ಕೂಡ್ಲಿಗಿ:
ಮುಖ್ಯ ಮಂತ್ರಿ ಕುಮಾರ ಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ನಿರಂತರವಾಗಿ ಷಡ್ಯಂತ್ರ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ಎನ್.ಎಂ. ನಬೀ ಆರೋಪಿಸಿದರು. ಜೆಡಿಎಸ್ ಹಿರಿಯ ಉಪಾಧ್ಯಕ್ಷರಾಗಿ ನೇಮಕವಾದ ಎನ್.ಎಂ. ನಬೀ ಹಾಗೂ ಯುವ ಘಟಕದ ಕಾರ್ಯಧ್ಯಕ್ಷರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಪಟ್ಟಣಕ್ಕೆ ಬಂದ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಮದಕರಿ ವೃತ್ತದ್ದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಮಾರಸ್ವಾಮಿ ಅವರು ಅಕಸ್ಮಿಕವಾಗಿ ಮುಖ್ಯಮಂತ್ರಿಯಾದವರು, ಕಾಂಗ್ರೆಸ್‍ನವರು ನೀವೇ ಮುಖ್ಯ ಮಂತ್ರಿಯಾಗಿ ಎಂದು ಬೆಂಬಲ ನೀಡಿದ್ದು, ಅಲ್ಲಿಂದ ಇಲ್ಲಿಯವರೆಗೂ ಸರ್ಕಾರವನ್ನು ಅಸ್ಥಿರಗೊಳಿಸಲು ಸತತ ಪ್ರಯತ್ನ ನಡೆದೇ ಇದೆ. ಆದರೂ ಅವರು ಇದಕ್ಕೆಲ್ಲ ಬಗ್ಗದೆ ರಾಜ್ಯದ ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಸಾಗಿದ್ದಾರೆ. ಕುಮಾರ ಸ್ವಾಮಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಿ, ರೈತರು ಹಾಗೂ ಯುವ ಜನರ ಪರವಾಗಿ ಕೆಲಸ ಮಾಡುವುದಾಗಿ ಹೇಳಿದರು.
ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ಎನ್.ಎಂ. ನೂರ್ ಆಹಮದ್ ಮಾತನಾಡಿ, ಪಟ್ಟಣ ಪಂಚಾಯ್ತಿ ಸದಸ್ಯನಾದ ನನ್ನನ್ನು ಗುರುತಿಸಿರುವ ದೇವೇಗೌಡರು ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ಸ್ಥಾನ ನೀಡುವ ಮೂಲಕ ಹೆಚ್ಚಿನ ಜವಬ್ದಾರಿಯನ್ನು ವಹಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ್ಯಾಂತ ಪಕ್ಷ ಸಂಘಟನೆ ಮಾಡುವ ಮೂಲಕ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಪ್ರಯತ್ನ ನಡೆಸಲಾಗುವುದು. ಮುಂಬರುವ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಕನಿಷ್ಟ 18 ಸ್ಥಾನಗಳನ್ನು ಗೆಲ್ಲಿಸಲು ಈಗಿನಿಂದಲೇ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಲೋಕೇಶ್ ನಾಯಕ ಅವರನ್ನು ಬೆಂಬಲಿಸಿದೆವು. ಆದರೆ ಅವರು ಕೈಕೊಟ್ಟು ಹೋದರು. ಅವರ ಬದಲು ಎನ್.ಟಿ. ಬೊಮ್ಮಣ್ಣ ಅವರನ್ನು ಬೆಂಬಲಿಸಿದ್ದರೆ ಅವರು ಗೆದ್ದು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿದ್ದವು. ಮುಂದಿನ ಚುನಾವಣೆಯಲ್ಲಿ ಎನ್.ಟಿ. ಬೊಮ್ಮಣ್ಣ ಅಥವಾ ಎನ್.ಟಿ. ಶ್ರೀನಿವಾಸ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದರೆ ಅವರ ಗೆಲುವಿಗೆ ತಮ್ಮ ತಂದೆ ಸೇರಿದಂತೆ ಎಲ್ಲರು ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಎನ್.ಟಿ. ಬೊಮ್ಮಣ್ಣ ಮಾತನಾಡಿದರು. ಗುತ್ತಿಗೆದಾರ ಎನ್.ಟಿ. ತಮ್ಮಣ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಜಿ. ಕಾರಪ್ಪ, ಪಟ್ಟಣ ಪಂಚಾಯ್ತಿ ಸದಸ್ಯ ತಳಾಸ ವೆಂಕಟೇಶ್, ಜೆಡಿಎಸ್ ಯುವ ಮುಖಂಡ ಕೆ. ಈಶಪ್ಪ, ಉಜ್ಜಿನಿ ರಂಗಪ್ಪ, ಕುಮಾರಸ್ವಾಮಿ, ರಾಘವೇಂದ್ರ, ರಫಿ, ಅಜ್ಜಯ್ಯ, ವಿನೋದ್ ಕಲಾಲ್, ಶೇಕ್ಷವಲಿ ಸೇರಿದ್‍ಂತೆ ಅನೇಕರು ಇದ್ದರು.
ಇದಕ್ಕೂ ಮೊದಲು ಬೆಂಗಳೂರಿನಿಂದ ಕೂಡ್ಲಿಗಿಗೆ ಬಂದ ಎನ್.ಎಂ. ನಬೀ ಹಾಗೂ ನೂರ್ ಆಮಹದ್ ಅವರನ್ನು ಪಾದಗಟ್ಟೆ ಬಳಿ ಪಟಾಕಿ ಸಿಡಿಸಿ ಸ್ವಾಗತಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬೈಕ್ ಜಾಥಾದ ಮುಖಾಂತರ ವೇದಿಕೆಗೆ ಕರೆ ತಂದರು.