ಚಿತ್ರದುರ್ಗ:
ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಸೇರಿದಂತೆ ನಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ರಾಜನಹಳ್ಳಿಯಿಂದ ರಾಜಧಾನಿವರೆಗೆ ಪಾದಯಾತ್ರೆ ನಡೆಸಿ ಕಳೆದ ತಿಂಗಳ 25 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಮಣಿದಿರುವ ರಾಜ್ಯ ಸರ್ಕಾರ ಇನ್ನು ಎರಡು ತಿಂಗಳೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದೆ.
ಒಂದು ವೇಳೆ ನಮ್ಮ ಬೇಡಿಕೆಗಳನ್ನು ಪೂರೈಸದಿದ್ದಲ್ಲಿ ಸೆ.9 ರಂದು ರಾಜನಹಳ್ಳಿ ಮಠದಲ್ಲಿ ನಡೆಯುವ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮುಂದಿನ ಹೋರಾಟದ ನಿರ್ಧಾರ ಕೈಗೊಳ್ಳಲಾಗುವುದು ಇದಕ್ಕೆ ವಾಲ್ಮೀಕಿ ಜನಾಂಗ ಸಿದ್ದರಿರುವಂತೆ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತೊಮ್ಮೆ ರಾಜ್ಯ ಮೈತ್ರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕೋಟೆ ಮುಂಭಾಗವಿರುವ ಮಹಾರಾಣಿ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜನಾಂಗದ ಜಾಗೃತಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಶೇ.7.5 ರಷ್ಟು ಮೀಸಲಾತಿ ಹೆಚ್ಚಳ, ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರಿಗಳ ಹಾಗೂ ಪಡೆದುಕೊಳ್ಳುವವರ ಮೇಲೆ ಶಿಸ್ತು ಕ್ರಮ, ವಿಧಾನಸಭೆಯಲ್ಲಿ ನಮ್ಮ ಜನಾಂಗದ ಹದಿನೈದು ಶಾಸಕರು ಗೆಲ್ಲುವುದರಿಂದ ಕನಿಷ್ಟ ಮೂವರಿಗೆ ಸಚಿವ ಸ್ಥಾನ ನೀಡಬೇಕು, ನಮ್ಮ ಸಮುದಾಯದ ಒಬ್ಬರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡುವುದು, ಐತಿಹಾಸಿಕ ಚಿತ್ರದುರ್ಗದ ಕೋಟೆ ಮೇಲೆ ಪುರಾತತ್ವ ಇಲಾಖೆಯಿಂದ ಮದಕರಿನಾಯಕನ ಕಂಚಿನ ಪ್ರತಿಮೆ ಸ್ಥಾಪಿಸಬೇಕು.
ಚಿತ್ರದುರ್ಗ ಜಿಲ್ಲೆಗೆ ತ್ವರಿತಗತಿಯಲ್ಲಿ ಅಪ್ಪರ್‍ಭದ್ರಾ ಯೋಜನೆ ಜಾರಿಯಾಗಬೇಕು, ರಾಜ್ಯದ ಯಾವುದಾದರೊಂದು ವಿಶ್ವವಿದ್ಯಾನಿಲಯಕ್ಕೆ ಆದಿಕವಿ ಮಹರ್ಷಿ ವಾಲ್ಮೀಕಿ ಹೆಸರನ್ನಿಡಬೇಕೆಂಬ ನಮ್ಮ ಬೇಡಿಕೆ ಈಡೇರಿಕೆಗಾಗಿ ಈಗಾಗಲೆ ನಾಲ್ಕು ಜಿಲ್ಲೆಗಳಲ್ಲಿ ನಾಯಕ ಜನಾಂಗದ ಜಾಗೃತಿ ಸಭೆ ನಡೆಸಿದ್ದು, ಚಿತ್ರದುರ್ಗ ಐದನೆ ಜಿಲ್ಲೆ ಎಂದು ಹೇಳಿದರು.
ನಮ್ಮ ಹೋರಾಟದ ಫಲವಾಗಿ ಸಚಿವ ರಮೇಶ್‍ಜಾರಕಿಹೊಳಿ ಹಾಗೂ ತುಕಾರಾಂ ಇವರುಗಳು ಮೊದಲನೆ ಬಾರಿಗೆ ಕ್ಯಾಬಿನೆಟ್‍ನಲ್ಲಿ ನೋಟ್ ಮಾಡಿಸಿದ್ದಾರೆ. ಮುಖ್ಯಮಂತ್ರಿಗಳು ಆಯೋಗ ರಚಿಸಲು ಶಿಫಾರಸ್ಸು ಮಾಡಿರುವುದು ಹೋರಾಟಕ್ಕೆ ಸಿಕ್ಕ ಫಲ. ರಾಜ್ಯಾದ್ಯಂತ ಜಿಲ್ಲಾವಾರು ಜಾಗೃತಿ ಸಭೆಗಳನ್ನು ನಡೆಸುತ್ತಿದ್ದು, ಕೊಪ್ಪಳ, ಬಳ್ಳಾರಿಯಲ್ಲಿ ಸಭೆ ಮುಗಿಸಿಕೊಂಡು ಮಠಕ್ಕೆ ಹಿಂದಿರುಗುತ್ತೇವೆ.
ಅಷ್ಟರೊಳಗೆ ಸರ್ಕಾರ ಕೇಳಿರುವ ಎರಡು ತಿಂಗಳ ಸಮಯ ಆ.25 ಕ್ಕೆ ಮುಗಿಯುತ್ತದೆ. ಇನ್ನು ಹದಿನೈದು ದಿನಗಳ ಕಾಲವನ್ನು ನಾವೇ ನೀಡಿ ಸೆ.9 ರಂದು ನಡೆಯುವ ರಾಜ್ಯ ಮಟ್ಟದ ಸಭೆಯಲ್ಲಿ ನಿಮ್ಮ ನಿಮ್ಮ ಊರುಗಳಲ್ಲಿ ರಸ್ತೆ ತಡೆ ನಡೆಸುವುದೋ, ತಾಲೂಕು ತಹಶೀಲ್ದಾರ್ ಕಚೇರಿ ಎದುರು ಧರಣಿಯೋ ಇಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸುವುದೋ ಎನ್ನುವ ವಿಚಾರ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದೆಂದರು.
ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ದಿ ನಿಗಮದ ನಿವೃತ್ತ ವ್ಯವಸ್ಥಾಪಕ ಮೃತ್ಯುಂಜಯಪ್ಪ ಮಾತನಾಡಿ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಪರಿಶಿಷ್ಟ ವರ್ಗದ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು ತಡೆಗಟ್ಟಿ ನಕಲಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಸೇರಿದಂತೆ ಶೇ.7.5 ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕೆಂದು ಐದಾರು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ನಮ್ಮ ನೋವನ್ನು ಕೇಳುವವರು ಯಾರು ಇಲ್ಲದಂತಾಗಿದ್ದಾರೆ. ಸರ್ಕಾರ ಮಟ್ಟದಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗಬೇಕು. ಇದಕ್ಕಾಗಿ ನಮ್ಮ ಸ್ವಾಮೀಜಿಗಳು ತೆಗೆದುಕೊಳ್ಳುವ ಎಂತಹ ಹೋರಾಟಕ್ಕೂ ಜನಾಂದವರು ಸಿದ್ದರಾಗಿರಬೇಕು ಎಂದು ಎಚ್ಚರಿಸಿದರು.
ಹೋರಾಟದ ಕಿಚ್ಚನ್ನು ನಮ್ಮ ಯುವ ಜನಾಂಗದಲ್ಲಿ ತುಂಬಬೇಕು. ದೇಶದ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್ ಮಂಡಲ್ ಆಯೋಗ ಜಾರಿಗೆ ತಂದಾಗ ಕೆಲವರು ವಿರೋಧಿಸಿದರೆ ಇನ್ನು ಹಲವರು ಸ್ವಾಗತಿಸಿದರು. ಆರು ದಶಕಗಳ ಹೋರಾಟಕ್ಕೆ ಇನ್ನು ನ್ಯಾಯ ಸಿಕ್ಕಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ದಂಡೆತ್ತಿ ಹೋರಾಡಲು ಸ್ವಾಮೀಜಿಯನ್ನು ಹಿಂಬಾಲಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕೋಣ ಎಂದರು.
ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ನಾಗತಿಹಳ್ಳಿ ತಿಪ್ಪೇಸ್ವಾಮಿ, ಹರ್ತಿಕೋಟೆ ವೀರೇಂದ್ರಸಿಂಹ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಯುವ ನ್ಯಾಯವಾದಿ ಅಶೋಕ್ ಬೆಳಗಟ್ಟ, ನಗರಸಭಾ ಸದಸ್ಯ ವೆಂಕಟೇಶ್, ಎಲ್.ಐ.ಸಿ.ತಿಪ್ಪೇಸ್ವಾಮಿ, ಸರ್ವೆ ಬೋರಣ್ಣ, ಸ್ವಪ್ನ, ಜಯಲಕ್ಷ್ಮಿ ಕಾಲುವೆಹಳ್ಳಿ, ಮಧುಪಾಲೇಗೌಡ, ಗೌರಿ ರಾಜ್‍ಕುಮಾರ್, ಮಾಜಿ ನಗರಸಭೆ ಸದಸ್ಯರುಗಳಾದ ರಾಜೇಶ್, ತಿಪ್ಪೇಸ್ವಾಮಿ, ಪ್ರಶಾಂತ್‍ಕುಮಾರ್, ಹೊಸಹಳ್ಳಿ ರಾಜಣ್ಣ, ಸೋಮೇಂದ್ರ, ಸಿರಿಗೆರೆ ತಿಪ್ಪೇಸ್ವಾಮಿ, ಬಾಲೇನಹಳ್ಳಿ ತಿಪ್ಪೇಸ್ವಾಮಿ. ಸೌಭಾಗ್ಯ ತಿಪ್ಪೇಸ್ವಾಮಿ ಸೇರಿದಂತೆ ನಾಯಕ ಸಮಾಜದ ಅನೇಕರು ಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
