಕೆ 300 ಕಿಮೀ ಚಲಿಸುವಂತೆ ಗುತ್ತಿಗೆ ನೀಡಲಾಗುತ್ತಿದೆ. ಆದರೆ ದಿನನಿತ್ಯ ಮಾರ್ಗದಲ್ಲಿ ಕೆಲಸ ಮಾಡುವ ಚಾಲನಾ ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡದೆ 24 ಗಂಟೆಗೆ 600-700 ಕಿಲೋ ಮೀಟರ್‍ರವರೆಗೆ ಹೆಚ್ಚುವರಿ ವೇತನ ನೀಡದೆ ದುಡಿಸುತ್ತಿದ್ದಾರೆ, ಇದು ನಿಲ್ಲಬೇಕು. ಕಾರ್ಮಿಕರ ಸಮಸ್ಯೆಗಳು ಎಲ್ಲಾ ಮಟ್ಟದಲ್ಲಿಯೂ ಚರ್ಚೆ ಮಾಡಿ ಬಗೆಹರಿಸುವ ಪ್ರಾಮಾಣಿಕ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವಂತಹ ಬದ್ದತೆಯಿರುವ ಸಿಐಟಿಯು ಸಂಘಟನೆಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು.

        ಸಾರಿಗೆ ನಿಗಮ ನೌಕರರ ಫೆಡರೇಷನ್ ಅಧ್ಯಕ್ಷ ಹೆಚ್.ಡಿ.ರೇವಪ್ಪ ಮಾತನಾಡಿ ಘಟಕಗಳಲ್ಲಿ ಶುದ್ದ ಕುಡಿಯುವ ನೀರು ಮತ್ತು ಕ್ಯಾಂಟಿನ್, ವಿಶ್ರಾಂತಿ ಗೃಹಗಳ ಸೌಲಭ್ಯಕ್ಕಾಗಿ, ರಾತ್ರಿ ತಂಗುವ ಸ್ಥಳಗಳಲ್ಲಿ ವಿಶ್ರಾಂತಿ ಕೊಠಡಿ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಾಹನಗಳಿಗೆ ಅನುಗುಣವಾಗಿ ತಾಂತ್ರಿಕ ಸಿಬ್ಬಂದಿಯ ಅನುಪಾತ ಹೆಚ್ಚಿಸುವುದು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಳಿಗೆ ಹಾಲು ಮತ್ತು ಬ್ರೆಡ್ ವ್ಯವಸ್ಥೆ ಮಾಡಬೇಕು.

        ವಿಭಾಗಮಟ್ಟದಲ್ಲಿ ಅತಿಯಾದ ದಂಡ ಇಂಕ್ರಿಮೆಂಟ್ ಕಡಿತ, ವರ್ಗಾವಣೆ, ಅಮಾನತು ಮತ್ತು ಸಂಸ್ಥೆಯಿಂದ ವಜಾ ಮಾಡುವುದು ನಿಲ್ಲಬೇಕು. ತುಮಕೂರು ವಿಭಾಗದಲ್ಲಿ ಹಲವು ವರ್ಷಗಳಿಂದ ಸಮವಸ್ತ್ರಗಳನ್ನು ನೀಡಿಲ್ಲ. ಆದ್ದರಿಂದ ಕೂಡಲೇ ಸಮವಸ್ತ್ರ ನೀಡಬೇಕು. ನೌಕರರಿಗೆ ಒಂದೇ ದಿನಾಂಕದಂದು ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

      ಸಮಾವೇಶದಲ್ಲಿ ಗೌರವಾಧ್ಯಕ್ಷ ಸೈಯದ್ ಮುಜೀಬ್, ಜಿಲ್ಲಾಧ್ಯಕ್ಷ ಎ.ಆರ್.ದೇವರಾಜ್, ಶಮೀಉಲ್ಲಾ, ಕಾರ್ಮಿಕ ಮುಖಂಡ ಬಿ.ಉಮೇಶ್ ಹಾಜರಿದ್ದರು.

ಪದಾಧಿಕಾರಿಗಳ ಆಯ್ಕೆ:

      ಸಾರಿಗೆ ಕಾರ್ಮಿಕರ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನೌಕರರ ಸಂಘದ ತುಮಕೂರು ವಿಭಾಗದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸೈಯದ್ ಮುಜೀಬ್, ಅಧ್ಯಕ್ಷರಾಗಿ ಎ.ಆರ್. ದೇವರಾಜು, ಉಪಾಧ್ಯಕ್ಷರಾಗಿ ಜಯಕುಮಾರ್, ಮಂಜುನಾಥ್ ಕಲಂದರ್, ಪ್ರಧಾನ ಕಾರ್ಯದರ್ಶಿಯಾಗಿ ಶಮೀಉಲ್ಲ, ಜಂಟಿ ಕಾರ್ಯದರ್ಶಿಯಾಗಿ ನಾಗೇಶ್, ಎಸ್. ರಮೇಶ್, ಗೀತಾ, ಕುಮಾರ್, ಸಂಘಟನಾ ಕಾರ್ಯದರ್ಶಿಗಳಾಗಿ ರಂಗಪ್ಪ, ಧರ್ಮರಾಜ, ವಿಜಯ್‍ಕುಮಾರ್, ಶಶಿಧರ್ ಪಿ, ಖಜಾಂಚಿಯಾಗಿ ಕೆ.ಜಿ.ರಾಜಣ್ಣ ಆಯ್ಕೆಯಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap