ಶಿರಾ
ಶಿರಾ-ಮದಲೂರು ಕೆರೆಗೆ ಹೇಮೆ ನೀರು ಹರಿಯದಿರಲು ಆಡಳಿತದ ಚುಕ್ಕಾಣಿ ಹಿಡಿದವರೆ ಕಾರಣ. ಮದಲೂರು ಕೆರೆಗೆ 0.4 ಟಿಎಂಸಿ ನೀರು ಹರಿಸಲು ಕಾಂಗ್ರೆಸ್ ಸರ್ಕಾರವಿದ್ದ ಅವಧಿಯಲ್ಲಿ ಅಲೋಕೇಶನ್ ಮಾಡಿಸಿದ್ದೇನೆ. ಆದರೆ ಅಧಿಕಾರಿಗಳು ನಮ್ಮ ಪಾಲಿನ ನೀರನ್ನು ಬಿಡುತ್ತಿಲ್ಲ. ತುಮಕೂರು ಜಿಲ್ಲೆಗೆ 25 ಟಿಎಂಸಿ, ಹಾಸನಕ್ಕೆ 20 ಟಿಎಂಸಿ ನೀರು ನಿಗದಿಯಾಗಿದೆ. ಮೊನ್ನೆ ಮಳೆ ಬಂದ ಸಂದರ್ಭದಲ್ಲಿ ಗೊರೂರು ಹೇಮಾವತಿ ಜಲಾಶಯದಲ್ಲಿ 109 ಟಿಎಂಸಿ ನೀರು ಸಂಗ್ರಹವಾಗಿತ್ತು. ಇದರಲ್ಲಿ ಬಳಕೆಯಾಗಿದ್ದು ಕೇವಲ 40 ಟಿಎಂಸಿ ನೀರು ಮಾತ್ರ.
ಹಾಸನ ಜಿಲ್ಲೆಗೆ 40 ಟಿಎಂಸಿ ನೀರು ಬಿಟ್ಟಿದ್ದೇವೆ ಅಂತ ಹೇಳ್ತಾರೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ನೀಡುವಂತಹ ಅಧಿಕಾರಿಗಳನ್ನು ಇಟ್ಟು ಕೊಂಡು ಹೇಗೆ ಅಧಿಕಾರ ನಡೆಸುತ್ತಿರಿ? ಎಂದು ಸರ್ಕಾರದ ವಿರುದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಿಡಿ ಕಾರಿದರು.
ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದ ಐತಿಹಾಸಿಕ ಪ್ರಸಿದ್ಧ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು 18 ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡ್ಯಾಂನಿಂದ ಸಮುದ್ರಕ್ಕೆ ವ್ಯರ್ಥವಾಗಿ ನೀರು ಹರಿದು ಹೋಯಿತು. ಆದರೆ ನೀರನ್ನು ಮಾತ್ರ ತುಮಕೂರು ನಾಲೆಗೆ ಬಿಡಲಿಲ್ಲ. ಆಡಳಿತದ ಚುಕ್ಕಾಣಿ ಹಿಡಿದವರ ಸ್ವಂತ ಜಿಲ್ಲೆ ಹಾಸನದ 400 ಕೆರೆಗಳಿಗೆ ನೀರು ಹರಿಸಿ ಕೊಂಡಿದ್ದಾರೆ ಎಂದು ಆರೋಪಿಸಿದ ಮಾಜಿ ಸಚಿವ ಜಯಚಂದ್ರ, ತುಮಕೂರು ಜಿಲ್ಲೆ ಮತ್ತು ಶಿರಾ ತಾಲ್ಲೂಕಿನ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ಶಿರಾ ನಾಲೆಯಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿರುವ ಕಾರಣ, ಮದಲೂರು ಕೆರೆಗೆ ನೀರು ಬಿಡಲು ಸಾಧ್ಯವಾಗುತ್ತಿಲ್ಲ ಎಂಬ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್. ಶ್ರೀನಿವಾಸ್ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದರು. 116 ಕೋಟಿ ರೂಪಾಯಿ ಅನುದಾನ ಖರ್ಚು ಮಾಡಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿರುವ ಕಾರಣ, ಶಿರಾ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಕಂಡಿದೆ. ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾರ್ಮಿಕ ಸಚಿವ ವೆಂಕಟರವಣಪ್ಪ, ರೈತ ತಾನು ಬೆಳೆದಂತಹ ಬೆಳೆಗೆ ತಾನೆ ಬೆಲೆ ನಿಗದಿ ಮಾಡುವಂತಾದಾಗ ಮಾತ್ರ ಅನ್ನದಾತನ ಆರ್ಥಿಕ ಸುಧಾರಣೆ ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಆಹಾರ ಕೊರತೆ ಎದುರಾಗುವ ಅಪಾಯವಿದೆ. ಯಾವುದೇ ಸ್ವಾರ್ಥವಿಲ್ಲದೆ ಸೇವೆ ಮಾಡುತ್ತಿರುವ ಸೇವೆ ಜನ ಮೆಚ್ಚುವಂತಾದ್ದು ಎಂದರು.
ಶ್ರೀ ಸ್ಪಟಿಕ ಪುರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ರೈತ ಆಧುನಿಕ ಕೃಷಿಯತ್ತ ಮುಖ ಮಾಡುವ ಅವಶ್ಯಕತೆ ಇದೆ. ನೂತನ ತಾಂತ್ರಿಕತೆ, ಕಡಿಮೆ ನೀರಿನ ಪ್ರಮಾಣದಲ್ಲಿ ಹೆಚ್ಚು ಲಾಭ ನೀಡುವಂತಹ ಬೆಳೆ ಬಗ್ಗೆ ಇಂತಹ ಕೃಷಿ ವಸ್ತು ಪ್ರದರ್ಶನದಲ್ಲಿ ಮಾಹಿತಿ ಪಡೆದು ಬದಲಾವಣೆಯಾಗಬೇಕು. ಹಾಗಾದರೆ ಶ್ರೀಮಠದ ರೈತಪರ ನಿಲುವು ಸಾರ್ಥಕವೆನಿಸುತ್ತದೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಅನುಷ್ಠಾನಗೊಳಿಸುತ್ತಿರುವ ಅಪ್ಪರ್ ಭದ್ರ್ರಾ ಯೋಜನೆ ಜಾರಿಯಾದರೆ ಶಿರಾ, ಪಾವಗಡ, ಚಿಕ್ಕನಾಯಕನಹಳ್ಳಿ ಸೇರಿದಂತೆ ಹಲವಾರು ತಾಲ್ಲೂಕುಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ. ಸರ್ಕಾರ ತ್ವರಿತಗತಿಯಲ್ಲಿ ಅಪ್ಪರ್ ಭದ್ರಾ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದರು.
ಉತ್ತಮ ರಾಸುಗಳಿಗೆ ಸಂಸದ ಚಂದ್ರಪ್ಪ ಬಹುಮಾನ ವಿತರಣೆ ಮಾಡಿದರೆ, ಉತ್ತಮ ಮಳಿಗೆ ಮತ್ತು ಆರೋಗ್ಯವಂತ ಮಕ್ಕಳಿಗೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣ ಸ್ವಾಮಿ ಬಹುಮಾನ ವಿತರಣೆ ಮಾಡಿದರು.ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಕಲ್ಕೆರೆ ರವಿಕುಮಾರ್, ಜಿಪಂ ಸದಸ್ಯೆ ಗಿರಿಜಮ್ಮ ಶ್ರೀರಂಗಯಾದವ್, ಜಿಪಂ ಪಿಡಿ ಮಾಂಕಾಳಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಎಪಿಎಂಸಿ ಅಧ್ಯಕ್ಷ ನರಸಿಂಹೆಗೌಡ, ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಮೋಹನ್ ಕುಮಾರ್, ಹೆಂದೊರೆ ಗ್ರಾಪಂ ಅಧ್ಯಕ್ಷೆ ಮಂಜುಳಾ ರಾಜಣ್ಣ, ತಾಪಂ ಸದಸ್ಯ ಕೆ.ಎಂ.ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ